ಶಿವಮೊಗ್ಗ ಲೈವ್.ಕಾಂ | SHIMOGA | 20 ಅಕ್ಟೋಬರ್ 2019
ಮನೆಯಲ್ಲಿ ಬಳೆಕೆಯಾಗದೆ ಉಳಿದುಕೊಂಡಿರುವ ಬಟ್ಟೆಗಳಿಗೆ ಜೀವ ತುಂಬಿದರು ಈ ಮಹಿಳೆ. ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಬರುವವರಿಗೆ ಇವರೆ ಈಗ ಪ್ರೇರಣೆ. ಈ ಮಹಿಳೆಯ ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತಿದೆ ಭಾರೀ ಮೆಚ್ಚುಗೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದ್ಯದಲ್ಲೆ ತಲುಪಿಸಲಿದ್ದಾರೆ ಸ್ಪೆಷಲ್ ಉಡುಗೊರೆ.
ಇವರು ಗೀತಾ ನರಹರಿ ಪಂಡಿತ್. ಶಿವಮೊಗ್ಗದ ಹೊಸಮನೆ ಎರಡನೆ ಕ್ರಾಸ್ ನಿವಾಸಿ. ಪ್ರಧಾನಿ ನರೇಂದ್ರ ಮೋದಿ ಅಂದರೆ ಅಚ್ಚುಮೆಚ್ಚು. ಪ್ಲಾಸ್ಟಿಕ್ ನಿಷೇಧ ಕುರಿತು ಪ್ರಧಾನಿ ಮೋದಿ ಹೇಳಿಕೆ ಇವರಿಗೆ ಪ್ರೇರಣೆಯಾಯ್ತು. ಹಾಗಾಗಿ ತಾವೆ ಬಟ್ಟೆ ಬ್ಯಾಗ್’ಗಳನ್ನು ಹೊಲೆದು, ಸೈಲೆಂಟಾಗಿ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ.
ಮನೆಯಲ್ಲಿ ಬಳಕೆಯಾಗದೆ ಉಳಿದಿರುವ ಬಟ್ಟೆಗಳನ್ನು ಕತ್ತರಿಸಿ, ತಾವೆ ಹೊಲೆದು ಬೆಟ್ಟೆ ಬ್ಯಾಗ್ ಸಿದ್ಧಪಡಿಸುತ್ತಿದ್ದಾರೆ. ನೂರು ಬ್ಯಾಗ್ ಹೊಲೆಯಬೇಕು ಅನ್ನುವುದು ಗೀತಾ ಪಂಡಿತ್ ಅವರ ಗುರಿಯಾಗಿತ್ತು. ಇವರು ಹಂಚುತ್ತಿರುವ ಬಟ್ಟೆ ಬ್ಯಾಗ್’ಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್ ಇರುವುದರಿಂದ, ದಿನೆ ದಿನೆ ಟಾರ್ಗೆಟ್ ಬದಲಾಗುತ್ತಿದೆ.
‘ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲಿಕೆ ಉಪಮೇಯರ್ ಚನ್ನಬಸಪ್ಪ ಮತ್ತು ಅಧಿಕಾರಿಗಳು ಜನರಿಗೆ ಬಟ್ಟೆ ಬ್ಯಾಗ್ ಹಂಚಿದರು. ಆಗ ನನಗೆ ನಮ್ಮ ಮನೆಯಲ್ಲಿ ಬಳಕೆಯಾಗದೆ ಉಳಿದುಕೊಂಡಿರುವ ಬಟ್ಟೆಗಳಿಂದ ಬ್ಯಾಗ್ ತಯಾರಿಸಬೇಕು ಅನ್ನುವ ಯೋಚನೆ ಬಂತು’ ಅಂತಾರೆ ಗೀತಾ ಪಂಡಿತ್.

ಬೆನ್ನಿಗೆ ನಿಂತಿದ್ದಾರೆ ನೆಹರು ಸ್ಟೇಡಿಯಂ ವಾಕಿಂಗ್ ಫ್ರೆಂಡ್ಸ್
ಗೀತಾ ಪಂಡಿತ್ ಪ್ರತಿ ಬೆಳಗ್ಗೆ ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಾರೆ. ತಾವು ಹೊಲೆದ ಬಟ್ಟೆ ಬ್ಯಾಗ್’ಗಳನ್ನು ಮೊದಲು ಹಂಚಿದ್ದೆ ನೆಹರು ಸ್ಟೇಡಿಯಂನಲ್ಲಿ. ‘ಆರಂಭದಲ್ಲಿ ಜನರು ದುಡ್ಡಿಗಾಗಿ ಮಾರಾಟ ಮಾಡುತ್ತಿದ್ದೇವೆ ಅಂದುಕೊಂಡರು. ಆದರೆ ಇದು ಉಚಿತ ಮತ್ತು ಪ್ಲಾಸ್ಟಿಕ್ ನಿಷೇಧ ಜಾಗೃತಿಗಾಗಿ ಮಾಡುತ್ತಿದ್ದೇವೆ ಅಂದಾಗ ಖುಷಿಯಾದರು. ಮನೆಯಲ್ಲಿ ಬಳಕೆಯಾಗದ ಬಟ್ಟೆಗಳನ್ನು ಬಿಸಾಡುವ ಬದಲು, ಬಟ್ಟೆ ಬ್ಯಾಗ್ ತಯಾರಿಸಬಹುದು ಎಂದು ಎಲ್ಲರಿಗು ಮನವರಿಕೆ ಮಾಡಿದ್ದೇವೆ’ ಅನ್ನುತ್ತಾರೆ ಗೀತಾ ಪಂಡಿತ್.

