ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಫೆಬ್ರವರಿ 2022
ಅವಳಿ ನಗರದ ಅಭಿವೃದ್ಧಿಗೆ ರಾಜಮಾರ್ಗದಂತಿದ್ದ ಶಿವಮೊಗ್ಗ-ಭದ್ರಾವತಿ ರಾಷ್ಟ್ರೀಯ ಹೆದ್ದಾರಿ ದಶಕದಿಂದ ತೇಪೆ ಭಾಗ್ಯಕ್ಕೆ ಸೀಮಿತವಾಗಿದೆ. ಕೊರಕಲು, ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಿದೆ.
ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಬಾರಿ ಸಿಎಂ ಆದ ಅವಧಿಯಲ್ಲಿ ವ್ಯಾಪಾರ, ವಹಿವಾಟು, ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಹೋಗಿಬರುವವರಿಗೆ, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಶಿವಮೊಗ್ಗ-ಭದ್ರಾವತಿ ರಸ್ತೆಯನ್ನು ಚತುಷ್ಪಥಗೊಳಿಸಿ ಅಭಿವೃದ್ಧಿಗೊಳಿಸಿದರು. ಇದರಿಂದ ಶಿವಮೊಗ್ಗ ಭದ್ರಾವತಿ ನಡುವೆ ಅನೇಕ ಕೈಗಾರಿಕೆಗಳು ತಲೆ ಎತ್ತಿದವು. ಪ್ರತಿದಿನ ಸಾವಿರಾರು ಜನರು ವೃತ್ತಿ ನಿಮಿತ್ತ ಈ ರಸ್ತೆಯಲ್ಲೇ ಓಡಾಡುತ್ತಾರೆ.
ಹುಬ್ಬಳಿ, ಕಾರವಾರ, ಗೋವಾ ಹೋಗಬೇಕಾದವರು, ಬೆಂಗಳೂರು, ಮೈಸೂರು ಕಡೆ ಹೋಗಬೇಕಾದವರು ಇದೇ ರಸ್ತೆಯಲ್ಲೆ ಓಡಾಡಬೇಕು. ಪ್ರತಿ ದಿನ ಸಾವಿರಾರು ಜನ, ವಾಹನ ಓಡಾಡುವ ಈ ರಸ್ತೆ ಅಭಿವೃದ್ಧಿ ಕಂಡು ದಶಕ ಕಳೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ವರ್ಷದಿಂದ ತೇಪೆ ಹಾಕಿದ್ದು ಬಿಟ್ಟರೆ ಅಭಿವೃದ್ಧಿ ಮಾಡುವ ಗೋಜಿಗೆ ಹೋಗಿಲ್ಲ.
ಕೇವಲ ತೇಪೆ ತೇಪೆ
ಒಂದು ಕಾಲದಲ್ಲಿ ಶಿವಮೊಗ್ಗ-ಭದ್ರಾವತಿ ನಡುವೆ ಓಡಾಡುವುದು ಶಿಕ್ಷೆಯಂತಿತ್ತು. ಆ ಕಾಲ ಈಗ ಮರುಕಳಿಸಿದೆ. 2010ರ ಸುಮಾರಿಗೆ 16 ಕಿ.ಮೀ ಸಿಂಗಲ್ ರಸ್ತೆಯನ್ನು ಅಭಿವೃದ್ದಿಪಡಿಸಲಾಯಿತು. ಎಂಆರ್‌ಎಸ್ ಸರ್ಕಲ್‌ನಿಂದ ಭದ್ರಾವತಿ ಬೈಪಾಸ್‌ವರೆಗೆ ಚತುಷ್ಪಥ ಮಾಡಲಾಯಿತು. ಅಲ್ಲಿಂದ ಮೂರ್ನಾಲ್ಕು ವರ್ಷ ಸಂಚಾರ ಸರಳವಾಗಿತ್ತು. ವಾಹನಗಳ ಆಯಸ್ಸು ಕೂಡ ವೃದ್ಧಿಯಾಗಿತ್ತು. ನಂತರ ಯಾವುದೇ ರೀತಿಯ ಡಾಂಬರೀಕರಣ ನಡೆದಿಲ್ಲ. ನಾಲ್ಕು ವರ್ಷದಿಂದ ಮಳೆ ಹೆಚ್ಚಾಗಿರುವ ಹಿನ್ನೆಲೆ ರಸ್ತೆ ಗುಂಡಿ ಬಿದ್ದಿದೆ. ಅದಕ್ಕೆ ತೇಪೆ ಹಾಕಿ ಹಾಕಿ ರಸ್ತೆ ನೋಡಿದರೆ ತೇಪೆಗಳೇ ಕಾಣುತ್ತವೆ.
