ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 3 ಅಕ್ಟೋಬರ್ 2020
ಈ ಕಟ್ಟಡ ಶಿವಮೊಗ್ಗ ಪೊಲೀಸ್ ಇಲಾಖೆಯ ಪ್ರತಿ ಬೆಳವಣಿಗೆಯನ್ನು ಗಮನಿಸಿದೆ. ಬ್ರಿಟೀಷ್ ಕಾಲದ ಪೊಲೀಸ್ ವ್ಯವಸ್ಥೆಯಿಂದ, ಈಗಿನ ಹೈಟೆಕ್ನಾಲಜಿ ಪೊಲೀಸಿಂಗ್ ತನಕ ಎಲ್ಲದಕ್ಕೂ ಸಾಕ್ಷಿಯಾಗಿದೆ.
![]() |
ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಅವರಣದಲ್ಲಿ ಇರುವ ಹಂಚಿನ ಕಟ್ಟಡ, ಜಿಲ್ಲೆಯ ಪೊಲೀಸ್ ಇಲಾಖೆಯ ಇತಿಹಾಸ ತಿಳಿಸುತ್ತದೆ. ಯಾಕೆಂದರೆ ಇದುವೆ ಶಿವಮೊಗ್ಗ ಜಿಲ್ಲೆಯ ಮೊದಲ ಪೊಲೀಸ್ ಠಾಣೆ.
1851ರಲ್ಲಿ ಈ ಪೊಲೀಸ್ ಠಾಣೆಯನ್ನು ನಿರ್ಮಿಸಲಾಯಿತು. ಬ್ರಿಟೀಷರು ಭಾರತಕ್ಕೆ ಬಂದಾಗ ಇಡೀ ದೇಶದಲ್ಲಿ ಏಕರೂಪದ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಿದರು. ಶಾಂತಿ ಪಾಲನೆ ಉದ್ದೇಶದಿಂದ ಹಲವು ಕಡೆ ಪೊಲೀಸ್ ಠಾಣೆಗಳನ್ನು ನಿರ್ಮಿಸಿದರು. ಶಿವಮೊಗ್ಗದಲ್ಲೂ ಇಂತದ್ದೇ ಪ್ರಯತ್ನವಾಯ್ತು.
ಒಂದೇ ಕಟ್ಟಡದಲ್ಲಿ ಎರಡು ಠಾಣೆ
ಕೋಟೆ ಪೊಲೀಸ್ ಠಾಣೆಯಲ್ಲಿ ಎರಡು ವಿಭಾಗವಿತ್ತು. ಕಸಬಾ ಠಾಣೆ ಇತ್ತು. ಪಟ್ಟಣದಲ್ಲಿ ಪೊಲೀಸಿಂಗ್ ವ್ಯವಸ್ಥೆ ಮಾಡಿಕೊಳ್ಳುವ ವ್ಯವಸ್ಥೆಗೆ ಕಸಬಾ ಠಾಣೆ ಎಂದು ಕರೆಯಲಾಗುತ್ತಿತ್ತು. ಇದೇ ಕಟ್ಟಡದಲ್ಲಿ ಗ್ರಾಮಾಂತರ ಠಾಣೆಯು ಇತ್ತು ಅನ್ನುತ್ತಾರೆ ನಿವೃತ್ತ ಇತಿಹಾಸ ಉಪನ್ಯಾಸಕ ಹೆಚ್.ಖಂಡೋಬರಾವ್.
ಇಲ್ಲಿಂದಲೇ ಇಡೀ ಜಿಲ್ಲೆಯ ಕಂಟ್ರೋಲ್
ಕೋಟೆ ಪೊಲೀಸ್ ಠಾಣೆ ಆವರಣದಲ್ಲಿರುವ 169 ವರ್ಷ ಹಳೆಯ ಕಟ್ಟಡದಿಂದ ಇಡೀ ಶಿವಮೊಗ್ಗ ಜಿಲ್ಲೆಯನ್ನು ಕಂಟ್ರೋಲ್ ಮಾಡಲಾಗುತ್ತಿತ್ತು. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ವ್ಯವಸ್ಥೆಯ ಪ್ರತಿ ಬೆಳವಣಿಗೆಯನ್ನು ಕಂಡ ಕಟ್ಟಡ ಇದು.
