ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಡಿಸೆಂಬರ್ 2021
ಘಟನೆ 1 – 30 ಡಿಸೆಂಬರ್ 2021
ರಸ್ತೆ ದಾಟುತ್ತಿದ್ದ ಅಬ್ದುಲ್ ರಶೀದ್ (70) ಅವರಿಗೆ KSRTC ಬಸ್ ಡಿಕ್ಕಿ ಹೊಡೆಯಿತು. ತಲೆ ಭಾಗಕ್ಕೆ ಗಂಭೀರ ಹೊಡೆತ ಬಿದ್ದಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಜನ ರೊಚ್ಚಿಗೆದ್ದು ರಾತ್ರಿಯೇ ಬಸ್ ತಡೆದು ಪ್ರತಿಭಟನೆ ಮಾಡಿದರು.
![]() |
ಘಟನೆ 2 – ಸೆಪ್ಟೆಂಬರ್ 2021
ಬಸ್ ಇಳಿದು ರಸ್ತೆ ದಾಟಿ ನಂಜಪ್ಪ ಲೇಔಟ್’ನಲ್ಲಿರುವ ಮನೆಗೆ ತೆರಳುತ್ತಿದ್ದ ಶಿಕ್ಷಕ ರಾಜೀವ್ ಅವರಿಗೆ ಬೈಕ್ ಡಿಕ್ಕಿಯಾಯಿತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೀವ್ ಮೃತರಾದರು. ಜೊತೆಗಿದ್ದ ಮಗ ವತ್ಸ (6) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.
ಹೀಗೆ, ಶಿವಮೊಗ್ಗ ಬೈಪಾಸ್ ರಸ್ತೆ ನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೊ ಮಂದಿ ಅಪಘಾತದ ನೋವಿನಲ್ಲೆ ನರಳುತ್ತಿದ್ದಾರೆ.
ಜನ, ವಾಹನ ದಟ್ಟಣೆ ಹೆಚ್ಚು
ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಜ್ಯೋತಿ ನಗರ, ನಂಜಪ್ಪ ಲೇಔಟ್, ಊರುಗಡೂರು, ವಾದಿ-ಎ-ಹುದಾ ಸೇರಿದಂತೆ ವಿವಿಧ ಬಡಾವಣೆಗಳಿವೆ. ಇಲ್ಲಿಯ ನಿವಾಸಿಗಳು ಬೈಪಾಸ್ ರಸ್ತೆಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇನ್ನು, ಅಂತರ ಜಿಲ್ಲೆ KSRTC ಬಸ್ಸುಗಳು, ಲಾರಿಗಳೆಲ್ಲವು ಇದೆ ಮಾರ್ಗವಾಗಿ ನಗರ ಪ್ರವೇಶಿಸುತ್ತವೆ. ಹಾಗಾಗಿ ಬೈಪಾಸ್ ರಸ್ತೆಯಲ್ಲಿ ಜನ ದಟ್ಟಣೆಯು ಹೆಚ್ಚು, ವಾಹನಗಳ ಸಂಖ್ಯೆಯು ಹೆಚ್ಚು. ಈ ಬೈಪಾಸ್ ರಸ್ತೆಗೆ ಪ್ರವೇಶ ಪಡೆಯುತ್ತಿದ್ದಂತೆ, ವಾಹನಗಳ ವೇಗಕ್ಕೆ ಲಗಾಮು ಇಲ್ಲವಾಗುತ್ತದೆ. ಇದೆ ಕಾರಣಕ್ಕೆ ಅಪಘಾತ ಸಂಭವಿಸುತ್ತಿವೆ. ಹಾಗಾಗಿ ಬೈಪಾಸ್ ರಸ್ತೆ ಅಂದರೆ ಆತಂಕ ಪಡುವಂತಾಗಿದೆ.
ಅಕ್ಕಪಕ್ಕದಲ್ಲಿ ಶಾಲೆ, ಕಾಲೇಜುಗಳಿವೆ
ಎಂ.ಆರ್.ಎಸ್ ಸರ್ಕಲ್ ಮತ್ತು ಎನ್.ಟಿ.ರಸ್ತೆ ಮಧ್ಯೆ ಬೈಪಾಸ್ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಅಕ್ಕಪಕ್ಕದಲ್ಲಿ ಕೆಲವು ಶಾಲೆ, ಕಾಲೇಜುಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಸೇರಿದಂತೆ ಹಲವು ಪ್ರಭಾವಿಗಳ ಆಸ್ತಿ, ಉದ್ಯಮ, ಸಂಸ್ಥೆಗಳು ಇಲ್ಲಿವೆ. ಗ್ಯಾರೇಜುಗಳು, ವಿವಿಧ ಅಂಗಡಿ, ಮಳಿಗೆಗಳು ಕೂಡ ರಸ್ತೆಯ ಅಕ್ಕಪಕ್ಕದಲ್ಲಿವೆ. ಹಾಗಾಗಿ ನಿತ್ಯ ವಿದ್ಯಾರ್ಥಿಗಳು, ಜನ ಸಂಚಾರ ಇರುತ್ತದೆ.
ಏನಂತಾರೆ ಇಲ್ಲಿಯ ಜನ?
