ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಮಾರ್ಟ್ ಸಿಟಿ ಕಾಮಗಾರಿಯ ಗೋಳು ಮುಗಿಯುವ ಹಾಗೆ ಕಾಣುತ್ತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಜೆಸಿಬಿಗಳು ರಸ್ತೆಗಳನ್ನು ಅಗೆಯಲು ಆರಂಭಿಸಿವೆ. ಎಲ್ಲೆಂದರಲ್ಲಿ ಗುಂಡಿಯಿಂದಾಗಿ ವಾಹನ ಸವಾರರು ಭೀತಿಗೊಳಗಾಗಿದ್ದಾರೆ. ಈ ನಡುವೆ ಮಳೆ ಶುರುವಾಗುವ ಹೊತ್ತಿಗೆ ಕಾಮಗಾರಿ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ನಗರದ ಕುವೆಂಪು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಗುಂಡಿಗಳನ್ನು ಅಗೆಯಲಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ರಸ್ತೆ ಇದು. ಆಸ್ಪತ್ರೆಗಳು ಇರುವುದರಿಂದ ಆಂಬುಲೆನ್ಸ್‍ಗಳ ಸಂಚಾರವು ಹೆಚ್ಚು. ಗುಂಡಿಗಳಿಂದಾಗಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.
ಜೈಲ್ ರಸ್ತೆಯಲ್ಲೂ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಹಾಗಾಗಿ ವಾಹನ ಸಂಚಾರ ಕಷ್ಟವಾಗಿದೆ. ಪಾದಚಾರಿಗಳು ಕೂಡ ಓಡಾಡಲು ಸಾಹಸ ಮಾಡಬೇಕಿದೆ. ಇವೆರಡು ರಸ್ತೆಗಳು ಉದಾಹರಣೆಯಷ್ಟೆ. ಇದೆ ಪರಿಸ್ಥಿತಿ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡುವ ವಾರ್ಡ್‍ಗಳಲ್ಲಿದೆ.
ವ್ಯಾಪಾರ ಮಾಡಲು ಕಷ್ಟ ಕಷ್ಟ
ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಚರಂಡಿ ಕಾಮಗಾರಿ, ಕೇಬಲ್ ಅಳವಡಿಕೆ ಸೇರಿದಂತೆ ಹಲವು ಕಾರ್ಯಗಳು ನಡೆಯುತ್ತಿದೆ. ಇದು ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ.
‘ಲಾಕ್ ಡೌನ್‍ನಿಂದಾಗಿ ಬಿಸ್ನೆಸ್ ಇಲ್ಲವಾಗಿತ್ತು. ಈಗ ಸ್ಮಾರ್ಟ್ ಸಿಟಿ ಕೆಲಸದಿಂದಾಗಿ ಬಿಸ್ನೆಸ್ ಮಾಡಲು ಆಗುತ್ತಿಲ್ಲ. ನಮ್ಮ ಪರಿಸ್ಥಿತಿ ಯಾರಿಗೆ ಹೇಳುವುದು ಗೊತ್ತಾಗುತ್ತಿಲ್ಲ’ ಅನ್ನುತ್ತಾರೆ ಕುವೆಂಪು ರಸ್ತೆಯಲ್ಲಿರುವ ಮಳಿಗೆ ಮಾಲೀಕ ಪ್ರಶಾಂತ್.
ಮಳೆ ಶುರುವಾದಾಗ ಕೆಲಸ
ಎರಡು ತಿಂಗಳು ಲಾಕ್ ಡೌನ್ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸಲು ಯಾವುದೆ ಅಡ್ಡಿ ಇರಲಿಲ್ಲ. ಆದರೆ ಈ ವೇಳೆ ಹಲವು ಕಾರ್ಮಿಕರು ತಮ್ಮೂರಿಗೆ ಮರಳಿದ್ದರು. ಹಾಗಾಗಿ ಕೆಲಸ ನಡೆಯಲಿಲ್ಲ.
‘ಸ್ಮಾರ್ಟ್ ಸಿಟಿಯ ಯಾವುದೆ ಕಾಮಗಾರಿಗೂ ಸರಿಯಾದ ಕ್ಯೂರಿಂಗ್ ಮಾಡುತ್ತಿಲ್ಲ. ಈಗ ನೋಡಿದರೆ ಮಳೆ ಶುರುವಾಗುವಾಗ ಗುಂಡಿಗಳನ್ನು ಅಗೆದಿದ್ದಾರೆ. ಕಾಮಗಾರಿ ಮಾಡುತ್ತಿದ್ದಾರೆ. ಇದು ಕಾಮಗಾರಿಯ ಗುಣಮಟ್ಟ ಪ್ರಶ್ನಿಸುವಂತೆ ಮಾಡಿದೆ’ ಅನ್ನುತ್ತಾರೆ ಸ್ಥಳೀಯರಾದ ಗಿರೀಶ್.
ಒಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನೊಂದೆಡೆ ನಾಗರಿಕರ ಸಹಭಾಗಿತ್ವವಿಲ್ಲದೆ ಏಕಪಕ್ಷೀಯವಾಗಿ ಕಾಮಗಾರಿಗಳು ನಡೆಯುತ್ತಿರುವ ಆರೋಪವಿದೆ. ಈ ನಡುವೆ ಮಳೆಗಾಲದಲ್ಲಿ ಕೆಲಸ ನಡೆಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200