ಈಗ ಹೇಗಿದೆ ಕಟ್ಟಡ?
ಕೋಟೆ ಸಮೀಪದಲ್ಲಿ ಸ್ಥಾಪನೆಯಾದ ಠಾಣೆಯಾದ್ದರಿಂದ, ಇದನ್ನು ಕೋಟೆ ಠಾಣೆ ಎಂದು ಕರೆಯಲಾಯಿತು. ಈ ಕಟ್ಟಡದೊಳಗೆ ಈಗಲೂ ಸೆಲ್‍ಗಳಿವೆ. ಠಾಣೆ ನಡೆಸುವ ಸಕಲ ವ್ಯವಸ್ಥೆಯು ಇಲ್ಲಿದೆ. ಇತ್ತೀಚಿನವರೆಗೂ ಕೋಟೆ ಪೊಲೀಸ್ ಠಾಣೆ ಇತ್ತು.
ಶತಮಾನದ ಕಟ್ಟಡ ಶಿಥಿಲವಾಗಿದೆ ಅನ್ನುವ ಕಾರಣಕ್ಕೆ ಒಡೆದು, ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು. ‘ಐತಿಹಾಸಿಕ ಕಟ್ಟಡಗಳನ್ನು ಉಳಿಸುವ ಸಂಘಟನೆಯೊಂದಿದೆ. ನಾವೆಲ್ಲ ಸೇರಿ ಜಿಲ್ಲಾ ರಕ್ಷಣಾಧಿಕಾರಿ ಅವರಲ್ಲಿ ಮನವಿ ಮಾಡಿದ್ದರಿಂದ, ಹಳೆಯ ಕಟ್ಟಡ ಉಳಿದುಕೊಂಡಿದೆ. ಅದರ ಪಕ್ಕದಲ್ಲಿ ಹೊಸ ಠಾಣೆ ನಿರ್ಮಸಲಾಗಿದೆ’ ಎಂದು ಸ್ಮರಿಸಿಕೊಳ್ಳುತ್ತಾರೆ ಖಂಡೋಬರಾವ್.
ಆಗ ಒಂದೇ ಠಾಣೆ, ಈಗ?
ಆಗ ಈ ಕೋಟೆ ಠಾಣೆಯೇ ಜಿಲ್ಲಾ ಪೊಲೀಸ್ ಇಲಾಖೆಯಾಗಿತ್ತು. ಈಗ ಪೊಲೀಸ್ ವ್ಯವಸ್ಥೆ ಜಿಲ್ಲೆಯಾದ್ಯಂತ ಹರಡಿಕೊಂಡಿದೆ. ಹಳ್ಳಿ ಹಳ್ಳಿಯನ್ನೂ ತಲುಪುವಂತಹ ನೆಟ್‍ವರ್ಕ್ ಇದೆ. ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸ್ಪೆಷಲ್ ಬ್ರಾಂಚ್‍ಗಳಿವೆ, ತಾಂತ್ರಿಕವಾಗಿಯೂ ಜಿಲ್ಲಾ ಪೊಲೀಸರು ಗಟ್ಟಿಯಾಗಿದ್ದಾರೆ. 32 ಪೊಲೀಸ್ ಠಾಣೆಗಳು, 17 ಔಟ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆ ಮುಂಭಾಗದ ಪೊಲೀಸ್ ಕೇಂದ್ರ ಕಚೇರಿಯಿಂದ ಜಿಲ್ಲೆಯ ಪೊಲೀಸಿಂಗ್ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200