ಶಿವಮೊಗ್ಗ ಲೈವ್.ಕಾಂ | SHIMOGA NEWS | 19 FEBRUARY 2021
ಶಿವಮೊಗ್ಗ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ, ಜಿಲ್ಲಾಧ್ಯಕ್ಷರ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕು, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂಬ ಆಗ್ರಹ ಕೇಳಿ ಬಂತು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ನೇತೃತ್ವದಲ್ಲಿ ಜೆಡಿಎಸ್‍ನ ಜಿಲ್ಲಾ ಕಚೇರಿ ಗಾಂಧಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ, ಜಿಲ್ಲಾಧ್ಯಕ್ಷರ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ
ತಾಲೂಕು ಘಟಕದ ಅಧ್ಯಕ್ಷರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷ ಸಂಘಟನೆ ಕುರಿತು ಮಾತನಾಡಿದ ಬಹುತೇಕರು, ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಅವರಿಗೆ ಜಿಲ್ಲಾ ಜೆಡಿಎಸ್‍ನ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.
ಏನೇನು ಅಭಿಪ್ರಾಯ ವ್ಯಕ್ತವಾಯ್ತು?
ಹಾಗೆ ಬಂದವರು, ಹೋದವರು – ಸಭೆಯಲ್ಲಿ ಆರ್.ಎಂ.ಮಂಜುನಾಥಗೌಡ ಅವರ ವಿರುದ್ಧ ಮುಖಂಡರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ಬಂದು ಹೀಗೆ ಹೋಗುವವರಿಗೆ ಅಧಿಕಾರ ಕೊಡಬೇಡಿ. ಮಂಜುನಾಥಗೌಡ ಅವರನ್ನು ರಾತ್ರೋರಾತ್ರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅದು ಪಕ್ಷದ ಕ್ರಮವೆ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬೈಕ್ ಜಾಥಾ, ಲಕ್ಷ್ಮೀ ಟಾಕೀಸ್ ಬಳಿ ಟೈರ್ಗೆ ಬೆಂಕಿ ಹಚ್ಚಲು ಯತ್ನ
ಕಾರ್ಯಕರ್ತರಿಗೆ ಅಧಿಕಾರ ಕೊಡಲಿಲ್ಲ – ಜಿಲ್ಲೆಯಲ್ಲಿ ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ಆದರೆ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಲಿಲ್ಲ. ಬೆಂಗಳೂರು ಕೇಂದ್ರಿತವಾಗಿ ಕಾರ್ಯಕರ್ತರಿಗೆ ವಿವಿಧ ಜವಾಬ್ದಾರಿ ನೀಡಲಾಯಿತು.
ಇದನ್ನೂ ಓದಿ | ಶಿವಮೊಗ್ಗಕ್ಕೆ ಪ್ರಜ್ವಲ್, ಶಾರದಾ ಪೂರ್ಯನಾಯ್ಕ್ ವೀಕ್ಷಕರು, ಜೆಡಿಎಸ್ ಪರಿಸ್ಥಿತಿ ಹೇಗಿದೆ? ಏನೆಲ್ಲ ಸವಾಲಿದೆ?
ಶ್ರೀಕಾಂತ್‍ಗೆ ಮುಂದಾಳತ್ವ ಕೊಡಿ – ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಅವರಿಗೆ ಅಧಿಕಾರ ಕೊಡಿ ಎಂದು ಕಾರ್ಯಕರ್ತರು ಆಗ್ರಹಿಸಿದರು. ‘ಎಂ.ಶ್ರೀಕಾಂತ್ ಅವರಿಗೆ ಅಧಿಕಾರ ಕೊಟ್ಟು, ಅವರನ್ನು ಮುಂದೆ ಬಿಟ್ಟು, ಉಳಿದವರೆಲ್ಲ ಹಿಂದೆ ಸರಿಯುವುದಲ್ಲ. ಅವರ ಮುಂದಾಳತ್ವದಲ್ಲಿ ಸಂಘಟನೆ ಆಗಬೇಕು. ಪಕ್ಷಕ್ಕೆ ಹೈಕಮಾಂಡ್‍ನಿಂದ ಹಣಕಾಸಿನ ನೆರವು ಕೂಡ ಕೊಡಬೇಕು’ ಎಂದು ಕುರುಣಾಮೂರ್ತಿ ಹೇಳಿದರು.
