SHIVAMOGGA LIVE NEWS | 17 JUNE 2024
SHIMOGA : ಎಂ.ಬಿ.ಭಾನುಪ್ರಕಾಶ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ. ಎಂತಹ ಪರಿಸ್ಥಿತಿಯಲ್ಲು ಸಂಘಟನೆ ಮತ್ತು ಪಕ್ಷಕ್ಕಾಗಿ ನಿಲ್ಲುತ್ತಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರೂ, ಸಾಮಾನ್ಯ ಕಾರ್ಯಕರ್ತರ (Party Worker) ಜೊತೆಗೆ ಸ್ನೇಹದಿಂದ ಬೆರೆಯುತ್ತಿದ್ದರು. ಇದೆ ಕಾರಣಕ್ಕೆ ಭಾನುಪ್ರಕಾಶ್ ಅವರು ಸಂಘ ಪರಿವಾರದ ಪ್ರತಿಯೊಬ್ಬರಿಗು ಪರಿಚಿತ.
![]() |
ಕಾರ್ಯಕರ್ತರ ಮಧ್ಯದಲ್ಲೇ ಕೊನೆಯುಸಿರು
ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಗೋಪಿ ಸರ್ಕಲ್‌ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಸಂದರ್ಭ ಎಂ.ಬಿ.ಭಾನುಪ್ರಕಾಶ್ ಅವರು ಮುಖಂಡರನ್ನು ಮಾತ್ರವಲ್ಲ, ಕಾರ್ಯಕರ್ತರ ಜೊತೆಗು ಬೆರೆತು ಮಾತನಾಡಿಸುತ್ತಿದ್ದರು. ಈಚೆಗಷ್ಟೆ ಪಕ್ಷ ಸೇರಿ, ಸಕ್ರಿಯವಾಗಿರುವವರನ್ನು ಇವತ್ತು ಕರೆದು ಮಾತನಾಡಿಸಿದ್ದರು. ಇದಾಗಿ ಕೆಲವೇ ಕ್ಷಣದಲ್ಲಿ ಕಾರ್ಯಕರ್ತರ ನಡುವೆಯೇ ಅವರು ಕೊನೆಯುಸಿರೆಳೆದರು.
ಜಿಲ್ಲಾ ಪಂಚಾಯಿತಿಯಿಂದ ಪರಿಷತ್ ತನಕ
ಶಿವಮೊಗ್ಗ ತಾಲೂಕು ಮತ್ತೂರಿನ ಎಂ.ಬಿ.ಭಾನುಪ್ರಕಾಶ್ ಅವರು ಬಿಜೆಪಿಯಲ್ಲಿ ಕೆಳಹಂತದಿಂದ ಬೆಳೆದು ಬಂದವರು. ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು, ರಾಜ್ಯ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 2001 ರಿಂದ 2005ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ಗಾಜನೂರು ಕ್ಷೇತ್ರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಈ ಹಿನ್ನೆಲೆ 2005ರಲ್ಲಿ ಲೋಕಸಭೆ ಉಪ ಚುನಾವಣೆ ನಡೆದಿತ್ತು. ಎಸ್.ಬಂಗಾರಪ್ಪ ವಿರುದ್ಧ ಬಿಜೆಪಿಯಿಂದ ಎಂ.ಬಿ.ಭಾನುಪ್ರಕಾಶ್ ಕಣಕ್ಕಿಳಿದಿದ್ದರು. 1.48 ಲಕ್ಷ ಮತ ಗಳಿಸಿದ್ದರು. 2013 ರಿಂದ 2019ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಇದನ್ನೂ ಓದಿ – ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ಗೆ ಹೃದಯಾಘಾತ, ನಿಧನ
ನಳೀನ್ ಕುಮಾರ್ ಕಟೀಲ್ ಅವರು 2019ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಎಂ.ಬಿ.ಭಾನುಪ್ರಕಾಶ್ ಅವರು ರಾಜ್ಯ ಉಪಾಧ್ಯಕ್ಷರಾಗಿದ್ದರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಭಾನಪ್ರಕಾಶ್ ಅವರಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ನೀಡಲಾಗಿತ್ತು. ಅದರೆ ಯಡಿಯೂರಪ್ಪ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳದೆ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ದುಡಿಯುವುದಾಗಿ ಘೋಷಿಸಿದ್ದರು.
ಈಚೆಗೆ ರಾಜ್ಯ ಪ್ರಕೋಷ್ಠಗಳ ಸಂಯೋಜಕರು, ಲೋಕಸಭೆ ಕ್ಲಸ್ಟರ್ ಸಂಯೋಜಕರಾಗಿ ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲುವಿಗೆ ಎಂ.ಬಿ.ಭಾನುಪ್ರಕಾಶ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ – ‘ಕಾರು ಹತ್ತುತ್ತಿದ್ದಂತೆ ಕುಸಿದು ಬಿದ್ದರುʼ, ಭಾನುಪ್ರಕಾಶ್ ಅವರ ಕೊನೆ ಕ್ಷಣಗಳನ್ನು ವಿವರಿಸಿದ ಅರುಣ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200