ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MARCH 2021
ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿದರೆ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಾಸಕ ಸಂಗಮೇಶ್ವರ್ ಅವರು ಆತಂಕಪಡುವ ಅಗತ್ಯವಿಲ್ಲ. ಆದರೆ ಈ ಸರ್ಕಾರದಲ್ಲಿ ಸಂಗಮೇಶ್ವರ್‍ಗೆ ನ್ಯಾಯ ಸಿಗುವುದಿಲ್ಲ. ಆದ್ದರಿಂದ ಜಾಮೀನು ಪಡೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಠಾಣೆಗೆ ಮುತ್ತಿಗೆ ಹಾಕುತ್ತೇವೆ
ಪೊಲೀಸರು ಇನ್ಮುಂದೆಯಾದರೂ ಎಚ್ಚರಿಕೆಯ ಹೆಜ್ಜೆ ಇಡಬೇಕು. ನಾವು ಅಧಿಕಾರಕ್ಕೆ ಬಂದಾಗ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, ಸುಖಾ ಸುಮ್ಮನೆ ಕೇಸು ಹಾಕಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಶಿವಮೊಗ್ಗ ಜಿಲ್ಲೆ, ಭದ್ರಾವತಿಯ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದರು.
ಸಂಗಮೇಶ್ ರಕ್ಷಣೆಗಾಗಿ ಪ್ರತಿಭಟನೆಯಲ್ಲ
ಇಂದಿನ ಜನಾಕ್ರೋಶ ಪ್ರತಿಭಟನೆ ಕೇವಲ ಸಂಗಮೇಶ್ವರ್ ಅವರನ್ನು ರಕ್ಷಣೆ ಮಾಡಲು ಅಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರ ಮೇಲೆ ಸರ್ಕಾರ ಹಾಗೂ ಪೊಲೀಸರು ಸುಳ್ಳು ಕೇಸು ಹಾಕಿದರೆ, ಕಾಂಗ್ರೆಸ್ ಸಹಿಸುವುದಿಲ್ಲ. ಪೊಲೀಸರನ್ನು ನೇಮಿಸಿಕೊಂಡಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಘೋಷಣೆಯಿಂದ ಕೋಮು ಪ್ರಚೋದನೆ
ಜಿಲ್ಲಾ ರಕ್ಷಣಾಧಿಕಾರಿ ಅವರ ಬಳಿ ಈ ಕೇಸ್ ಕುರಿತು ಮಾತನಾಡಿದೆ. ಸುಳ್ಳು ಕೇಸು ದಾಖಲಿಸಿದ್ದೀರಿ, ಬಿ ರಿಪೋರ್ಟ್ ಹಾಕಿ ಎಂದು ತಿಳಿಸಿದ್ದೆ. ಆದರೆ ನಾನು ಮಾತನಾಡಿದ ಮರುದಿನವೇ ಸಂಗಮೇಶ್ ಅವರ ಮಗನನ್ನು ಬಂಧಿಸಿದ್ದಾರೆ. ಯಾವ ಉದ್ದೇಶದಿಂದ ಸಂಗಮೇಶ್ವರ್ ಮಗನನ್ನು ಬಂಧಿಸಿದ್ದಾರೆ. ಕಬಡ್ಡಿ ಪಂದ್ಯಾವಳಿಯಲ್ಲಿ ಅನಗತ್ಯವಾಗಿ ಜೈ ಶ್ರೀರಾಮ್ ಎಂದು ಕೂಗಿ ಕೋಮು ಪ್ರಚೋದನೆಗೆ ಮುಂದಾಗಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋನಿಯಾ ಗಾಂಧಿ ವಿರುದ್ಧ ಕೇಸ್ ಹಾಕಿದ್ದರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾವನೋ ತಗಡು ಕಂಪ್ಲೇಟ್ ಕೊಟ್ಟ ಎಂದಾಕ್ಷಣ ಸಾಗರ ಪೊಲೀಸರು, ಸೋನಿಯಾ ಗಾಂಧಿ ಅವರ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ಯಾವುದನ್ನೂ ನಾವು ಮರೆತಿಲ್ಲ. ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿದವರಿಗೆ ಸಂಗಮೇಶ್ ಮೇಲೆ ಪ್ರಕರಣ ದಾಖಲಿಸುವುದು ಕಷ್ಟವಲ್ಲ ಬಿಡಿ ಎಂದು ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲಿ ಬೃಹತ್ ಮೆರವಣಿಗೆ
ಜನಾಕ್ರೋಶ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ, ಸೈನ್ಸ್ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದರಿಂದ ಬಿ.ಹೆಚ್.ರಸ್ತೆಯಲ್ಲಿ ವಾಹನ ಸಂಚಾರ ಸಂಪರ್ಣ ನಿಷೇಧಿಸಲಾಗಿತ್ತು. ಹಾಗಾಗಿ ಶಿವಮೊಗ್ಗ ಸಿಟಿಯ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಾಜಿ ಸಚಿವರಾದ ಡಾ. ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಸ್.ಆರ್.ಪಾಟೀಲ್, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಯು.ಟಿ.ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವನಾರಾಯಣ್, ಸಲೀಂ ಅಹಮದ್, ಪ್ರಮುಖರಾದ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಸಂಗಮೇಶ್ವರ್, ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422