SHIVAMOGGA LIVE | 25 JULY 2023
SHIMOGA : ಹಾಫ್ ಹೆಲ್ಮೆಟ್ (Half Helmet) ಧರಿಸಿ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ಶಾಕ್ ನೀಡಿದ್ದಾರೆ. ನಗರದ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿ ಹಾಫ್ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ರಾಶಿ ರಾಶಿ ಹಾಫ್ ಹೆಲ್ಮೆಟ್ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಢೀರ್ ಕಾರ್ಯಾಚರಣೆ
ನಗರದ ವಿವಿಧೆಡೆ ಸಂಚಾರ ಠಾಣೆ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು. ಹಾಫ್ ಹೆಲ್ಮೆಟ್ (Half Helmet) ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದವರನ್ನು ತಡೆದು ಹೆಲ್ಮೆಟ್ ತೆಗೆಸಿದರು. ಅಲ್ಲದೆ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ಗಳನ್ನು ಧರಸಬೇಕು ಎಂದು ತಿಳಿವಳಿಕೆ ಮೂಡಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.
ವಾಹನ ಸವಾರರಿಗ ಪೀಕಲಾಟ
ಪೊಲೀಸರು ವಾಹನ ತಡೆಯುವುದು, ದಂಡದಿಂದ ತಪ್ಪಿಸಿಕೊಳ್ಳಲು ಕಡಿಮೆ ಬೆಲೆಯ, ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ ಧರಿಸುತ್ತಿದ್ದರು. ಇವತ್ತು ಇಂತಹ ಹೆಲ್ಮೆಟ್ ಧರಿಸಿದ್ದವರನ್ನೆ ಪೊಲೀಸರು ತಡೆದು ಹೆಲ್ಮೆಟ್ ತೆಗೆಸಿದರು. ಇದರಿಂದ ಹಾಫ್ ಹೆಲ್ಮೆಟ್ ಧರಿಸಿದ್ದ ದ್ವಿಚಕ್ರ ವಾಹನ ಸವಾರರು ಪೀಕಲಾಟ ಅನುಭವಿಸಿದರು. ಅನಿವಾರ್ಯವಾಗಿ ಹೆಲ್ಮೆಟ್ಗಳನ್ನು ಬಿಚ್ಚಿ ಬಿಸಾಡಿದರು. ಕಾರ್ಯಾಚರಣೆ ವೇಳೆ ಸುಮಾರು 1000 ಹೆಲ್ಮೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮುಂದೆ ಹಾಫ್ ಹೆಲ್ಮೆಟ್ ಧರಿಸುವವರ ವಿರುದ್ಧ ಮೋಟಾರ್ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ಜಾಗೃತಿ ಮೂಡಿಸದೆ ಕ್ರಮ, ಆಕ್ಷೇಪ
ಪೊಲೀಸರು ದಿಢೀರ್ ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ‘ಹಾಫ್ ಹೆಲ್ಮೆಟ್ (Half Helmet) ಧರಿಸದಂತೆ ಮೊದಲು ಜಾಗೃತಿ ಮೂಡಿಸಬೇಕಿತ್ತು. ಹೀಗೆ ಏಕಾಏಕಿ ಕಾರ್ಯಾಚರಣೆ ನಡೆಸಿ ಜನರ ಹೆಲ್ಮೆಟ್ಗಳನ್ನು ಕಸಿದುಕೊಳ್ಳುವುದು ಸರಿಯಲ್ಲʼ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಅವರು ಈಗಾಗಲೆ ಜಾಗೃತಿ ಮೂಡಿಸಲಾಗಿದೆ. ಮತ್ತೊಮ್ಮೆ ಜಾಗೃತಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ಕಮಿಷನರ್ಗೆ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಕರೆಂಟ್ ಶಾಕ್..!
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ, ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200