ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಕಾಶ್ಮೀರದ (Kashmir) ಪಹಾಲ್ಗಾಮ್‌ನಲ್ಲಿ ಭಯೋತ್ಪಾದಕರ (terrorist) ದಾಳಿಗೆ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಸಾವನ್ನಪ್ಪಿದ್ದಾರೆ. ವಿಚಾರ ತಿಳಿದು ಶಿವಮೊಗ್ಗ ಜನರು ಮರುಕ ಮತ್ತು ಭಯೋತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗು ಏನೆಲ್ಲ ಬೆಳವಣಿಗೆ ಆಗಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ.
ಏನೆಲ್ಲ ಬೆಳವಣಿಗೆ ಆಯ್ತು?
ಮಂಗಳವಾರ ಮಧ್ಯಾಹ್ನ ಕಾಶ್ಮೀರದ ಪಹಾಲ್ಗಾಮ್‌ನಲ್ಲಿ ಭಯೋತ್ಪಾದಕರ (terrorist) ಗುಂಡಿನ ದಾಳಿಗೆ ಮಂಜುನಾಥ್ ರಾವ್ ಸಾವನ್ನಪ್ಪಿದರು. ಅವರ ಪತ್ನಿ ಪಲ್ಲವಿ ಮತ್ತು ಪುತ್ರ ಅಭಿಜಯ ಪರಾಗಿದ್ದಾರೆ. ಸ್ಥಳೀಯರು ಇವರ ರಕ್ಷಣೆ ಮಾಡಿದರು. ಸದ್ಯ ಇವರು ಭಾರತೀಯ ಸೇನೆಯ ರಕ್ಷಣೆಯಲ್ಲಿದ್ದಾರೆ.

ಇದನ್ನೂ ಓದಿ » ಮಗನ ಸಾಧನೆ ಸಂಭ್ರಮಿಸಲು ಕುಟುಂಬದ ಜೊತೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಉಗ್ರರ ದಾಳಿಗೆ ಬಲಿ
ಶಿವಮೊಗ್ಗದ ನೇತಾಜಿ ವೃತ್ತದ ಸಮೀಪ ವಿಜಯನಗರದ 3ನೇ ತಿರುವಿನಲ್ಲಿರುವ ಮಂಜುನಾಥ್ ರಾವ್ ಮನೆ ಮುಂದೆ ನೀರವ ಮೌನ ಆವರಿಸಿತು. ಮನೆಯಲ್ಲಿದ್ದ ತಾಯಿಗೆ ವಿಷಯ ತಿಳಿಯದ ಹಿನ್ನೆಲೆ ಸಂಬಂಧಿಕರು ಮನೆಗೆ ಬಂದು ತಾಯಿಯ ಆರೈಕೆ ಮಾಡಿದರು. ಇನ್ನು, ಸ್ನೇಹಿತರು, ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿ ಮನೆ ಮುಂದೆ ಜಮಾಯಿಸಿದ್ದರು.

ಇದನ್ನೂ ಓದಿ » ಉಗ್ರರ ದಾಳಿಗೆ ಮಗ ಬಲಿಯಾದ ವಿಚಾರ ತಾಯಿಗೆ ತಿಳಿದಿಲ್ಲ, ಹೇಗಿದೆ ಮಂಜುನಾಥ್ ಮನೆ ಬಳಿ ಪರಿಸ್ಥಿತಿ?
ಮಂಜುನಾಥ ರಾವ್ ಪತ್ನಿ ಪಲ್ಲವಿ ಮ್ಯಾಮ್‌ಕೋಸ್‌ನ ಉದ್ಯೋಗಿ. ವಿಷಯ ತಿಳಿದ ಕೂಡಲೆ ಮ್ಯಾಮ್‌ಕೋಸ್ ಉಪಾಧ್ಯಕ್ಷ ಮಹೇಶ್, ಎಂ.ಡಿ ಶ್ರೀಕಾಂತ್ ಬರುವೆ ನೇತೃತ್ವದಲ್ಲಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ್ದರು. ಕುಟುಂಬದವರ ಜೊತೆ ಚರ್ಚೆ ನಡೆಸಿದರು.
ಮಂಜನಾಥ್ ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ತರಿಸಲು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಸಂಸದ ರಾಘವೇಂದ್ರ ಅವರ ಜೊತೆ ಚರ್ಚೆ ನಡೆಸಿದ್ದೇವೆ. ಆದಷ್ಟು ಶೀಘ್ರ ಪಾರ್ಥೀವ ಶರೀರವನ್ನು ಇಲ್ಲಿಗೆ ತರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಇಂತಹ ದುರಂತ ನಡೆಯುತ್ತಿರುವುದು ಖಂಡನೀಯ.
ಮಹೇಶ್.ಹೆಚ್.ಎಸ್. ಮ್ಯಾಮಕೋಸ್ ಉಪಾಧ್ಯಕ್ಷ

