ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 MAY 2024
POLITICAL NEWS : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಲೆಬಿಸಿ ಉಂಟು ಮಾಡಿದ್ದ ಬಂಡಾಯ, ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಾಧಿಸಲಿದೆ. ಟಿಕೆಟ್ ವಂಚಿತರಾಗಿರುವ ಎಸ್.ಪಿ.ದಿನೇಶ್, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಬಸವ ಜಯಂತಿಯಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡು ಅಧಿಕೃತವಾಗಿ ಕಹಳೆ ಮೊಳಗಿಸಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ ಮತ್ತೊಮ್ಮೆ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಇದೆ ಕಾರಣಕ್ಕೆ ಪದವೀಧರರ ನೋಂದಣಿ ಕಾರ್ಯದಲ್ಲಿ ತೊಡಗಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಿದೆ. ಹಾಗಾಗಿ ಎಸ್.ಪಿ.ದಿನೇಶ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಸಿದ್ಧತೆ ಆರಂಭಿಸಿದ ದಿನೇಶ್
ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿ ಎಸ್.ಪಿ.ದಿನೇಶ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ಮಾಡಿಸಿದ್ದರು. ಪತ್ರಗಳನ್ನು ಕಳುಹಿಸಿ, ಸಾಮಾಜಿಕ ಜಾಲತಾಣದ ಮೂಲಕ ಮತದಾರರಿಗೆ ತಮ್ಮ ಪರಿಚಯ ಮಾಡಿಕೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟಿಕೆಟ್ ಭರವಸೆ ನೀಡಿದ್ದರು. ಪ್ರಚಾರದಲ್ಲಿ ತೊಡಗುವಂತೆ ತಿಳಿಸಿದ್ದರು. ಆದರೆ ಟಿಕೆಟ್ ಕೈ ತಪ್ಪಿದೆ. ತಾವು ಸ್ಪರ್ಧಿಸಬೇಕು ಅನ್ನುವುದು ಕೆಪಿಸಿಸಿ ಅಧ್ಯಕ್ಷರ ಆಶಾಯ. ಅಂತೆಯೆ ಸ್ಪರ್ಧೆ ಮಾಡುತ್ತಿದ್ದೇನೆ.ಎಸ್.ಪಿ.ದಿನೇಶ್, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ
ಕೂದಲೆಳೆ ಅಂತರದಲ್ಲಿ ಸೋತಿದ್ದರು
ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆ. 2012ರಲ್ಲಿ ಎಸ್.ಪಿ.ದಿನೇಶ್ ಮೊದಲ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕೇವಲ 918 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. 2018ರಲ್ಲಿ ವಿಧಾನಸಭೆ ಚುನಾವಣೆ ಮುಗಿದು 21 ದಿನಕ್ಕೆ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆದಿತ್ತು. ಈ ಕ್ಷೇತ್ರ ವ್ಯಾಪ್ತಿಯಲ್ಲಿ 27 ಬಿಜೆಪಿ ಶಾಸಕರು ಗೆದ್ದಿದ್ದರು. ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ಮೇಲೆ ವಿಧಾನಸಭೆ ಚುನಾವಣೆಯ ಫಲಿತಾಂಶ ಪರಿಣಾಮ ಬೀರಿತ್ತು. ಹಾಗಾಗಿ ಬಿಜೆಪಿಯ ಆಯನೂರು ಮಂಜುನಾಥ್ ವಿರುದ್ಧ ಎಸ್.ಪಿ.ದಿನೇಶ್ 6 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.
ದಿನೇಶ್ ನಡೆ, ಕೈ ಮುಖಂಡರಿಗೆ ತಲೆಬೇನೆ
ಟಿಕೆಟ್ ಕೈತಪ್ಪಿದ್ದರಿಂದ ಎಸ್.ಪಿ.ದಿನೇಶ್ ಮುನಿಸಿಕೊಂಡಿದ್ದರು. ಲೋಕಸಭೆ ಚುನಾವಣೆ ಪ್ರಚಾರದಿಂದಲು ದೂರ ಉಳಿದಿದ್ದರು. ಈ ಮಧ್ಯೆ ದಿನೇಶ್ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ಸಿಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡರು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ ದಿನೇಶ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು ಪೋಸ್ಟರ್‌ಗಳು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಆಯನೂರು ಮಂಜುನಾಥ್ ವಿರೋಧಿ ಬಣ ಸಕ್ರಿಯವಾಗಿರುವುದು ಗೌಪ್ಯವೇನಲ್ಲ. ಆ ಬಣ ಎಸ್.ಪಿ.ದಿನೇಶ್ ಅವರ ಬೆನ್ನಿಗೆ ನಿಲ್ಲುವ ಸಾಧ್ಯತೆ ಹೆಚ್ಚು. ಇದು ಕಾಂಗ್ರೆಸ್ ಮುಖಂಡರಿಗೆ ತಲೆಬಿಸಿ ಹೆಚ್ಚಿಸಿದೆ.
ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಅಧಿಸುಚನೆ ಪ್ರಕಟಿಸಲಾಗಿದೆ. ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಜೂ.3ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ – ನಿಮ್ ಗಾಡಿ ಮೇಲೆ ಕೇಸ್ ಇದ್ಯಾ? ಚೆಕ್ ಮಾಡೋದು ಈಗ ಸುಲಭ, ಪೊಲೀಸ್ ಇಲಾಖೆಯಿಂದ ಹೊಸ ವೆಬ್‌ಸೈಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422