ಇನ್ನು, ಗೀತಾ ಪಂಡಿತ್ ಅವರಿಗೆ ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಫ್ರೆಂಡ್ಸ್ ಇದ್ದಾರೆ. ಉಷಾ ಶಶಿಧರ್, ಸುಮಾ, ಚಂದ್ರಿಕಾ, ಪ್ರೇಮಾ, ಶೈಲಾ, ಗೀತಾ ಪುಟಾಣಿ, ಹೇಮಲತಾ, ಲಕ್ಷ್ಮಿ, ಸುಧಾ, ಲಲಿತಮ್ಮ, ಡಾ.ಹೇಮಾ ಮೋಹನ್, ಜಯಂತಿ ಅವರೆಲ್ಲ ಈ ವಾಕಿಂಗ್ ಗ್ರೂಪ್’ನ ಸದಸ್ಯರು. ಇವರೆಲ್ಲ ಈಗ ಗೀತಾ ಪಂಡಿತ್ ಅವರ ಕಾರ್ಯಕ್ಕೆ ಬೆನ್ನೆಲುಬಾಗಿದ್ದಾರೆ. ತಮ್ಮ ಮನೆಯಲ್ಲಿ ಬಳಕೆಯಾಗದ ಉಳಿದ ಬಟ್ಟೆಗಳನ್ನು ತಂದು ಬ್ಯಾಗ್ ಮಾಡಲು ಕೊಡಲು ಸಿದ್ಧವಾಗಿದ್ದಾರೆ. ಜೊತೆಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಪ್ರಧಾನಿ ಮೋದಿಗೆ ಐದು ವಿಐಪಿ ಬ್ಯಾಗ್
ಗೀತಾ ಪಂಡಿತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ‘ಪ್ರಧಾನಿ ಮೋದಿ ಅವರಿಗೆ ಐದು ಸ್ಪೆಷಲ್ ಬ್ಯಾಗ್ ಹೊಲೆಯಲು ಯೋಚಿಸಿದ್ದೇನೆ. ಖಾದಿಯಲ್ಲಿ ವಿಐಪಿ ಬ್ಯಾಗ್ ಸಿದ್ಧಪಡಿಸಿ, ಮೋದಿ ಅವರಿಗೆ ಕಳುಹಿಸಿಕೊಡುತ್ತೇನೆ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ಖುಷಿಯಿಂದ ತಿಳಿಸುತ್ತಾರೆ.

ನೆಹರು ಸ್ಟೇಡಿಯಂನಲ್ಲಿ ಗೀತಾ ಪಂಡಿತ್ ಅವರು 40ಕ್ಕೂ ಹೆಚ್ಚು ಬ್ಯಾಗ್ ಉಚಿತವಾಗಿ ವಿತರಿಸಿದ್ದಾರೆ. ಇನ್ನಷ್ಟು ಬಟ್ಟೆ ಬ್ಯಾಗ್ ಹೊಲೆದು ಮತ್ತಷ್ಟು ಜನರಿಗೆ ಹಂಚಬೇಕು ಎಂದುಕೊಂಡಿದ್ದಾರೆ. ಈ ವಯಸ್ಸಲ್ಲಿ ಇಷ್ಟೊಂದು ರಿಸ್ಕ್ ಯಾಕೆ ಎಂದು ಪ್ರಶ್ನಿಸಿದರೆ, ‘ಪ್ರಧಾನಿ ಮೋದಿ ಅವರು ನನಗಿಂತಲು ಎರಡು ವರ್ಷ ದೊಡ್ಡವರು. ಅವರು 18 ಗಂಟೆ ಕೆಲಸ ಮಾಡುತ್ತಾರೆ. ನಾವು ಇಷ್ಟು ಮಾಡದಿದ್ದರೆ ಹೇಗೆ’ ಎಂದು ಮರುಪ್ರಶ್ನೆಯನ್ನು ಮುಂದಿಡುತ್ತಾರೆ.

ಗೀತಾ ಪಂಡಿತ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೆ ಶಿವಮೊಗ್ಗ, ಬೆಂಗಳೂರು ಮತ್ತು ವಿದೇಶದಿಂದೆಲ್ಲ ಕರೆ ಮಾಡಿ ಅವರಿಗೆ ಮೆಚ್ಚುಗೆಯ ಮಾತು ಹೇಳುತ್ತಿದ್ದಾರೆ. ಇವರ ಕಾರ್ಯ ಉಳಿದವರಿಗೆ ಪ್ರೇರಣೆಯಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200