ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 31 OCTOBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕರ್ನಾಟಕ ಸಂಘಕ್ಕೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಒಲಿದಿದೆ. ಸಂಘ – ಸಂಸ್ಥೆ ವಿಭಾಗದಲ್ಲಿ ರಾಜ್ಯದ ವಿವಿಧೆಡೆಯ ಪ್ರಮುಖ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ಅಗ್ರ ಸ್ಥಾನದಲ್ಲಿ ಶಿವಮೊಗ್ಗದ ಕರ್ನಾಟಕ ಸಂಘವಿದೆ.
ಸಾಮಾನ್ಯವಾಗಿ ಕರ್ನಾಟಕ ಸಂಘ ಎಂದರೆ ‘ಬಸ್ ಸ್ಟಾಪ್ ಒಂದರ ಹೆಸರು’ ಎಂದು ಅಂದುಕೊಂಡವರೆ ಹೆಚ್ಚು. ಆದರೆ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನು ಶ್ರೀಮಂತಗೊಳಿಸುವಲ್ಲಿ ಕರ್ನಾಟಕ ಸಂಘ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅನೇಕ ಹಿರಿಯ ಮತು ಉದಯೋನ್ಮುಖ ಸಾಹಿತಿಗಳಿಗೆ ಸಂಘ ಆಸರೆಯಾಗಿದೆ. ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರಿಗು ಕರ್ನಾಟಕ ಸಂಘ ಭವನ ದೊಡ್ಡ ವೇದಿಕೆಯಾಗಿದೆ.
ಕರ್ನಾಟಕ ಸಂಘದ ಬಗ್ಗೆ ಇಲ್ಲಿದೆ ಟಾಪ್ 7 ಸಂಗತಿ
ಪಾಯಿಂಟ್ 1 – ದಿಗ್ಗಜ ಸಾಹಿತಿಗಳ ಸಲಹೆ
ಕೃಷಿ ಮತ್ತು ವ್ಯಾಪಾರ ಕೇಂದ್ರವಾಗಿದ್ದ ಶಿವಮೊಗ್ಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ನಿರ್ಮಿಸಿದ್ದು ಕರ್ನಾಟಕ ಸಂಘ. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ. ದ.ರಾ.ಬೇಂದ್ರೆ ಅವರ ಸಲಹೆಯಂತೆ 1930ರ ನವೆಂಬರ್ 8ರಂದು ಕರ್ನಾಟಕ ಸಂಘ ಆರಂಭವಾಯಿತು. ರಾಷ್ಟ್ರಕವಿ ಕುವೆಂಪು ಅವರು ಸಂಘವನ್ನು ಉದ್ಘಾಟಿಸಿದರು. ಆನಂದ, ಎಸ್.ವಿ.ಕೃಷ್ಣಮೂರ್ತಿರಾವ್, ಗುರುರಾವ್ ದೇಶಪಾಂಡೆ, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಟನಂಜಪ್ಪ, ದೇವಂಗಿ ಮಾನಪ್ಪ ಅವರು ಕರ್ನಾಟಕ ಸಂಘದ ಪ್ರಾರಂಭಕ್ಕೆ ಕಾರಣ.
