SHIVAMOGGA LIVE NEWS | 9 JANUARY 2023
ಸಾಗರ : ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನಿಲ್ ಎಂಬುವವರ ಮೇಲೆ ದುಷ್ಕರ್ಮಿಯೊಬ್ಬ ತಲ್ವಾರ್ ನಿಂದ ಹಲ್ಲೆಗೆ (Attack) ಯತ್ನಿಸಿದ್ದಾನೆ. ಕೂದಲೆಳೆ ಅಂತರದಿಂದ ಸುನಿಲ್ ಬಚಾವಾಗಿದ್ದಾರೆ. ಘಟನೆ ಹಿನ್ನೆಲೆ ಸಾಗರ ಪಟ್ಟಣದಲ್ಲಿ ಅರ್ಧ ದಿನ ಬಂದ್ ಗೆ ಕರೆ ನೀಡಲಾಗಿದೆ.
ಸ್ವಲ್ಪದರಲ್ಲೆ ಪಾರಾದ ಸುನಿಲ್
ಬಜರಂಗದಳ ನಗರ ಸಹ ಸಂಚಾಲಕ ಸುನಿಲ್ ಇವತ್ತು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ನಗರದ ಬಿ.ಹೆಚ್.ರಸ್ತೆ ಆಭರಣ ಶೋ ರೂಂ ಬಳಿ ಬರುತ್ತಿದ್ದಂತೆ ಘಟನೆ ಸಂಭವಿಸಿದೆ. ಈ ಮೊದಲೆ ಶೋ ರೂಂ ಬಳಿ ಬಂದು ನಿಂತಿದ್ದ ಯುವಕನೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಮಾರಕಾಸ್ತ್ರ ತೆಗೆದು ಸುನಿಲ್ ನತ್ತ ಬೀಸುತ್ತಾನೆ (Attack). ಸ್ವಲ್ಪದರಲ್ಲಿಯೆ ಸುನಿಲ್ ಪಾರಾಗುತ್ತಾರೆ.
‘ಸುನಿಲ್ ಬರುವ ಮುಂಚೆಯೆ ಅಲ್ಲಿ ಬಂದು ನಿಂತಿದ್ದ ಸಮೀರ್ ಎಂಬಾತ ಮಾರಕಾಸ್ತ್ರ ಬೀಸಿದ್ದಾನೆ. ಆತನ ಗಾಡಿಯಲ್ಲಿ ಮಚ್ಚು ಇತ್ತೊ, ಲಾಂಗ್ ಇತ್ತೊ ಅನ್ನುವುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಘಟನೆಯಲ್ಲಿ ಯಾವುದೆ ಗಾಯವಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸುನಿಲ್ ಮೇಲೆ ಸಮೀರ್ ಎಂಬಾತ ಮಾರಕಾಸ್ತ್ರ ಬೀಸಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಟ್ಟಡವೊಂದರ ಮುಂದೆ ನಿಲ್ಲಿಸಿದ್ದ ತನ್ನ ಬೈಕನ್ನು ಸಮೀರ್ ಎಂಬಾತ ಹಿಂದಕ್ಕೆ ತೆಗೆದುಕೊಳ್ಳುತ್ತಿರುತ್ತಾನೆ. ಇದೆ ಹೊತ್ತಿಗೆ ಸುನಿಲ್ ಆ ರಸ್ತೆಯಲ್ಲಿ ಬರುತ್ತಾರೆ. ಕೂಡಲೆ ಬೈಕನ್ನ ಯು ಟರ್ನ್ ಪಡೆದು ಕಟ್ಟಡದ ಕಡೆಗೆ ಬರುತ್ತಾರೆ. ಸುನಿಲ್ ಬರುವುದನ್ನು ಗಮನಿಸಿದ ಸಮೀರ್, ತನ್ನ ಬೈಕಿನ ಡಿಕ್ಕಿಯಲ್ಲಿದ್ದ ಮಾರಕಾಸ್ತ್ರವನ್ನು ಹೊರಗೆ ತೆಗೆಯುತ್ತಾನೆ.
