SHIVAMOGGA LIVE NEWS | 13 NOVEMBER 2023
SHIMOGA : ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ ಜೈಲ್ ರಸ್ತೆಯಲ್ಲಿ ನಡೆದ ಸ್ಮಾರ್ಟ್ ಸಿಟಿ (Smart city) ಕಾಮಗಾರಿ. ಆರು ತಿಂಗಳಿಗು ಹೆಚ್ಚು ಕಾಲ ರಸ್ತೆ ಪುನರ್ ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ಕಳೆಯುವುದರಲ್ಲಿ ರಸ್ತೆ ಗುಂಡಿಮಯವಾಗಿದೆ. ಸ್ಮಾರ್ಟ್ ಸಿಟಿ ಕೇಬಲ್ ಡೆಕ್ನ ಸ್ಲ್ಯಾಬ್ಗಳು ವಾಹನ ಸವಾರರ ಪಾಲಿಗೆ ಯಮ ಸ್ವರೂಪಿಯಾಗಿ ಕಾಡುತ್ತಿವೆ.
ಅರ್ಧ ವರ್ಷದ ಕಾಮಗಾರಿ
ಸ್ಮಾರ್ಟ್ ಸಿಟಿ ಯೋಜನೆ ಅಡಿ ಶಿವಮೊಗ್ಗದ ಜೈಲ್ ರಸ್ತೆಯನ್ನು ಪುನರ್ ನಿರ್ಮಿಸಲಾಯಿತು. ಜೈಲ್ ಸರ್ಕಲ್ನಿಂದ ಹೊಸಮನೆಯ ತುಂಗಾ ಚಾನಲ್ ಸೇತುವೆವರೆಗೆ ಕಾಮಗಾರಿ ನಡೆಯಿತು. ಹಳೆ ರಸ್ತೆಯನ್ನು ಅಗೆದು ಯುಜಿಡಿ ಲೈನ್, ಕೇಬಲ್ ಡೆಕ್, ಚರಂಡಿ ಕಾಮಗಾರಿಗಳನ್ನು ನಡೆಸಲಾಯಿತು. ಇದಕ್ಕಾಗಿ ಅರ್ಧ ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು. ಕಾಮಗಾರಿ ವಿಳಂಬವಾಗುತ್ತಿದೆ ಎಂದು ವ್ಯಾಪಾರಿಗಳು ಪ್ರತಿಭಟನೆಯನ್ನೂ ನಡೆಸಿದ್ದರು.
ವರ್ಷ ಕಳೆಯುವುದರಲ್ಲಿ ಗುಂಡಿಗಳು
ಜೈಲ್ ರಸ್ತೆಯಂತೆ ಮತ್ಯಾವ ರಸ್ತೆಯಲ್ಲು ಸ್ಮಾರ್ಟ್ ಸಿಟಿ ಯೋಜನೆಯಡಿ ಇಷ್ಟು ಸುದೀರ್ಘ ಕಾಮಗಾರಿ ನಡೆಯಲಿಲ್ಲ. ಆದರೆ ವರ್ಷ ಕಳೆಯುವುದರಲ್ಲೇ ಈ ರಸ್ತೆಯಲ್ಲಿ ಗುಂಡಿಗಳು ಪ್ರತ್ಯಕ್ಷವಾಗಿವೆ. ತುಂಗಾ ಚಾನಲ್ ಕಡೆಯಿಂದ ಜೈಲ್ ಸರ್ಕಲ್ ಕಡೆಗೆ ತೆರಳುವಾಗ ಬರೀ ಗುಂಡಿಗಳೇ ಇದ್ದಾವೆ.
ಇದನ್ನೂ ಓದಿ- 17 ವರ್ಷದ ಅಪ್ರಾಪ್ತನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಶಿವಮೊಗ್ಗ ನ್ಯಾಯಾಲಯದ ಆದೇಶ
ಕೇಬಲ್ ಡೆಕ್ ಸ್ಲ್ಯಾಬ್ಗಳ ಆತಂಕ
ಗುಂಡಿಗಳ ಜೊತೆಗೆ ಸ್ಮಾರ್ಟ್ ಸಿಟಿ ಕೇಬಲ್ ಡೆಕ್ಗಳಿಗೆ ಅಳವಡಿಸಿರುವ ಸ್ಲ್ಯಾಬ್ಳು ವಾಹನ ಸವಾರರಿಗೆ ಮತ್ತೊಂದು ಬಗೆಯಲ್ಲಿ ಆತಂಕ ಮೂಡಿಸಿವೆ. ಬಹುತೇಕ ಡೆಕ್ಗಳ ಸ್ಲ್ಯಾಬ್ಗಳು ಅಲುಗಾಡುತ್ತಿವೆ. ದೈವಜ್ಞ ಕಲ್ಯಾಣ ಮಂಟಪದ ಗಣಪತಿ ದೇಗುಲ ಮುಂಭಾಗ ಒಂದು ಸ್ಲ್ಯಾಬ್ ಸಂಪೂರ್ಣ ಕುಸಿದಿದೆ. ಇದರ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ. ಇಡ್ಲಿ ಹೌಸ್ ಹೊಟೇಲ್ ಎದುರು ಇದೆ ಪರಿಸ್ಥಿತಿ ಇದೆ.
ನಿತ್ಯ ಸಾವಿರಾರು ವಾಹನ ಸಂಚಾರ
ಶಿವಮೊಗ್ಗ ನಗರದಲ್ಲಿ ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಜೈಲ್ ರಸ್ತೆಯು ಒಂದು. ನೂರು ಅಡಿ ರಸ್ತೆಯಿಂದ ಜೈಲ್ ಸರ್ಕಲ್, ಕುವೆಂಪು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ವಿವಿಧ ಬಡಾವಣೆಗಳಿಂದ ನಗರದ ವಿವಿಧೆಡೆಗೆ ತೆರಳಲು ಈ ರಸ್ತೆಯೇ ಶಾರ್ಟ್ ಕಟ್. ಹಾಗಾಗಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಾಗುತ್ತವೆ. ಈ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದಿರುವುದು ಸುಗಮ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಅಲ್ಲದೆ ಸ್ಮಾರ್ಟ್ ಸಿಟಿ ಕಾಮಗಾರಿಯ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ.
