ಶಿವಮೊಗ್ಗ: ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ 30 ಹಾಸಿಗೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಹೊಂದಿರುವ ನವಜಾತ ಶಿಶುಗಳ ವಿಶೇಷ ಕಾಳಜಿಗಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಘಟಕ ಆರಂಭಿಸಲಾಗುವುದು. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹5 ಕೋಟಿ ಮಂಜೂರು ಮಾಡಿದ್ದಾರೆ ಎಂದರು.


ರಾಘವೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
1 ‘ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾದಂತೆ ಎನ್‌ಐಸಿಯು ಮೇಲಿನ ಒತ್ತಡವೂ ನಿರಂತರವಾಗಿ ಹೆಚ್ಚುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಈ ಬೇಡಿಕೆಗೆ ಸ್ಪಂದಿಸಿ ಅನುದಾನ ಮಂಜೂರು ಮಾಡಿದ್ದಾರೆ.’
ಇದನ್ನೂ ಓದಿ : ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?
2 ‘ಇನ್‌ಕ್ಯುಬೇಟರ್, ವೆಂಟಿಲೇಟರ್‌ಗಳು, ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಮುಂತಾದ ಸುಧಾರಿತ ಉಪಕರಣಗಳನ್ನು ಬಳಸಿ ಮಗುವಿನ ದೇಹದ ಉಷ್ಣತೆ, ಉಸಿರಾಟ ಮತ್ತು ಆರೋಗ್ಯವನ್ನು ನಿರ್ವಹಿಸಬಹುದು. 24X7 ನಿಗಾ ಇಡುವುದರೊಂದಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ’ ಎಂದರು.

3 ‘ಆರ್‌ಡಿಪಿಆರ್ ವತಿಯಿಂದ ಕಾಮಗಾರಿ ಕೈಗೊಳ್ಳಲಾಗುತ್ತದೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ₹4.40 ಕೋಟಿ ಮೊತ್ತದ ಉಪಕರಣ ಖರೀದಿಸಲಾಗುತ್ತದೆ. ಉಳಿದ ₹60 ಲಕ್ಷ ಮೊತ್ತವನ್ನು ಮೂಲಸೌಲಭ್ಯಕ್ಕಾಗಿ ಮಂಜೂರು ಮಾಡಲಾಗಿದೆ. ನೂತನ ಎನ್‌ಐಸಿಯು ಸ್ಥಾಪನೆಯಿಂದ ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ’.
4 ‘ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ₹60 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ವಾರ್ಡ್ ನಿರ್ಮಾಣ ಮಾಡಲಾಗುತ್ತಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಲಿದೆ’.
ಅತ್ಯಾಧುನಿಕ ಬ್ರೈಲ್ ಕಲಿಕಾ ಸಾಧನ
“ಜಿಲ್ಲೆಯ ದೃಷ್ಟಿ ವಿಶೇಷಚೇತನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಭಾರತೀಯ ಸೌರಶಕ್ತಿ ನಿಗಮದಿಂದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ನಗರದ ಶಾರದಾದೇವಿ ಅಂಧರ ವಸತಿ ಶಾಲೆ ವಿದ್ಯಾರ್ಥಿಗಳಿಗೆ ₹23 ಲಕ್ಷ ಮೊತ್ತದ ಅತ್ಯಾಧುನಿಕ ಬ್ರೈಲ್ ಕಲಿಕಾ ಸಾಧನಗಳನ್ನು ಒದಗಿಸಲಾಗುತ್ತಿದೆ” ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಗೀತಾ, ಡಿಎಚ್‌ಒ ಡಾ.ನಟರಾಜ್, ಸಿಮ್ಸ್ ಸಿಎಒ ಉಮಾ ಸದಾಶಿವ ಇತರರಿದ್ದರು.