ಬರೀ ಕುಂಟು ನೆಪ
ರಸ್ತೆ ಡಾಂಬರೀಕರಣದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ ‘ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡಿದ್ದು ಪ್ಯಾಕೇಜ್ 4ರ ಟೆಂಡರ್ ಪಡೆದವರು ಉತ್ತಮ ದರ್ಜೆ ರಸ್ತೆ ಮಾಡಲಿದ್ದಾರೆ. ಅಲ್ಲಿವರೆಗೂ ಕಾಯಬೇಕು’ ಎನ್ನುತ್ತಾರೆ. ಪ್ಯಾಕೇಜ್ 4ರ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಕಾನೂನು ತೊಡಕುಗಳು ಇರುವುದರಿಂದ ಅವೆಲ್ಲ ತಕ್ಷಣದಲ್ಲೇ ಬಗೆಹರಿಯುವುದು ಕಷ್ಟ. ಶಿವಮೊಗ್ಗ-ಭದ್ರಾವತಿ ನಡುವೆ ಈಗಿರುವ ಚತುಷ್ಪಥ ರಸ್ತೆಯನ್ನೇ ಅಭಿವೃದ್ಧಿ ಮಾಡಿ ಹೆಚ್ಚುವರಿಯಾಗಿ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ. ಈಗಿರುವ ಚತುಷ್ಪಥ ರಸ್ತೆ ವಿನ್ಯಾಸದಲ್ಲಿ, ಮಾರ್ಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅದ್ಯಾಗೂ ತೇಪೆ ಹಾಕುವುದೇ ಕಾಯಕವಾಗಿದೆ. ಇನ್ನೆಷ್ಟು ವರ್ಷ ವಾಹನ ಸವಾರರು ಕಾಯಬೇಕು ಎಂಬುದು ಸಾರ್ವಜನಿಕರ ಆಕ್ರೋಶ.
ಬೈಕ್ ಸವಾರರಿಗೆ ಸವಾಲು
ಈಗಿರುವ ತೇಪೆ ರಸ್ತೆಯು ಲಾರಿ, ಬಸ್‌ಗಳಿಗಿಂತ ಕಾರು, ಬೈಕ್‌ನವರಿಗೆ ನರಕ ತೋರಿಸುತ್ತಿದೆ. ರಸ್ತೆಯ ಯಾವ ಬದಿ ಹೋದರೂ ತೇಪೆ, ಗುಂಡಿ ಸಿಗುತ್ತದೆ. ನಿಧಾನ ಮಾಡಲು ಹೋದರೆ ಹಿಂದೆಯಿಂದ ಯಮರೂಪಿ ಲಾರಿ, ಬಸ್‌ಗಳು ಮೈಮೇಲೆ ಬರುತ್ತವೆ. ಗುಂಡಿ ತಪ್ಪಿಸಲು ಹೋಗಿ ಮಾಚೇನಹಳ್ಳಿ, ಡೈರಿ ಬಳಿ ಹತ್ತಾರು ಅಪಘಾತಗಳು ಸಂಭವಿಸಿವೆ.
ಹಂಪ್’ಗಳ ತವರು
ಶಿವಮೊಗ್ಗ-ಭದ್ರಾವತಿ ನಡುವಿನ 16 ಕಿ.ಮೀ ರಸ್ತೆಯಲ್ಲಿ ಎರಡು ಬದಿಯಲ್ಲಿ ತಲಾ 5 ಕಡೆ ಹಂಪ್ ಸಿಗುತ್ತವೆ. ರಸ್ತೆ ಹಾಳಾಗಿದ್ದರೂ ಹಂಪ್’ಗಳು ಭದ್ರವಾಗಿವೆ. ಗುಂಡಿ ತಪ್ಪಿಸಿ ಸುಸ್ತಾದ ರೈಡರ್‌ಗಳಿಗೆ ಹಂಪ್’ಗಳು ಎದುರಾಗುತ್ತವೆ. ಎಲ್ಲ ಹಂಪ್’ಗಳು ಅವೈಜ್ಞಾನಿಕವಾಗಿ ಮಾಡಿರುವುದು ಮತ್ತೊಂದು ಎಡವಟ್ಟು. ಹಂಪ್ ಗಳು ಹೇಗೆ ಇರಬೇಕೆಂದು ಸ್ಪಷ್ಟ ನಿರ್ದೇಶನ ಇಲ್ಲದಿದ್ದರೂ ಬೇಕಾಬಿಟ್ಟಿಯಾಗಿ, ದೀರ್ಘವಾಗಿ ಹಾಕಲಾಗಿದೆ.
ಶಿವಮೊಗ್ಗ-ಭದ್ರಾವತಿ ಹೆದ್ದಾರಿಯನ್ನು ಸಂಪೂರ್ಣವಾಗಿ ರಿಪೇರಿ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
ಇದನ್ನೂ ಓದಿ | ತುಂಗಾ ನದಿ ಸೇತುವೆ ಮೇಲೆ ಇನ್ನೆಷ್ಟು ಜನರ ಬಲಿಗಾಗಿ ಕಾಯುತ್ತಿದ್ದಾರೆ ಅಧಿಕಾರಿಗಳು? | ದೂರು ದುಮ್ಮಾನ
About Shivamogga Live | Shimoga District Profile | Shivamogga Live Whats App Number 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422