ಇದನ್ನೂ ಓದಿ » ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್
ಕಾಶ್ಮೀರದ ಬೆಳವಣಿಗೆ ತಿಳಿದುಕೊಳ್ಳಲು ಮಂಜುನಾಥ್ ರಾವ್ ಕುಟುಂಬದವರು, ಸ್ನೇಹಿತರು ಪರದಾಡಬೇಕಾಯಿತು. ಪಲ್ಲವಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಮತ್ತಷ್ಟು ಆತಂಕ ಉಂಟಾಗಿತ್ತು. ಕೊನೆಗೆ ಪಲ್ಲವಿ ಅವರ ಮೊಬೈಲ್ ಆನ್ ಆಯಿತು. ಅಲ್ಲದೆ ಕಾಶ್ಮೀರದಲ್ಲಿದ್ದ ಕಾರು ಚಾಲಕರೊಬ್ಬರ ಮೊಬೈಲ್ ನಂಬರ್ ಮೂಲಕ ಸಂಪರ್ಕ ಸಾಧ್ಯವಾಯಿತು.
ನನ್ನ ಪತ್ನಿಯ ಸಹೋದರ ಮಂಜುನಾಥ ರಾವ್. ಪಲ್ಲವಿ ಅವರ ಜೊತೆಗೆ ಸದ್ಯ ಸಂಪರ್ಕದಲ್ಲಿದ್ದೇವೆ. ನಮ್ಮ ಕುಟುಂಬದವರು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ಡಾ. ರವಿಕಿರಣ್, ಸಂಬಂಧಿ

ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಂಜುನಾಥ ರಾವ್ ಮನೆಗೆ ದೌಡಾಯಿಸಿದರು. ಅವರ ಕುಟುಂಬದವರ ಜೊತೆ ಚರ್ಚಿಸಿದರು. ಇದೇ ವೇಳೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಕೂಡ ಮಂಜುನಾಥ ರಾವ್ ಅವರ ಮನೆಗೆ ಭೇಟಿ ನೀಡಿದರು.
ಶಿವಮೊಗ್ಗದ ಸೈನಿಕರೊಬ್ಬರು ಪಲ್ಲವಿಯವರನ್ನು ಸಂತೈಸಿದ್ದಾರೆ. ಬಳಿಕ ನನಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಸಂಸದ ತೇಜಸ್ವಿ ಸೂರ್ಯ ಅವರು ಕಾಶ್ಮೀರದಲ್ಲಿದ್ದಾರೆ. ಅವರನ್ನು ಸಂಪರ್ಕಿಸಲಾಗಿದೆ. ಅವರ ಸಹಕಾರವನ್ನು ಕೇಳಲಾಗಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟುವ ಕೆಲಸ ಆಗುತ್ತಿದೆ.
ಎಸ್.ಎನ್.ಚನ್ನಸಬಪ್ಪ, ಶಾಸಕ

ಸಂಸದ ಬಿ.ವೈ.ರಾಘವೇಂದ್ರ ಅವರು ವಿಜಯನಗರದ ಮಂಜುನಾಥ ರಾವ್ ಮನೆಗೆ ಭೇಟಿ ನೀಡಿದರು. ಕುಟುಂಬದವರ ಜೊತೆಗೆ ಬೆಳವಣಿಗೆ ಕುರಿತು ಚರ್ಚಿಸಿದರು. ಅಲ್ಲದೆ, ಪಾರ್ಥೀವ ಶರೀರವನ್ನು ಶಿವಮೊಗ್ಗ ತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹಿಂದುಗಳ ಮೇಲೆ ಉಗ್ರರು ಮತ್ತೆ ದಾಳಿ ನಡೆಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಬಿ.ವೈ.ರಾಘವೇಂದ್ರ, ಸಂಸದ

ಪಹಾಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ (Terrorist) ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಕಳೆದ ರಾತ್ರಿಯೆ ಪ್ರತಿಭಟನೆಗಳು ನಡೆದವು. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಉಷಾ ನರ್ಸಿಂಗ್ ಹೋಂ ಸರ್ಕಲ್‌ನಲ್ಲಿ ಭಯೋತ್ಪಾದಕರ ಪ್ರತಿಕೃತಿ ದಹಿಸಿದರು. ಅಲ್ಲದೆ ಭಯೋತ್ಪಾದಕರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು. ದೀಪ ಹಿಡಿದುಕೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನವಾಗಿ ಪ್ರತಿಭಟಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮಂಜುನಾಥ್ ರಾವ್ ಮೃತದೇಹ ಗುರುವಾರ ಬೆಳಗ್ಗೆ ಶಿವಮೊಗ್ಗ ತಲುಪಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಇಂದು ಸಂಜೆ ಕಾಶ್ಮೀರದಿಂದ ಬೆಂಗಳೂರಿಗೆ ಮಂಜುನಾಥ್ ಅವರ ಮೃತದೇಹ ಏರ್‌ಲಿಫ್ಟ್ ಮಾಡಲಾಗುತ್ತದೆ. ಬೆಂಗಳೂರಿನಿಂದ ನಾಳೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಇದನ್ನೂ ಓದಿ » ಉಗ್ರರ ದಾಳಿ, ಮಂಜುನಾಥ ರಾವ್ ಮೃತದೇಹ ನಾಳೆ ಶಿವಮೊಗ್ಗಕ್ಕೆ
ವಿಜಯನಗರದಲ್ಲಿರುವ ಮಂಜುನಾಥ ರಾವ್ ಮನೆಗೆ ಇಂದು ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು, ಜನರು ಆಗಮಿಸುತ್ತಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಇಂದು ಬೆಳಗ್ಗೆ ಮಂಜುನಾಥ ರಾವ್ ಮನೆಗೆ ಭೇಟಿ ನೀಡಿದ್ದರು. ಸಚಿವ ಮಧು ಬಂಗಾರಪ್ಪ ಕೂಡ ವಿಜಯನಗರಕ್ಕೆ ಭೇಟಿ ನೀಡಿ ಮಂಜುನಾಥ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಿದರು.


LATEST NEWS
- ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

About The Editor
ನಿತಿನ್ ಆರ್.ಕೈದೊಟ್ಲು
