‘ದೊಡ್ಡ ದೊಡ್ಡ ವಾಹನಗಳು ಅತಿ ವೇಗವಾಗಿ ಹೋಗುವುದರಿಂದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯವಾಗುತ್ತದೆ. ತುಂಬಾ ವೇಗವಾಗಿರುವಾಗಲೆ ಓವರ್ ಟೇಟ್ ಮಾಡುತ್ತಾರೆ. ಇಂತಹ ಸಂದರ್ಭ ಸ್ವಲ್ಪ ಯಾಮಾರಿದರೂ ಸಾವು, ನೋವು ಉಂಟಾಗುತ್ತದೆ’ ಅನ್ನುತ್ತಾರೆ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುವ ಇಮ್ತಿಯಾಜ್.
‘ಶಾಲೆ ಮಕ್ಕಳನ್ನು ಕರೆದುಕೊಂಡು ಬಂದಾಗ ಮತ್ತು ಕರೆದೊಯ್ಯುವಾಗ ರಸ್ತೆ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆಗ ತುಂಬಾ ಆತಂಕವಾಗುತ್ತದೆ. ಶಾಲಾ ಮಕ್ಕಳನ್ನು ಕಂಡರೂ ದೊಡ್ಡ ದೊಡ್ಡ ವಾಹನಗಳ ವೇಗ ಕಡಿಮೆಯಾಗುವುದಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ಅನ್ನುವ ಭಯ ಯಾವಾಗಲೂ ಇರುತ್ತದೆ’ ಅನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಣ ಸಂಸ್ಥೆಯೊಂದರ ಸೆಕ್ಯೂರಿಟಿ.
ಬೈಪಾಸ್ ರಸ್ತೆಗೆ ಬೆಳಕು ಬೇಕು
ದಿನದ 24 ಗಂಟೆಯೂ ವಾಹನ ಸಂಚಾರ ಇರುವ ಬೈಪಾಸ್ ರಸ್ತೆಯಲ್ಲಿ ಬೆಳಕು ಇಲ್ಲ. ಅಪಘಾತಗಳ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳ ಪೈಕ ಇದು ಒಂದು. ರಾತ್ರಿ ಸಂದರ್ಭ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸಾಹಸದ ಕೆಲಸ. ರಸ್ತೆಗೆ ಡಿವೈಡರ್ ಇದೆ. ಆದರೂ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಲೈಟುಗಳು ವಾಹನ ಚಾಲಕರ ಕಣ್ಣು ಕುಕ್ಕಲಿದೆ. ಒಂದು ವೇಳೆ ಡಿವೈಡರ್ ಮೇಲೆ ಬೀದಿ ದೀಪ ಅಳವಡಿಸಿದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ರಸ್ತೆ ನಿರ್ಮಾಣವಾಗಿ ವರ್ಷಗಳೆ ಕಳೆದರೂ ಬೀದಿ ದೀಪ ಅಳವಡಿಸಿಲ್ಲ.
ವೇಗ ನಿಯಂತ್ರಣಕ್ಕಿಲ್ಲ ಕ್ರಮ
ಬೈಪಾಸ್ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೆ ಕ್ರಮ ಕೈಗೊಂಡಿಲ್ಲ. ಬಿ.ಹೆಚ್.ರಸ್ತೆಯಲ್ಲಿ ಸಹ್ಯಾದ್ರಿ ಕಾಲೇಜಿನಿಂದ ಹೊಳೆ ಸೇತುವೆವರೆಗೂ ಅಲ್ಲಲ್ಲಿ ವಿಭಿನ್ನ ಮಾದರಿಯ ಸ್ಪೀಡ್ ಬ್ರೇಕರ್ ಹಾಕಲಾಗಿದೆ. ಅದೆ ಮಾದರಿಯ ಸ್ಪೀಡ್ ಬ್ರೇಕರ್’ಗಳನ್ನು ಬೈಪಾಸ್ ರಸ್ತೆಗೂ ಅಳವಡಿಸಿದರೆ ವೇಗ ತಗ್ಗಲಿದೆ ಅನ್ನುವುದು ಜನರ ಅಭಿಪ್ರಾಯ.
ಬೈಪಾಸ್ ರಸ್ತೆಯಲ್ಲಿ ಊರುಗಡೂರು, ಮತ್ತೂರು ರಸ್ತೆ ಹೋಗುವ ಕಡೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಹಾಗಾಗಿ ಇಲ್ಲಿ ವಾಹನಗಳ ವೇಗ ತಗ್ಗುತ್ತದೆ. ಉಳಿದೆಲ್ಲೂ ವೇಗ ನಿಯಂತ್ರಣಕ್ಕೆ ಕ್ರಮವಿಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ.
ವಾಹನ ದಟ್ಟಣೆ, ಜನ ಸಂಚಾರ ಹೆಚ್ಚಳವಾಗುತ್ತಿದ್ದಂತೆ ಶಿವಮೊಗ್ಗದ ಬೈಪಾಸ್ ರಸ್ತೆಯು, ಜಿಲ್ಲೆಯ ಡೆಡ್ಲಿ ರಸ್ತೆಗಳ ಪಾಲಿಗೆ ಸೇರ್ಪಡೆಯಾಗುತ್ತಿದೆ. ಈಗಲೆ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಹಲವರ ಪ್ರಾಣ ಉಳಿಯಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200