ಮಂಜುನಾಥಗೌಡ ಗೈರು, ಆಕ್ರೋಶ
ಕಾರ್ಯಕರ್ತರ ಸಭೆಗೆ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಗೈರಾಗಿದ್ದರು. ‘ಅವರು ಕೋರ್ಟ್‍ಗೆ ಹಾಜರಾಗಬೇಕಿರುವ ಹಿನ್ನೆಲೆ ಸಭೆಗೆ ಬಂದಿಲ್ಲ. ಹಲವು ಹೋರಾಟ ನಡೆಸಿದ್ದಾರೆ. ಪಕ್ಷದ ಸಂಘಟನೆ ಮಾಡುತ್ತಿದ್ದಾರೆ’ ಎಂದು ತೀರ್ಥಹಳ್ಳಿಯ ಸುಂದರೇಶ್ ತಿಳಿಸಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕಾಂತರಾಜು ಅವರು, ಮಂಜುನಾಥಗೌಡ ಅವರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ. ಅಧಿಕಾರ ಇದ್ದಾಗ ಇದ್ದರು. ಅಧಿಕಾರ ಹೋದ ಮರುದಿನದಿಂದ ಈ ಕಡೆ ಬಂದಿಲ್ಲ ಎಂದರು. ಕಾಂತರಾಜು ಅವರೊಂದಿಗೆ ಹಲವರು ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಶ್ರೀಕಾಂತ್ ಅವರು, ಮಂಜುನಾಥಗೌಡ ಅವರು ತೀರ್ಥಹಳ್ಳಿಯಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಆದರೆ ಅವರು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮಾಡಬೇಕು ಎಂದು ಎಲ್ಲರನ್ನು ಸಮಾಧಾನಪಡಿಸಿದರು.
ಇಬ್ಬರು ಸ್ಟಾರ್ ಪ್ರಚಾರಕರಿದ್ದಾರೆ, ಕರೆಯಿಸಿ
ಜೆಡಿಎಸ್ ಪಕ್ಷದಲ್ಲಿ ಇಬ್ಬರು ಸ್ಟಾರ್ ಪ್ರಚಾರಕರಿದ್ದಾರೆ. ಅವರನ್ನು ಕರೆಯಿಸಿ ಯುವಕರ ಸಂಘಟನೆ ಮಾಡಿ. ಯುವಕರಿಲ್ಲದೆ ಪಕ್ಷ ಬಲಿಷ್ಠವಾಗುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರು ಬಂದರೆ ಯುವಕರು ಒಗ್ಗೂಡುತ್ತಾರೆ ಎಂಬ ಸಲಹೆಯು ಕೇಳಿ ಬಂತು.
ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಗೌರವವಿಲ್ಲ
ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಮಾತನಾಡಿ, ಭದ್ರಾವತಿಯಲ್ಲಿ ಜೆಡಿಎಸ್ ಎಂದರೆ ಅಪ್ಪಾಜಿ. ಅವರು ಹೇಳಿದ್ದನ್ನು ಪಾಲಿಸುತ್ತಿದ್ದೆವು. ಆದರೆ ನಾವು ಜೆಡಿಎಸ್‍ನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರೂ, ನಮಗೆ ಪಕ್ಷದಲ್ಲಿ ಯಾವುದೆ ಗೌರವವಿಲ್ಲ. ಬೇರೆ ಪಕ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಗೌರವ ನೀಡಿ, ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಅಂತಹದೆಲ್ಲ ನಡೆಯುತ್ತಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ಹಲವರು ಸಭೆಯಲ್ಲಿ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200