ಶಿವಮೊಗ್ಗ ಲೈವ್.ಕಾಂ | SHIMOGA | 26 ನವೆಂಬರ್ 2019
ಕೊಡಚಾದ್ರಿ ಬೆಟ್ಟದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿಗಳು. ಇದರ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪ್ಲಾಸ್ಟಿಕ್ ಕಂಡು ಮಲೆನಾಡಿಗರು ದಂಗಾಗಿದ್ದರು. ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಅದಕ್ಕಾಗಿ ಹೊಸ ಪ್ಲಾನ್ ಸಿದ್ಧಪಡಿಸಿಕೊಂಡಿದೆ. ತಿರುಪತಿ, ಮೈಸೂರು ಜೂ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಿದೆ. ‘ಸ್ಟಿಕರ್’ ಫಾರ್ಮುಲಾ ಅಳವಡಿಸಿಕೊಳ್ಳಲು ಮುಂದಾಗಿದೆ.
ಟೂರಿಸ್ಟ್’ಗಳ ಮೇಲೆ ನಿಗಾ
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೂ ಬೆಂಗಳೂರು ಸೇರಿ ಬೇರೆಡೆಯಿಂದ ವೀಕೆಂಡ್ ಕಳೆಯಲು ಬರುವವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಜಿಲ್ಲಾಡಳಿತದ ನಿರ್ದೇಶನದಂತೆ ಪ್ರವಾಸಿಗರ ಮೇಲೆ ನಿಗಾ ಇಡಲಾಗುತ್ತಿದೆ.
ಐದು ಜಾಗದಲ್ಲಿ ನಿಗಾ
ಈಗಾಗಲೇ ಪೊಲೀಸ್ ಇಲಾಖೆಯಿಂದ ನೇಮಿಸಿರುವ ಹೋಂ ಗಾರ್ಡ್ಸ್‌ಗಳು ಕಾರ್ಯನಿರ್ವಹಿಸುತ್ತಿರುವ ಸಿಗಂದೂರು, ಕೊಡಚಾದ್ರಿ, ಆಗುಂಬೆ ಮತ್ತು ಕುಂದಾದ್ರಿ ಬೆಟ್ಟದಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ. ಬರುವ ಮಳೆಗಾಲದಿಂದ ಜೋಗ ಜಲಪಾತಕ್ಕೂ ಈ ನಿಯಮ ಅನ್ವಯವಾಗಲಿವೆ. ಪ್ರವಾಸಿಗರಿಗೆ ಸ್ಟಿಕರ್ ಕಡ್ಡಾಯಗೊಳಿಸಲಾಗುತ್ತದೆ.

ಏನಿದು ಸ್ಟಿಕರ್ ನಿಯಮ?
ಪ್ರವಾಸಿಗರು ಈ ಐದು ಜಾಗವನ್ನು ಪ್ರವೇಶಿಸುವುದಕ್ಕೂ ಮುನ್ನ ಅವರು ತಂದಿರುವ ಸಾಮಗ್ರಿಗಳನ್ನು ಚೆಕ್ ಮಾಡಲಾಗುತ್ತದೆ. ಒಂದುವೇಳೆ, ಪ್ಲಾಸ್ಟಿಕ್ ಬಾಟಲ್ ಅಥವಾ ಇನ್ನ್ಯಾವುದೇ ಪ್ಲಾಸ್ಟಿಕ್ ಸಾಮಗ್ರಿ ತಂದಿದ್ದಲ್ಲಿ ಅವುಗಳ ಮೇಲೆ ಸ್ಟಿಕರ್ ಅಂಟಿಸಲಾಗುವುದು.

ಮೊದಲ ಹಂತದಲ್ಲಿ ಸಿಗಂದೂರು, ಕೊಡಚಾದ್ರಿ, ಆಗುಂಬೆ ಮತ್ತು ಕುಂದಾದ್ರಿ ಬೆಟ್ಟದಲ್ಲಿ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲ್‌ಗಳ ಮೇಲೆ ಸ್ಟಿಕರ್ ಅಂಟಿಸಿ ಠೇವಣಿ ರೂಪದಲ್ಲಿ ೫೦-೧೦೦ ರೂ. ಪಡೆಯಲಾಗುವುದು. ಆ ಬಾಟಲ್ ಹಿಂದಿರುಗಿಸಿದ ಬಳಿಕ ಹಣ ವಾಪಸ್ ನೀಡಲಾಗುವುದು. ಈ ನಿಯಮ ಇನ್ನೊಂದು ತಿಂಗಳಲ್ಲಿ ಜಾರಿಗೆ ತರಲಾಗುವುದು ಅಂತಾರೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಸ್.ರಾಮಕೃಷ್ಣ.

