SHIVAMOGGA LIVE NEWS | 3 MAY 2024
ARASALU : ದರಗೆಲೆ ತರಲು ಕಾಡಿಗೆ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಹೊಸನಗರ ತಾಲೂಕು ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ಬಳಿ ಕಾಡಿನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಗ್ರಾಮದ ತಿಮ್ಮಪ್ಪ (58) ಮೃತರು.
ಘಟನೆ ಸಂಭವಿಸಿದ್ದು ಹೇಗೆ?
ದರಗೆಲೆ ತರಲು ತಿಮ್ಮಪ್ಪ ಅವರು ಇವತ್ತು ಬೆಳಗ್ಗೆ ಸಮೀಪದ ಕಾಡಿಗೆ ತೆರಳಿದ್ದರು. ಈ ಸಂದರ್ಭ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ತಿಮ್ಮಪ್ಪ ಜೋರಾಗಿ ಕೂಗಿಕೊಂಡಿದ್ದು ಸಮೀಪದಲ್ಲೇ ದರಗೆಲೆಗೆ ಬಂದವರು ಮತ್ತು ಗ್ರಾಮಸ್ಥರು ಕೂಗು ಕೇಳಿದ ಕಡೆಗೆ ದೌಡಾಯಿಸಿದ್ದಾರೆ. ಈ ಹೊತ್ತಿಗಾಗಲೇ ದಾಳಿ ನಡೆಸಿದ್ದ ಆನೆ ಪರಾರಿಯಾಗುತ್ತಿತ್ತು. ಮರದ ಬುಡದ ಬಳಿ ತಿಮ್ಮಪ್ಪ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿದ್ದಾರೆ.
ಅರಣ್ಯಾಧಿಕಾರಿಗಳು, ಗ್ರಾಮಸ್ಥರು ದೌಡು
ಕಾಡಾನೆ ದಾಳಿ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಎರಡ್ಮೂರು ದಿನದಿಂದ ಆನೆ ಪ್ರತ್ಯಕ್ಷವಾಗಿರುವ ಕುರಿತು ಜನರಲ್ಲಿ ಗುಸುಗುಸು ಸುದ್ದಿ ಹಬ್ಬಿತ್ತು. ಇವತ್ತು ತಿಮ್ಮಪ್ಪ ಅವರ ಮೇಲೆ ದಾಳಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ಕಳೆದ ಒಂದರೆಡು ವರ್ಷದಿಂದ ಕಾಡಾನೆ ಹಾವಳಿ ಇದೆ. ಜಮೀನಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡಿದ್ದವು.
ತಿಮ್ಮಪ್ಪ ಕುಟುಂಬದ ಸ್ಥಿತಿ ಏನು?
ಬಸವಾಪುರದ ನಿವಾಸಿ ತಿಮ್ಮಪ್ಪ ಅವರಿಗೆ ಸಣ್ಣ ಪ್ರಮಾಣದ ಜಮೀನು ಇದೆ ಎನ್ನುತ್ತಾರೆ ಸ್ಥಳೀಯರು. ಇದರ ಜೊತೆಗೆ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಪತ್ನಿ ಮತ್ತು ಮಗ ಇದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ ಹತ್ತಿ ಅಣ್ಣನಿಗೆ ಫೋನ್ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200