ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SAGARA NEWS | 24 ಜನವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಸ್ ಕ್ಲೀನರ್ ಆಗಿದ್ದ ಸಾಮಾನ್ಯ ವ್ಯಕ್ತಿ, ಮಲೆನಾಡು ಭಾಗದ ಸಾರಿಗೆ ಉದ್ಯಮವನ್ನು ‘ಪ್ರಕಾಶ’ಮಾನಗೊಳಿಸಿದ್ದಾರೆ. ನೂರಾರು ಮಂದಿಗೆ ನೌಕರಿ ಕೊಟ್ಟಿದ್ದಾರೆ. ಹಲವರ ಬದುಕಿಗೆ ಆಸರೆಯಾಗಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದ ವ್ಯಕ್ತಿಯ ಬದುಕು ದುರಂತ ಅಂತ್ಯ ಕಂಡಿದೆ. ಇದಕ್ಕೆ ಇಡೀ ಮಲೆನಾಡು ಮರುಗಿದೆ.
ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಪ್ರಕಾಶ್ ಇನ್ನಿಲ್ಲ. ಆದರೆ ಅವರ ಬಗ್ಗೆ ತಿಳಿಯಬೇಕಿರುವ ಸಂಗತಿ ಹಲವು.
ಪ್ರಕಾಶ್ ಅವರ ಕುರಿತು ಟಾಪ್ 8 ಸಂಗತಿ
♦ ಕ್ಲೀನರ್, ಡ್ರೈವರ್, ಕಂಡಕ್ಟರ್
ಪ್ರಕಾಶ್ ಅವರು ಮೂಲತಃ ಹಾಸನ ಜಿಲ್ಲೆಯ ಕಾಣೆಗೆರೆ ಗ್ರಾಮದವರು. ಉದ್ಯೋಗ ಅರಸಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿಗೆ ಬಂದರು. ವಾಹನ ಚಾಲನೆ ಮಾಡಲು ಗೊತ್ತಿದ್ದರಿಂದ ಶಾರದಾ ಡ್ರೈವಿಂಗ್ ಸ್ಕೂಲ್’ನಲ್ಲಿ ವಾಹನ ಚಾಲಕರಾಗಿದ್ದರು. ಸ್ವಲ್ಪ ಸಮಯದ ಬಳಿಕ ಗೀತಾ ಬಸ್’ನ ಕ್ಲೀನರ್ ಆದರು. ಬಳಿಕ ಕಂಡಕ್ಟರ್, ಡ್ರೈವರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
♦ ಪ್ರಕಾಶ್ ಟ್ರಾವೆಲ್ಸ್ ಆರಂಭ
1997ರಲ್ಲಿ ಪ್ರಕಾಶ್ ಅವರು ತಮ್ಮ ಸಹೋದರ ಗಂಗರಾಜು ಅವರೊಂದಿಗೆ ಪ್ರಕಾಶ್ ಟ್ರಾವೆಲ್ಸ್ ಆರಂಭಿಸಿದರು. ಒಂದು ಬಸ್ ಖರೀದಿಸಿ ಸಾಗರ – ಸೊರಬ ನಡುವೆ ಸೇವೆ ಆರಂಭಿಸಿದರು.
♦ ಬಸ್ಸು, ರೂಟ್ ಹೆಚ್ಚಳ
ವರ್ಷದಿಂದ ವರ್ಷಕ್ಕೆ ಬಸ್ಸುಗಳ ಸಂಖ್ಯೆ ಹೆಚ್ಚಾಯ್ತು. ರೂಟ್’ಗಳ ಸಂಖ್ಯೆಯು ಏರಿತು. ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆ ಬಸ್ಸುಗಳು ಸಂಚಾರ ಆರಂಭಿಸಿದವು. ಈ ಬಸ್ಸುಗಳು ಹಳ್ಳಿ ಹಳ್ಳಿಯನ್ನು ಪಟ್ಟಣದೊಂದಿಗೆ ಬೆಸೆದವು.
♦ ಮಲೆನಾಡಿಗೆ ಐಷಾರಾಮಿ ಬಸ್ಸುಗಳು
ಮಲೆನಾಡಿಗೆ ಐಷಾರಾಮಿ ಬಸ್ಸುಗಳನ್ನು ತಂದ ಮೊದಲಿಗರಲ್ಲಿ ಪ್ರಕಾಶ್ ಅವರು ಒಬ್ಬರು. ಭದ್ರಾವತಿ, ಶಿವಮೊಗ್ಗ ತಾಲೂಕುಗಳು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಬೆಂಗಳೂರಿಗೆ ಡೈರೆಕ್ಟ್ ಬಸ್ ಸೇವೆ ಆರಂಭಿಸಿದರು. ಸ್ಲೀಪರ್, ಸೆಮಿ ಸ್ಲೀಪರ್’ಗಳು ನಿತ್ಯ ಓಡಾಟ ಆರಂಭಿಸಿದವು.
♦ ಮದುವೆ ಸಮಾರಂಭಕ್ಕೆ ಡಿಮಾಂಡ್
ಜೊತೆಗೆ ಆರು ಸೆಮಿ ಸ್ಲೀಪರ್ ಟೂರಿಸ್ಟ್ ಬಸ್ಸುಗಳು ಪ್ರವಾಸಿಗರನ್ನು ಸೆಳೆದವು. ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಮದುವೆ ಸಮಾರಂಭಕ್ಕಂತೂ ಈ ಬಸ್ಸುಗಳಿಗೆ ಜನ ಡಿಮಾಂಡ್ ಮಾಡುತ್ತಿದ್ದರು.
