ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 9 DECEMBER 2024
ಶಿವಮೊಗ್ಗ : ದಿನೇ ದಿನೆ ಸೈಬರ್ ಖದೀಮರ (Cyber Crime) ಹಾವಳಿ ಹೆಚ್ಚಾಗುತ್ತಿದೆ. ನಾನಾ ತಂತ್ರ, ಆಮಿಷಗಳನ್ನು ಒಡ್ಡಿ, ಜನರನ್ನು ತಮ್ಮ ಬಲೆಗೆ ಕೆಡವಿಕೊಂಡು, ಬ್ಯಾಂಕ್ ಖಾತೆಗಳನ್ನು ಬರಿದಾಗಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ದಿನಕೊಬ್ಬರಾದರು ಸೈಬರ್ ಕಳ್ಳರ ಸುಳಿಗೆ ಸಿಲುಕುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ದಾಖಲಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈಚೆಗೆ ವರದಿಯಾಗುತ್ತಿರುವ ಸೈಬರ್ ಅಪರಾಧಗಳು ವಿವರ ಇಲ್ಲಿದೆ.
» ಸೈಬರ್ ಕ್ರೈಮ್ 1
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಸೇರಿದಂತೆ ನಾನಾ ಬಗೆಯ ಹೂಡಿಕೆಯತ್ತ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸೈಬರ್ ಖದೀಮರಿಗೆ ಇದೆ ಬಂಡವಾಳವಾಗಿದೆ. ದೊಡ್ಡ ಮಟ್ಟದ ಲಾಭದ ಆಸೆ ತೋರಿಸುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನರನ್ನು ಖೆಡ್ಡಾಗೆ ಕೆಡವಿಕೊಳ್ಳುತ್ತಿದ್ದಾರೆ. ಷೇರುಗಳ ಮೇಲ ನಿರಂತರವಾಗಿ ಹಣ ಹೂಡಿಕೆ ಮಾಡಿಸಿಕೊಂಡು ಕೊನೆಗೆ ವಂಚಿಸಲಾಗುತ್ತಿದೆ.
» ಸೈಬರ್ ಕ್ರೈಮ್ 2
ಡಿಜಿಟಲ್ ಅರೆಸ್ಟ್
ದಿಢೀರ್ ಅಂತಾ ದೂರ ಸಂಪರ್ಕ ಇಲಾಖೆಯಿಂದ ಕರೆ ಬರುತ್ತದೆ. ಸ್ವಲ್ಪ ಹೊತ್ತಿಗೆ ಪೊಲೀಸ್ ಸಮವಸ್ತ್ರದಲ್ಲಿ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ಮಾಡುತ್ತಾನೆ. ‘ಅಪರಾಧದಲ್ಲಿ ಭಾಗಿಯಾಗಿದ್ದೀರ. ನಿಮ್ಮನ್ನು ಬಂಧಿಸಬೇಕಾಗುತ್ತದೆʼ ಎಂದು ಬೆದರಿಸುತ್ತಾನೆ. ನಿಮ್ಮ ಮನೆಯೊಳಗೆ, ನಿಮ್ಮ ಮೊಬೈಲ್‌ನ ಎದುರಲ್ಲೇ, ವಿಡಿಯೋ ಕಾಲ್‌ನಲ್ಲಿ ನಿಮ್ಮನ್ನ ಬಂಧಿಸಿ ಇಡುತ್ತಾನೆ. ಎಲ್ಲೆಲ್ಲಿಗು ಎದ್ದು ಹೋಗುವಂತಿಲ್ಲ. ಯಾರೊಂದಿಗು ಮಾತನಾಡುವಂತಿಲ್ಲ. ಬಹು ಹೊತ್ತು ಸತಾಯಿಸಿದ ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ. ದುಡ್ಡು ಕೊಡುತ್ತಿದ್ದಂತೆ ಕರೆ ಕಟ್ ಆಗಲಿದೆ. ಇಂತಹ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿವೆ. ಈಚೆಗೆ ಶಿವಮೊಗ್ಗ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದರು.