ಅಪಾಯದ ಮುನ್ಸೂಚನೆ ಸಿಗುತ್ತಲೆ ಸುನಿಲ್ ಬೈಕನ್ನು ವೇಗವಾಗಿ ಚಲಾಯಿಸುತ್ತಾರೆ. ಅಷ್ಟು ಹೊತ್ತಿಗಾಲೆ ಸಮೀರ್ ಮಾರಕಾಸ್ತ್ರ ಬೀಸುತ್ತಾನೆ. ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗುತ್ತಾರೆ. ಈ ವೇಳೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಶಾಲಾ ಮಕ್ಕಳು ಘಟನೆ ಕಂಡು ಆತಂಕಕ್ಕೀಡಾಗುತ್ತಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಹಿಂದಿನ ದಿನ ಫಾಲೋ ಮಾಡಿ ಬೆದರಿಕೆ’
ಭಾನುವಾರ ಶಿವಮೊಗ್ಗ ನಗರದಲ್ಲಿ ಬಜರಂಗದಳದ ವತಿಯಿಂದ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಈ
ಕಾರ್ಯಕ್ರಮಕ್ಕೆ ಸುನಿಲ್ ಬೈಕಿನಲ್ಲಿ ತೆರಳುತ್ತಿದ್ದರು. ಆಗ ಬಿ.ಹೆಚ್.ರಸ್ತೆಯಲ್ಲಿ ಸುನಿಲ್ ಬೈಕಿಗೆ ತಾಗುವಂತೆ ಬೈಕನ್ನು ಹತ್ತಿರಕ್ಕೆ ತಂದ ಯುವಕರ ಗುಂಪು, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದೆ ಎಂದು ಸುನಿಲ್ ದೂರಿನಲ್ಲಿ ಆರೋಪಿಸಿದ್ದಾರೆ.
ಹಿಂದೂ ಕಾರ್ಯಕರ್ತರು ಗರಂ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇಂದು ಸಾಗರ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಪ್ರತಿಭಟನೆ ನಡೆಸಿದರು. ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದರು.
ಸುನಿಲ್ ಮನೆಗೆ ಎಂಎಲ್ಎ ಭೇಟಿ
ಇನ್ನು, ಮಾಹಿತಿ ತಿಳಿಯುತ್ತಿದ್ದಂತೆ ಬಜರಂಗದಳ ಸಹ ಸಂಚಾಲಕ ಸುನಿಲ್ ಮನೆಗೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿದರು. ಸುನಿಲ್ ಮತ್ತು ಆತನ ಕುಟುಂಬದವರಿಗೆ ಧೈರ್ಯ ಹೇಳಿದರು. ಅಲ್ಲದೆ ಸಾಗರ ಎಎಸ್ಪಿ, ಪಟ್ಟಣದ ಪೊಲೀಸರ ಜೊತೆಗೆ ಸಭೆ ನಡೆಸಿ, ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ – ಕೊನೆವರೆಗು ಹೋರಾಡಿದ ಉದ್ಯಮಿ ಶರತ್ ಭೂಪಾಳಂ, ಭಾನುವಾರ ಬೆಳಗಿನ ಜಾವ ಏನೇನಾಯ್ತು?
ಸಾಗರ ಬಂದ್ ಗೆ ಕರೆ
ಸುನಿಲ್ ಮೇಲೆ ಹಲ್ಲೆ ಯತ್ನ ಖಂಡಿಸಿ ಸಾಗರ ನಗರದಲ್ಲಿ ಬಂದ್ ಮಾಡಲು ಹಿಂದೂ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ. ಜ.10ರಂದು ಸಾಗರ ಪಟ್ಟಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಮೂರು ತಂಡ ರಚನೆ
ಮಾರಕಾಸ್ತ್ರ ಬೀಸಿದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಸಮೀರ್ ಮತ್ತು ಇತರೆ ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ. ‘ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ. ತನಿಖೆಯ ಬಳಿಕ ಘಟನೆಗೆ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
- ಕುವೆಂಪು ವಿವಿ, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಹೇಗಿತ್ತು 34ನೇ ಘಟಿಕೋತ್ಸವ?