♦ ನೂರಾರು ಉದ್ಯೋಗಿಗಳು
ಪ್ರಕಾಶ್ ಟ್ರಾವೆಲ್ಸ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಬಸ್ಸುಗಳಿವೆ. ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 500 ಮಂದಿ ಪ್ರಕಾಶ್ ಟ್ರಾವೆಲ್ಸ್’ನಿಂದ ಜೀವನ ಕಟ್ಟಿಕೊಂಡಿದ್ದಾರೆ. ದೊಡ್ಡ ಸಂಖ್ಯೆ ಸಿಬ್ಬಂದಿ ಇದ್ದರೂ, ಪ್ರಕಾಶ್ ಅವರು ತಾಳ್ಮೆಯಿಂದಲೇ ವ್ಯವಹರಿಸುತ್ತಿದ್ದರು. ಎಂತಹ ಸಂದರ್ಭದಲ್ಲೂ ಸಿಬ್ಬಂದಿ ಜೊತೆ ನಿಲ್ಲುತ್ತಿದ್ದರು. ಇದೆ ಕಾರಣಕ್ಕೆ ಅನೇಕ ಸಿಬ್ಬಂದಿ ಹಲವು ವರ್ಷದಿಂದ ಪ್ರಕಾಶ್ ಟ್ರಾವೆಲ್ಸ್’ನಲ್ಲಿ ಕೆಲಸ ಮಾಡುತ್ತಿದ್ದಾರೆ.
♦ ಕರೋನಾದಿಂದ ಉದ್ಯಮಕ್ಕೆ ಪೆಟ್ಟು
ಕರೋನ ಮತ್ತು ಲಾಕ್ ಡೌನ್’ನಿಂದಾಗಿ ಸಾರಿಗೆ ಉದ್ಯಮ ಸಂಕಷ್ಟಕ್ಕೀಡಾಯಿತು. ಪ್ರಕಾಶ್ ಟ್ರಾವೆಲ್ಸ್’ಗೂ ದೊಡ್ಡ ಪೆಟ್ಟು ಬಿತ್ತು. ಹಾಗಿದ್ದೂ ಲಾಕ್ ಡೌನ್ ಸಂದರ್ಭ ಸಿಬ್ಬಂದಿಗೆ ನೆರವಾಗಿದ್ದರು ಪ್ರಕಾಶ್. ಲಾಕ್ ಡೌನ್ ತೆರವಾದ ಬಳಿಕ ಸರ್ಕಾರದ ನಿರ್ಬಂಧ, ಕೋವಿಡ್ ರೂಲ್ಸ್ ಪರಿಣಾಮ ಪ್ರಕಾಶ್ ಟ್ರಾವೆಲ್ಸ್ ಸಂಪೂರ್ಣ ನಷ್ಟದ ಹಾದಿ ಹಿಡಿಯಿತು. ಬಸ್ಸುಗಳ ನಿರ್ವಹಣೆ, ಸಿಬ್ಬಂದಿ ಸಂಬಳ, ಪಡೆದ ಸಾಲ ತೀರಿಸುವ ಒತ್ತಡ ಎದುರಾಯಿತು.
♦ ಎರಡು ರೂಟ್ ಮಾರಾಟ
ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳುವ ಸಲುವಾಗಿ ಇತ್ತೀಚೆಗಷ್ಟೆ ಪ್ರಕಾಶ್ ಅವರು ಎರಡು ರೂಟ್’ಗಳನ್ನು ಮಾರಾಟ ಮಾಡಿದ್ದರು. ಇದರಿಂದ ತಮ್ಮ ಸಮಸ್ಯೆಗಳು ಬಗೆಹರಿಯಲಿದೆ ಎಂದು ಪ್ರಕಾಶ್ ಭಾವಿಸಿದ್ದರು.
ಇದನ್ನೂ ಓದಿ | ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವವಾಗಿ ಪತ್ತೆ
ಶಿಸ್ತು, ಬದ್ಧತೆಯಿಂದ ಮಲೆನಾಡು ಭಾಗದಲ್ಲಿ ಸಾರಿಗೆ ಉದ್ಯಮ ಕಟ್ಟಿದ ಪ್ರಕಾಶ್ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರ ದುರಂತ ಅಂತ್ಯ ಹಲವು ಮನಸುಗಳನ್ನು ಘಾಸಿಗೊಳಿಸಿದೆ. ಸಾವಿನ ಕುರಿತು ಹಲವರಲ್ಲಿ ಅನುಮಾನವಿದೆ. ಪೊಲೀಸ್ ತನಿಖೆಯಿಂದಷ್ಟೆ ಸತ್ಯಾಸತ್ಯತೆ ಹೊರಬರಬೇಕಿದೆ.
ಇದನ್ನೂ ಓದಿ | ಪ್ರಕಾಶ್ ಟ್ರಾವೆಲ್ಸ್ ಮಾಲೀಕ ನಾಪತ್ತೆ, ಪಟಗುಪ್ಪೆ ಸೇತುವೆ ಮೇಲೆ ಕಾರು, ಮೊಬೈಲ್ ಪತ್ತೆ, ಶರಾವತಿ ಹಿನ್ನೀರಲ್ಲಿ ಶೋಧ