ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2021
ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಯಾತ್ರೆಯಿಂದಾಗಿ ನಿರೀಕ್ಷೆ ಗರಿಗೆದರಿವೆ. ಕೊನೆ ಹಂತದ ಲಾಬಿ ಕೂಡ ಬಿರುಸು ಪಡೆದುಕೊಂಡಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಶಾಸಕರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬುದರ ಕುರಿತು ಕುತೂಹಲ ಹೆಚ್ಚಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ. ಇವರಲ್ಲಿ ಒಬ್ಬರು ಅಥವಾ ಇಬ್ಬರು ಸಂಪುಟ ಸೇರ್ಪಡೆ ಸಂಭವವಿದೆ.
‘ಗೂಟ ಹೋಯ್ತು ಅಂದುಕೊಳ್ಳುತ್ತೇನೆ’
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ಬಿಜೆಪಿಯ ಪ್ರಭಾವಿ ಮುಖಂಡ. ಸಚಿವ ಸ್ಥಾನ ಕಳೆದುಕೊಳ್ಳುವ ವಿಚಾರ ತಿಳಿಯುತ್ತಿದ್ದಂತೆ ತಮ್ಮ ಹತಾಷೆ ಹೊರ ಹಾಕಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಸಚಿವ ಸ್ಥಾನ ಹೋದರೆ ಗೂಟ ಹೋಯ್ತು ಅಂದುಕೊಳ್ಳುತ್ತೇನೆ ಎಂದಿದ್ದರು. ಪಕ್ಷದ ಸಂಘಟನೆ ಕೆಲಸದಲ್ಲಿ ತೊಡಿಗಿಸಿಕೊಳ್ಳುವುದಾಗಿ ಹೇಳಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ, ಬೊಮ್ಮಾಯಿ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಯಾವುದು ನೀಡಿದರೂ ನಿಭಾಯಿಸುತ್ತೇನೆ ಎಂದಿದ್ದರು. ಈ ಮೂಲಕ ತಾವಿನ್ನೂ ಸಚಿವ ಸ್ಥಾನದ ರೇಸ್ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಕುತೂಹಲ ಮೂಡಿಸಿದೆ ಆರಗ ಬೆಂಗಳೂರು ಟೂರ್
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಸಂಪುಟ ಸೇರಲಿದ್ದಾರೆ ಎಂದು ಬೆಂಬಲಿಗರು ವಿಶ್ವಾಸದಲ್ಲಿದ್ದಾರೆ. ಈ ನಡುವೆ ಆರಗ ಜ್ಞಾನೇಂದ್ರ ಅವರು ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವತ್ತು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿರುವ ನೂತನ ಸಚಿವರ ಪಟ್ಟಿಯಲ್ಲಿ ಅವರ ಹೆಸರಿರಬಹುದು ಎಂದು ಬೆಂಬಲಿಗರು ನಂಬಿಕೆಯಲ್ಲಿದ್ದಾರೆ.
‘ಹಾಲಪ್ಪಗೆ ಸಚಿವ ಸ್ಥಾನ ಫಿಕ್ಸ್’
ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಗೂ ಸಚಿವ ಸ್ಥಾನ ಸಿಗುವ ಸಂಭವವಿದೆ ಎಂದು ಅವರ ಅಭಿಮಾನಿಗಳ ನಂಬಿಕೆಯಾಗಿದೆ. ಹಿರಿಯರೆಲ್ಲ ಅವಕಾಶ ನೀಡಿದರೆ ತಮಗೆ, ಆರಗ ಜ್ಞಾನೇಂದ್ರ ಅವರಿಗೆ ಅವಕಾಶವಾಗಲಿದೆ ಎಂದು ಇತ್ತೀಚೆಗೆ ಹಾಲಪ್ಪ ಅವರು ಹೇಳಿದ್ದರು. ಅಲ್ಲದೆ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂದೂ ಹೇಳಿದ್ದಾರೆ. ಹಾಗಾಗಿ ಹಾಲಪ್ಪ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂದು ಬೆಂಬಲಿಗರ ವಿಶ್ವಾಸವಾಗಿದೆ.
ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ. ಹಲವರು ಸುದ್ದಿಗೋಷ್ಠಿಗಳನ್ನು ನಡೆಸಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಹಾಗಾಗಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಅನ್ನವುದು ಈಗ ತೀವ್ರ ಕುತೂಹಲ ಮೂಡಿಸಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422