» ಸೈಬರ್ ಕ್ರೈಮ್ 3
ಪಾರ್ಟ್ ಟೈಮ್ ಜಾಬ್
ಬಿಡುವಿನ ವೇಳೆಯಲ್ಲಿ ಅಥವಾ ಮನೆಯಲ್ಲಿದ್ದಾಗ ಪಾರ್ಟ್ ಟೈಮ್ ಉದ್ಯೋಗ ಮಾಡಬಹುದು ಎಂಬ ಕಲ್ಪನೆಯಿಂದ ಜನ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡುತ್ತಾರೆ. ಪಾರ್ಟ್ ಟೈಮ್ ಉದ್ಯೋಗದ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ ಸ್ವವಿವರ ದಾಖಲಿಸುತ್ತಾರೆ. ಕೂಡಲೆ ಅವರನ್ನು ಟೆಲಿಗ್ರಾಂ ಆಪ್‌ನ ಗ್ರೂಪ್‌ಗೆ ಸೇರಿಸಿಕೊಂಡು, ಸಣ್ಣಪುಟ್ಟ ಟಾಸ್ಕ್ ನೀಡಲಾಗುತ್ತದೆ. ಅದು ಪೂರೈಸುತ್ತಿದ್ದಂತೆ ಅಲ್ಪ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಸ್ವಲ್ಪ ಸಮಯದ ಬಳಿಕ ಟಾಸ್ಕ್ ಮಾಡಲು ಹಣ ಪಾವತಿಸಬೇಕು. ಟಾಸ್ಕ್ ಪೂರೈಸಿದ ಬಳಿಕ ಅಧಿಕ ಲಾಭದೊಂದಿಗೆ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ನಂಬಿಸಲಾಗುತ್ತದೆ. ಹೀಗೆ ಕಟ್ಟಿದ ಹಣ ಮತ್ತೆ ಬರುವುದೇ ಇಲ್ಲ. ಇದಕ್ಕೆ ಗೃಹಿಣಿಯರೆ ಅತಿ ಹೆಚ್ಚು ಮೋಸ ಹೋಗಿದ್ದಾರೆ.
» ಸೈಬರ್ ಕ್ರೈಮ್ 4
ಪಾರ್ಸಲ್‌ನಲ್ಲಿ ಡ್ರಗ್ಸ್ ಇದೆ
ಪ್ರತಿಷ್ಠಿತ ಕೊರಿಯರ್ ಸಂಸ್ಥೆಯಿಂದ ಎಂದು ಕರೆ ಮಾಡಿ, ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಆತಂಕ ಮೂಡಿಸುತ್ತಾರೆ. ಅಥವಾ ನಿಮ್ಮ ಹೆಸರಿಗೆ ವಿದೇಶದಿಂದ ಪಾರ್ಸಲ್ ಬಂದಿದೆ ಎಂದು ಆಸೆ ಹುಟ್ಟಿಸುತ್ತಾರೆ. ಆ ಬಳಿಕ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ ಬೆದರಿಕೆ ಮತ್ತು ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಾರೆ.
» ಸೈಬರ್ ಕ್ರೈಮ್ 5
ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಫೈಲ್
ಪ್ರತಿಷ್ಠಿತ ಬ್ಯಾಂಕುಗಳ ಮೊಬೈಲ್ ಅಪ್ಲಿಕೇಷನ್ ಅಪ್‌ಡೇಟ್ ಆಗಿದೆ. ಹೊಸ ಆಪ್ ಇಲ್ಲೇ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ವಾಟ್ಸಪ್‌ಗೆ apk ಫೈಲ್ ಕಳುಹಿಸಲಾಗುತ್ತಿದೆ. ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿವರಗಳು, ಬ್ಯಾಂಕ್ ಖಾತೆಯ ನಂಬರ್‌ಗಳನ್ನು ಎಂಟ್ರಿ ಮಾಡುತ್ತಿದ್ದಂತೆ ಸೈಬರ್ ಖದೀಮರು ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಾರೆ.
ಇದನ್ನೂ ಓದಿ » ಕುವೆಂಪು ರಂಗಮಂದಿರ ಮುಂದೆ ಬಿಗುವಿನ ವಾತಾವರಣ, MLA, ಕಮಿಷನರ್ ಮಧ್ಯೆ ಮಾತಿಗೆ ಮಾತು, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422