ಸಾಮಾನ್ಯವಾಗಿ ಯಾರೂ ಸುಖಾಸುಮ್ಮನೆ ಹಣ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಆಗ ತಾನಾಗೇ ಪ್ಲಾಸ್ಟಿಕ್ ಬಾಟಲ್‌ಗಳು ಎಲ್ಲೆಂದರಲ್ಲಿ ಬಿಸಾಡುವ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

ಗುಟ್ಕಾ, ಸಿಗರೇಟು, ಮದ್ಯ ಬ್ಯಾನ್
ಸದ್ಯ ಈ ಐದು ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಸಲುವಾಗಿ ಗುಟ್ಕಾ, ಸಿಗರೇಟ್, ಮದ್ಯವನ್ನು ಬ್ಯಾನ್ ಮಾಡಲಾಗುತ್ತದೆ. ಪ್ರವಾಸಿ ತಾಣದ ಆವರಣದಲ್ಲಿ ಇವುಗಳನ್ನು ಒಳಬಿಡದಿರಲು ಪ್ರವಾಸೋದ್ಯಮ ಇಲಾಖೆ ಯೋಜಿಸಿದೆ.

ಮೈಸೂರು, ತಿರುಪತಿ ಮಾಡೆಲ್
ಈಗಾಗಲೇ ಮೈಸೂರು ಪ್ರಾಣಿ ಸಂಗ್ರಹಾಲಯ ಮತ್ತು ತಿರುಪತಿಯಲ್ಲಿ ಇಂತಹ ನಿಯಮವಿದ್ದು, ಯಶ ಕೂಡ ಕಂಡಿದೆ. ಈ ಮಾದರಿಯಲ್ಲೇ ಶಿವಮೊಗ್ಗದಲ್ಲೂ ಹೆಜ್ಜೆ ಇಡಲಾಗುತ್ತಿದೆ. ಬರುವ ದಿನಗಳಲ್ಲಿ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಸಿ ತಾಣಗಳಲ್ಲೂ ಪ್ಲಾಸ್ಟಿಕ್ ಬ್ಯಾನ್
ಜಿಲ್ಲೆಯ ಹಲವೆಡೆ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ತಾಣಗಳಲ್ಲಿ ಅಂಗಡಿಗಳು ತಲೆ ಎತ್ತಿವೆ. ಅಲ್ಲಿಯೂ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಬರುವ ದಿನಗಳಲ್ಲಿ ಇದರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲು ಟೂರಿಸಂ ಇಲಾಖೆ ನಿರ್ಧರಿಸಿದೆ.
ಇತ್ತೀಚೆಗೆ ಕೊಡಚಾದ್ರಿಯ ಬೆಟ್ಟದ ತುಂಬಾ ಪ್ಲಾಸ್ಟಿಕ್ ಬಾಟಲ್, ಕ್ಯಾರಿ ಬ್ಯಾಗ್ ಪತ್ತೆಯಾಗಿದ್ದ ವೀಡಿಯೊ ಭಾರಿ ವೈರಲ್ ಆಗಿ ಪ್ರಕೃತಿ ಪ್ರೇಮಿಗಳಿಂದ ಟೀಕೆ ವ್ಯಕ್ತವಾಗಿತ್ತು. ಇದನ್ನು ಮನಗಂಡು ಜಿಲ್ಲಾಡಳಿತ ನೇತೃತ್ವದಲ್ಲಿ ನಾಲ್ಕು ತಾಣಗಳಲ್ಲಿ ಗಸ್ತಿನಲ್ಲಿರುವ ೧೨ ಹೋಂ ಗಾರ್ಡ್‌ಗಳನ್ನು ಬಳಸಿಕೊಂಡೇ ನಿಯಮ ಅನುಷ್ಠಾನಕ್ಕೆ ತರಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
Tourism department to follow tirupathi and mysore model in jog falls, siganduru, kundadri, kodachadri and agumbe. Shimoga tourism department to issue sticker to tourist.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200