ಶಿವಮೊಗ್ಗ ಲೈವ್.ಕಾಂ | ANANDAPURA NEWS | 24 ನವೆಂಬರ್ 2021
ಶಾಲೆ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ತನೆ ವಿರುದ್ಧ ಸಿಡಿದೆದ್ದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಸಾಗರ ತಾಲೂಕಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಳಿಕ ಹಲವು ರಾಜಕೀಯ ತಿರುವುಗಳನ್ನು ಪಡೆದು, ಆರೋಪ, ಪ್ರತ್ಯಾರೋಪಗಳು ಕೇಳಿ ಬಂದವು. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನಂತರ ನಡೆದ ಹತ್ತು ಬೆಳವಣಿಗೆಯ ವಿವರ ಇಲ್ಲಿದೆ.
ಬೆಳವಣಿಗೆ 1
ಸಾಗರ ತಾಲೂಕು ಇರುವಕ್ಕಿಯ ಇಂದಿರಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು. ವಸತಿ ನಿಲಯದಿಂದ ಘೋಷಣೆ ಕೂಗುತ್ತ ಆನಂದಪುರ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ, ಪ್ರತಿಭಟಿಸಲು ನಿರ್ಧರಿಸಿದ್ದರು. ಕೊನೆಗೆ ಯಡೇಹಳ್ಳಿ ಗಣಪತಿ ದೇವಾಲಯದ ಆವರಣದಲ್ಲಿ ಮುಷ್ಕರ ನಡೆಸಿದರು.
ಇದನ್ನೂ ಓದಿ | ವಸತಿ ಶಾಲೆ ಮಕ್ಕಳಿಂದ ದಿಢೀರ್ ಪ್ರತಿಭಟನೆ, ಮೈ, ಕೈ ಮೇಲೆ ಬಾಸುಂಡೆ ಪ್ರದರ್ಶನ, ಶಾಸಕರು, ಡಿಸಿ ಸ್ಥಳಕ್ಕೆ ಬರುವಂತೆ ಪಟ್ಟು
ಬೆಳವಣಿಗೆ 2
ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ ಅವರು ಮದ್ಯಪಾನ ಮಾಡಿ ಬಂದು ವಿದ್ಯಾರ್ಥಿಗಳನ್ನು ಥಳಿಸುತ್ತಾರೆ. ಬಾಸುಂಡೆ ಬರುವಂತೆ ಹೊಡೆಯುತ್ತಾರೆ. ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ದುರ್ವತನೆ ತೋರುತ್ತಿರುವ ಪ್ರಾಚಾರ್ಯರು ಮತ್ತು ಕೆಲವು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಶಾಸಕರು, ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಬೆಳವಣಿಗೆ 3
ವಿದ್ಯಾರ್ಥಿಗಳ ನೋವು ಆಲಿಸಿದ ಗ್ರಾಮಸ್ಥರು ಅಧಿಕಾರಿಗಳು, ಶಾಸಕರಿಗೆ ಮಾಹಿತಿ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ. ‘ತನ್ನದೇನೂ ತಪ್ಪಿಲ್ಲ. ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಹೀಗೆ ಹೇಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಬೆಳವಣಿಗೆ 4
ವಿಚಾರ ತಿಳಿದು ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನೋಟ್ ಪುಸ್ತಕದ ಹಾಳೆಯಲ್ಲಿ ಬರೆದು ಕೊಟ್ಟ ಮನವಿ ಸ್ವೀಕರಿಸಿದರು. ಮಕ್ಕಳ ಪ್ರತಿಭಟನೆ ವಿಚಾರ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಉಪ ವಿಭಾಗಾಧಿಕಾರಿ ಜೊತೆಗೆ ಚರ್ಚೆ ನಡೆಸಿದರು. ಬಳಿಕ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಬೆಳವಣಿಗೆ 5
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಗಣಪತಿ ದೇವಸ್ಥಾನದ ಆವರಣದಿಂದ ಯಡೇಹಳ್ಳಿ ವೃತ್ತಕ್ಕೆ ಪ್ರತಿಭಟನೆ ಸ್ಥಳಾಂತರವಾಯಿತು. ಯಡೇಹಳ್ಳಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರಾಚಾರ್ಯರನ್ನು ಕೂಡಲೆ ಅಮಾನತು ಮಾಡಬೇಕು ಎಂದು ಆಗ್ರಹಿಸಲಾಯಿತು.
ಬೆಳವಣಿಗೆ 6
ವಿದ್ಯಾರ್ಥಿಗಳ ಪ್ರತಿಭೆಟನೆಯಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಯಕರ್ತರು ಆರೋಪಿಸಿದರು. ಪ್ರಾಚಾರ್ಯರ ಅಮಾನತು ಮಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಒಂದು ವರ್ಷದಿಂದ ಸಮಸ್ಯೆಯ ಕುರಿತು ಮಕ್ಕಳು ತಿಳಿಸಿದರೂ ಕ್ರಮ ಕೈಗೊಳ್ಳದಿರುವುದು ಏಕೆ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
ಬೆಳವಣಿಗೆ 7
ಘಟನೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ‘ಶಾಸಕ ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡ ಡಿಡಿಪಿಐ ಮತ್ತು ಸಿಇಓ ಅವರಿಗೆ ಈ ವಿಚಾರದ ಕುರಿತು ಗಮನ ಹರಿಸುವಂತೆ ತಿಳಿಸಿದ್ದೇನೆ’ ಎಂದರು.
ಬೆಳವಣಿಗೆ 8
ಶಿವಮೊಗ್ಗದಲ್ಲಿ ಶಾಸಕ ಹಾಲಪ್ಪ ಪ್ರತಿಕ್ರಿಯೆ ನೀಡಿ, ‘ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಗ ಉರಿ ಬಿಸಿಲಿನಲ್ಲಿ ಯಾರೋ ಕರೆದುಕೊಂಡು ಹೋಗಿ ಸರ್ಕಲ್’ನಲ್ಲಿ ಕೂರಿಸಿಕೊಂಡಿದ್ದಾರಂತೆ. ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುವಂತೆ ನಡೆದುಕೊಳ್ಳಬಾರದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಬೆಳವಣಿಗೆ 9
ಸ್ಥಳಕ್ಕೆ ಸಾಗರ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಕರೆತಂದರು. ಮಕ್ಕಳ ಸಮಸ್ಯೆ ಆಲಿಸಿದರು.
ಬೆಳವಣಿಗೆ 10
ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ ಅವರ ಬದಲಿಗೆ ಬಂದಗದ್ದೆ ಶಾಲೆಯ ಪ್ರಾಚಾರ್ಯರಿಗೆ ಪ್ರಭಾರ ಅಧಿಕಾರ ವಹಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200