ಪಾಯಿಂಟ್ 2 – ಕೃಷ್ಣ ಕೆಫೆ ಮೇಲಿತ್ತು ಕಚೇರಿ
1936ರವರೆಗೆ ಕರ್ನಾಟಕ ಸಂಘದ ಕಚೇರಿ ಬಿ. ಹೆಚ್. ರಸ್ತೆಯ ಕೃಷ್ಣ ಕೆಫೆಯ ಮಹಡಿಯ ಮೇಲಿನ ಕೊಠಡಿಯಲ್ಲಿತ್ತು. ನಂತರ ನಗರಸಭೆಯ ಕೊಠಡಿಯೊಂದರಲ್ಲಿ ನಡೆಯುತ್ತಿತ್ತು. ಮುಂದೆ ನಗರಸಭೆಯು ಬಿ.ಹೆಚ್. ರಸ್ತೆಯಲ್ಲಿ ವಿಶಾಲ ನಿವೇಶನ ನೀಡಿತು. ಶಿವಮೊಗ್ಗದ ಅಡಿಕೆ ಬೆಳೆಗಾರ, ವ್ಯಾಪಾರಿ ಹಸೂಡಿ ವೆಂಕಟಶಾಸ್ತ್ರಿ ಅವರು 30 ಸಾವಿರ ರೂ. ದಾನ ನೀಡಿ ಕಟ್ಟಡ ಕಟ್ಟಿಸಿದರು. 1949ರಲ್ಲಿ ಸಾಹಿತಿ ಬಿ.ಎಂ.ಶ್ರೀ ಅವರು ಈ ಕಟ್ಟಡದ ಶಂಕುಸ್ಥಾಪನೆ ಮಾಡಿದರು.1943ರ ಡಿಸೆಂಬರ್ 11ರಂದು ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಕಟ್ಟಡ ಉದ್ಘಾಟಿಸಿದರು. ಶಾಸ್ತ್ರಿಗಳ ನಿಧನದ ನಂತರ ಡಾ.ದ.ರಾ.ಬೇಂದ್ರೆ ಯವರ ಸೂಚನೆ ಮೇರೆಗೆ ಈ ಕಟ್ಟಡಕ್ಕೆ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನ ಎಂದು ಹೆಸರಿಡಲಾಯಿತು. ಈ ಭವನದಲ್ಲಿ ಸುಮಾರು 250 ಜನರು ಕೂರುವಷ್ಟು ಸ್ಥಳಾವಕಾಶವಿದೆ.
ಪಾಯಿಂಟ್ 3 : ಲಾಂಛನದಲ್ಲಿ ನವಿಲು
ನವಿಲು, ಕರ್ನಾಟಕ ಸಂಘದ ಲಾಂಛನ. ರಾಷ್ಟ್ರಪಕ್ಷಿ, ಅಹಿಂಸೆ ಮತ್ತು ಜ್ಞಾನದ ಸಂಕೇತ. ಇನ್ನು, ರಾಷ್ಟ್ರಕವಿ ಕುವೆಂಪು ಅವರ ನವಿಲು ಕವನ ಸಂಕಲನವನ್ನು ಕರ್ನಾಟಕ ಸಂಘ ಪ್ರಕಟಿಸಿತು. ಇದು ಕೂಡ ಲಾಂಛನಕ್ಕೆ ಪ್ರೇರಣೆಯಾಯಿತು ಎಂದು ಹೆಚ್.ಖಂಡೋಬರಾವ್ ಅವರು ದಾಖಲಿಸಿದ್ದಾರೆ.
ಪಾಯಿಂಟ್ 4 : ಎರಡು ಸಾಹಿತ್ಯ ಸಮ್ಮೇಳನಗಳು
ಕರ್ನಾಟಕ ಸಂಘದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದ್ದವು. 1943ರಲ್ಲಿ ದ.ರಾ. ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ 27ನೇ ಸಮ್ಮೇಳನ, 1976ರ ಡಿಸೆಂಬರ್‌ನಲ್ಲಿ ಎಸ್.ವಿ.ರಂಗಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ 49ನೇ ಸಾಹಿತ್ಯ ಸಮ್ಮೇಳನಗಳು ಇಲ್ಲಿ ನಡೆದಿದ್ದವು. 1978ರಲ್ಲಿ ಡಾ. ಹೆಚ್.ತಿಪ್ಪೇರುದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಂಘ ನಿರ್ವಹಿಸಿತ್ತು.
