ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಡಿಸೆಂಬರ್ 2021
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್’ಗೆ ಒಳಗಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು, ಕರೋನ ಪಾಸಿಟಿವ್ ಬಂದರೂ ಮೇಯರ್ ಅವರು ಕಚೇರಿಗೆ ಬಂದು ಫೈಲ್ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಾಗಿ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅವರನ್ನು ಬಂಧಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕರೋನ ಪಾಸಿಟಿವ್ ಬಂದ ಹಿನ್ನೆಲೆ ಮೇಯರ್ ಸುನೀತಾ ಅಣ್ಣಪ್ಪ ಅವರು ಸಾರ್ವಜನಿಕರಿಂದ ದೂರು ಉಳಿದಿದ್ದಾರೆ. ಕ್ವಾರಂಟೈನ್ ಆಗಿದ್ದಾರೆ. ಮೇಯರ್ ಸುನೀತಾ ಅಣ್ಣಪ್ಪ ಅವರ ಸಂಪರ್ಕದಲ್ಲಿದ್ದ ಅವರ ಕುಟುಂಬದವರು, ಪಾಲಿಕೆ ಅಧಿಕಾರಿಗಳು ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲರಿಗೂ ಕರೋನ ನೆಗೆಟಿವ್ ಬಂದಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಪಾಲಿಕೆ ಮೇಯರ್ ವಿರುದ್ಧ ಪ್ರತಿಭಟನೆ ನಡೆದಿದ್ದು, ಬಂಧನಕ್ಕೆ ಒತ್ತಾಯ ಕೇಳಿ ಬಂದಿದೆ.
ಮೇಯರ್ ವಿರುದ್ಧ ಠಾಣೆಗೆ ದೂರು
ಕರೋನ ಸೋಂಕು ತಗುಲಿದ್ದರೂ ಮೇಯರ್ ಸುನೀತಾ ಅಣ್ಣಪ್ಪ ಅವರು ಜವಾಬ್ದಾರಿ ಮರೆತಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಘಟಕ, ದೂರು ನೀಡಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದಾರೆ. ಕೂಡಲೆ ಸುನೀತಾ ಅಣ್ಣಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರೋಗ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಇನ್ನು, ದೂರು ನೀಡಿದ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೇಯರ್ ಅವರಿಗೆ ಡಿಸೆಂಬರ್ 12 ರಂದು ಕರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಆದರೂ ಪಾಲಿಕೆಯ ಕಾರ್’ನಲ್ಲಿ ಪ್ರಯಾಣಿಸಿದ್ದಾರೆ. ಪಾಲಿಕೆ ಕಚೇರಿಗೆ ಬಂದು ಫೈಲ್’ಗಳನ್ನು ತರಿಸಿ ಪರಿಶೀಲಿಸಿದ್ದಾರೆ. ಪಾಸಿಟಿವ್ ಎಂದು ಗೊತ್ತಿದ್ದರೂ ಮೇಯರ್ ಅವರು ಜವಾಬ್ದಾರಿ ಮರೆತಿದ್ದಾರೆ. ಪಾಲಿಕೆ ಸಿಬ್ಬಂದಿಗಳಿಗೆ ಇದರಿಂದ ಆತಂಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮಕ್ಕೆ ಹೋಗಬೇಕಿತ್ತು
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕಾಶಿಗೆ ಭೇಟಿ ನೀಡಿದ್ದರು. ಈ ಸಂದರ್ಭ ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದರು. ಅದೆ ಮಾದರಿಯಲ್ಲಿ ದೇಶದ ವಿವಿಧೆಡೆಯ ಪಾಲಿಕೆ ಮೇಯರ್’ಗಳು, ಸ್ಥಳೀಯ ನಗರ ಪಾಲಿಕೆ ಅಧ್ಯಕ್ಷರ ಸಮಾವೇಶ ಆಯೋಜಿಸಿದ್ದರು.
ಪ್ರಧಾನಿ ಮೋದಿ ಅವರು ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ಅವರು ತೆರಳಬೇಕಿತ್ತು. ಆದರೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ ಅವರು ಪ್ರವಾಸ ರುದ್ದಗೊಳಿಸಿದ್ದರು.
ಎಎಪಿ ವಿರುದ್ಧ ಬಿಜೆಪಿ ಆಕ್ರೋಶ
ಇತ್ತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೂರು ನೀಡುತ್ತದ್ದಂತೆ, ಶಿವಮೊಗ್ಗ ಬಿಜೆಪಿ ಮುಖಂಡರು ಮೇಯರ್ ಬೆಂಬಲಕ್ಕೆ ನಿಂತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ‘ಕರೋನ ಪಾಸಿಟಿವ್ ಬರುತ್ತಿದ್ದಂತೆ ಮೇಯರ್ ಸುನೀತಾ ಅಣ್ಣಪ್ಪ ಅವರು ಕ್ವಾರಂಟೈನ್ ಆಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಆಮ್ ಆದ್ಮಿ ಪಕ್ಷದವರಿಗೆ ಕೆಲಸವಿಲ್ಲ. ಹಾಗಾಗಿ ದೂರು, ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಮೇಯರ್’ಗೆ ಕರೋನ ಸೋಂಕು ತಗುಲಿದ ಬಳಿಕ ನಡೆದ ಬೆಳವಣಿಗೆ ಈಗ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಮೇಯರ್ ಸುನೀತಾ ಅಣ್ಣಪ್ಪ ಅವರೆ ಸ್ಪಷ್ಟನೆ ನೀಡಬೇಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422