ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಈಗಾಗಲೆ ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರುವಾಗಿದೆ. ಭಾರಿ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.
ಹೊಸ ಕ್ಷೇತ್ರಕ್ಕೆ ತಟ್ಟಿದ ಬಿಸಿ
ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿವೆ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಆನ್‍ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ
ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ವೇಳೆ ವಿದ್ಯಾರ್ಥಿಗಳು, ಉದ್ಯೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯರು ನೆಟ್‍ವರ್ಕ್ ಕೊಡಿಸುವಂತೆ ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆದಿದ್ದಾಯ್ತು, ಜನಪ್ರತಿನಿಧಿಗಳಿಗೆ ಬೇಡಿದ್ದಾಯ್ತು. ಪ್ರಯೋಜನವಾಗದ ಹಿನ್ನೆಲೆ, ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರು ಮಾಡಿದ್ದಾರೆ.
ಸಮಿತಿ ಅಸ್ತಿತ್ವಕ್ಕೆ, ಜನ ಬೆಂಬಲ ಹೆಚ್ಚಳ
ಅಭಿಯಾನದ ಭಾಗವಾಗಿ ಕಟ್ಟಿನಕಾರು ಕಾರಣಿ ನೆಟ್‍ವರ್ಕ್ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಹೋರಾಟ ಸಮಿತಿಯ ರಾಜಕುಮಾರ್, ಈಗ ನೆಟ್‍ವರ್ಕ್ ಕೂಡ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ. ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೆಟ್‍ವರ್ಕ್ ಕೊಟ್ಟರಷ್ಟೆ ಮತದಾನ ಯೋಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಕಾಡು ಪ್ರಾಣಿಗಳ ಭಯ, ಮಳೆ, ಗಾಳಿಯ ರಭಸ, ಆನ್ ಲೈನ್ ಕ್ಲಾಸ್ಗಾಗಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು
ಆನ್‍ಲೈನ್ ಶಿಕ್ಷಣಕ್ಕೆ ಒತ್ತು ಕೊಡುವ ಸರ್ಕಾರ ನೆಟ್‍ವರ್ಕ್ ಕೊಡದಿರುವುದು ದುರಾದೃಷ್ಟ. ರಾಜ್ಯದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮಕ್ಕಳಿಗೆ ನೆಟ್‍ವರ್ಕ್ ಸಿಗದೆ ಪರದಾಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ವರ್ಕ್ ಫ್ರಂ ಹೋಂ ಮಾಡುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಫೋನ್ ಕರೆ ಮಾಡಬೇಕು ಎಂದರೂ ಗುಡ್ಡ, ಬೆಟ್ಟ ಹತ್ತಿ ಹೋಗಬೇಕು. ಅಲ್ಲಿ ಒಂದು ಪಾಯಿಂಟ್ ನೆಟ್‍ವರ್ಕ್ ಸಿಕ್ಕರೆ ಅದೃಷ್ಟ ಎಂದು ರಾಜಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮನೆ ಮನೆಗೆ ಹೋಗಿ ಮನವರಿಕೆ
ಮೊಬೈಲ್ ನೆಟ್‍ವರ್ಕ್ ಕೊಡುವಂತೆ ಹಲವು ಭಾರಿ ಬೇಡಿಕೆ ಸಲ್ಲಿಸಿದ್ದೇವೆ. ಚುನಾವಣೆ ಹೊತ್ತಿಗೆ ಮತ ಕೇಳಲು ಬರುವವರು ಚುನಾವಣೆ ಬಳಿಕ ನೆಟ್‍ವರ್ಕ್ ಕೊಡಿಸುವ ಭರವಸೆ ನೀಡುತ್ತಿದ್ದರು. ಹಾಗಾಗಿ ಈ ಭಾರಿ ನೋ ನೆಟ್‍ವರ್ಕ್, ನೋ ವೋಟಿಂಗ್ ಅಭಿಯಾನ ಶುರು ಮಾಡಿದ್ದೇವೆ. ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಯುವಕರೆಲ್ಲ ಗ್ರೂಪ್‍ನಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ರಾಜಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | 5ಜಿ ಯುಗದಲ್ಲೂ ಇಲ್ಲ ಸಿಗ್ನಲ್, ನೆಟ್ವರ್ಕ್ಗಾಗಿ ಮರದಡಿ ಟೆಂಟ್, ಆನ್‍ಲೈನ್ ಕ್ಲಾಸ್ಗಾಗಿ 12 ಕಿ.ಮೀ ಹೋಗ್ತಾರೆ ಸ್ಟೂಡೆಂಟ್ಸ್
ಯುವಕರಷ್ಟೆ ಅಲ್ಲ ಈ ವ್ಯಾಪ್ತಿಯ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ತೆರಳಿ ಹಿರಿಯರಿಗೂ ನೆಟ್‍ವರ್ಕ್ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಲು ಯೋಜಿಸಲಾಗಿದೆ. ಚುನಾವಣೆ ಪ್ರಚಾರದಂತೆಯೆ ಈ ಕಾರ್ಯವನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾತ್ರವಲ್ಲ, ಶಿವಮೊಗ್ಗ ಜಿಲ್ಲೆಯ ಹಲವು ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಇದೆ. ತೀರ್ಥಹಳ್ಳಿ, ಸಾಗರ, ಹೊಸನಗರದ ಬಹುಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲವಾಗಿದೆ. ಈಗ ಈ ಅಭಿಯಾನದಿಂದ ರಾಜಕಾರಣಿಗಳಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200