ಪಾಯಿಂಟ್ 5 : ರಾಷ್ಟ್ರಕವಿಗಳು ಸಂಘದ ಗೌರವ ಸದಸ್ಯರು
ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಶಿವಮೊಗ್ಗ ಜಿಲ್ಲೆಯವರಿಗೆ ಕರ್ನಾಟಕ ಸಂಘದಲ್ಲಿ ಗೌರವ ಸದಸ್ಯತ್ವ ನೀಡಲಾಗುತ್ತಿದೆ. 1991ರಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಪ್ರೊ. ಎಸ್.ವಿ.ಪರಮೇಶ್ವರ ಭಟ್ಟ ಅವರಿಗೆ ಮೊದಲ ಬಾರಿ ಗೌರವ ಸದಸ್ಯತ್ವ ನೀಡಲಾಯಿತು. ಬಳಿಕ ಎಂ.ಕೆ.ಇಂದಿರಾ, ಪಿ.ಲಂಕೇಶ್, ಡಾ. ಜಿ.ಎಸ್.ಶಿವರುದ್ರಪ್ಪ, ಡಾ. ಹಾ.ಮಾ.ನಾಯಕ, ಡಾ. ಯು.ಆರ್.ಅನಂತರಮೂರ್ತಿ, ಡಾ. ಕೆ.ವಿ.ಸುಬ್ಬಣ್ಣ, ಡಾ. ಶಿವಮೊಗ್ಗ ಸುಬ್ಬಣ್ಣ, ಡಾ. ನಾ.ಡಿಸೋಜ, ಡಾ.ಗಿರೀಶ್ ಕಾಸರವಳ್ಳಿ, ಡಾ. ಎಂ.ಚಿದಾನಂದಮೂರ್ತಿ, ಡಾ. ಎನ್.ಎಸ್.ಲಕ್ಷ್ಮಿನಾರಾಯಣ, ಹೆಚ್.ಎಸ್.ವೆಂಕಟೇಶಮೂರ್ತಿ ಸಂಘದ ಗೌರವ ಸದಸ್ಯರು. ಪ್ರತಿ ವರ್ಷ ಗೌರವ ಸದಸ್ಯರ ಹೆಸರಿನಲ್ಲಿ ಪುಸ್ತಕ ಬಹುಮಾನ ನೀಡಲಾಗುತ್ತದೆ.
ಪಾಯಿಂಟ್ 6 : ಜೀವಮಾನ ಸಾಧನೆಗೆ ಪ್ರಶಸ್ತಿ
ನಾಡು ನುಡಿಗೆ ಸೇವೆ ಸಲ್ಲಿಸಿರುವ ಗಣ್ಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ವರ್ಷಕ್ಕೆ ಎರಡು ಪ್ರಕಾರಗಳಂತೆ ಎರಡು ವರ್ಷಗಳಲ್ಲಿ ನಾಲ್ವರು ಶ್ರೇಷ್ಠ ಸಾಧಕರ ಹೆಸರಿನಲ್ಲಿ ನೀಡಲಾಗುತ್ತಿದೆ. ಸಂಶೋಧನೆಗಾಗಿ ಡಾ. ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ ಕಾವ್ಯಕ್ಕಾಗಿ ಡಾ. ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿ, ವಿಜ್ಞಾನ ಸಾಹಿತ್ಯಕ್ಕಾಗಿ ಡಾ. ಶಿವರಾಮ ಕಾರಂತ ಪ್ರಶಸ್ತಿ, ಸಾಹಿತ್ಯ ವಿಮರ್ಶೆಗಾಗಿ ಪ್ರೊ. ತೀ. ನಂ. ಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
ಪಾಯಿಂಟ್ 7 : ವಿವಿಧ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು
ಕರ್ನಾಟಕ ಸಂಘವು ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕನ್ನಡಪರ ಚಟುವಟಿಕೆ, ಸಾಹಿತ್ಯ ಕಾರ್ಯಕ್ರಮಗಳು, ಸುಗಮ ಸಂಗೀತ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಸಂಘದ ವತಿಯಿಂದ ಪುಸ್ತಕಗಳ ಪ್ರಕಟಣೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಕುವೆಂಪು ವಿವಿಯಲ್ಲಿ ಎಂ.ಎ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ರಾಷ್ಟ್ರಕವಿ ಕುವೆಂಪು ಮತ್ತು ಎಸ್.ವಿ.ಪರಮೇಶ್ವರ ಭಟ್ಟರ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುತ್ತಿದೆ.
ಇದನ್ನೂ ಓದಿ – ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್ ಬಳಸಬಹುದು, ಹೇಗೆ? ಬರ್ತಿದೆ ಹೊಸ update