ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 14 ಸೆಪ್ಟೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಮ್ಮ ಬೇಡಿಕೆ ಈಡೇರುವವರೆಗೂ ನಮ್ಮೂರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಂತ ಗ್ರಾಮಸ್ಥರು ಪಟ್ಟು ಹಿಡಿದು, ಪ್ರತಿಭಟನೆ ಆರಂಭಿಸಿದ್ದಾರೆ. ಇದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಕೊಪ್ಪದ ಗ್ರಾಮಸ್ಥರು ವಿಭಿನ್ನ ಹೋರಾಟ ಆರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಊರಿನ ಮುಂದೆ ಬ್ಯಾನರ್ ಕಟ್ಟಿದ್ದಾರೆ.
ಗ್ರಾಮಸ್ಥರು ಹೀಗೆ ಪಟ್ಟು ಹಿಡಿದಿದ್ದೇಕೆ?
ಬೆಳ್ಳಿಕೊಪ್ಪ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಆರಂಭಿಸಲಾಗಿದೆ. ಗಣೇಶ ಚತುರ್ಥಿಯಂದು ಮಳಿಗೆ ಉದ್ಘಾಟನೆಯಾಗಿದೆ. ವ್ಯಾಪಾರವು ಶುರುವಾಗಿದೆ. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮೂರಿನಿಂದ ಮದ್ಯದಂಗಡಿ ತೆರವು ಮಾಡಬೇಕು ಎಂದು ಪಟ್ಟು ಹಿಡಿದು, ವಿಭಿನ್ನವಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ
ಬೆಳ್ಳಿಕೊಪ್ಪ ಗ್ರಾಮದಲ್ಲಿ ಸರ್ಕಾರ ಶಾಲೆ ಇದೆ. ಗ್ರಾಮದ ಬಹುತೇಕ ಮಕ್ಕಳು ಇದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ‘ಮದ್ಯದಂಗಡಿಯು ಶಾಲೆಯಿಂದ 500 ಮೀಟರ್’ಗಿಂತಲೂ ದೂರವಿದೆ. ಆದರೆ ಶಾಲೆಗೆ ತೆರಳಬೇಕಾದರೆ ಮಕ್ಕಳು ಮದ್ಯದಂಗಡಿ ಮುಂದೆಯೇ ಹೋಗಬೇಕು. ಇದು ಮಕ್ಕಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ ನಮ್ಮೂರ ಹೆಣ್ಣು ಮಕ್ಕಳನ್ನು ನಾವು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಸಿರಿವಾಳ ದಿನೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊರ ಮುಂದೆ ಪ್ರತಿಭಟನೆ
ಎಂಎಸ್ಐಎಲ್ ಮದ್ಯದಂಗಡಿ ಆರಂಭಿಸಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಕೂಡಲೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮದ ಮುಂದೆ ಪ್ರತಿಭಟನೆ ನಡೆಸಲಾಯಿತು. ಹಂತ ಹಂತವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸಾಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆಯು ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ನಿರಂತರ ಕಾಡುತ್ತಿದೆ ಮದ್ಯದಂಗಡಿ
ಬೆಳ್ಳಿಕೊಪ್ಪ ಗ್ರಾಮಕ್ಕೆ ಮದ್ಯದಂಗಡಿ ಕಾಟ ಹೊಸತಲ್ಲ. ಈ ಹಿಂದೆಯು ಮದ್ಯದಂಗಡಿ ವಿರುದ್ಧ ಹೋರಾಟ ನಡೆದಿತ್ತು. ಮದ್ಯದಂಗಡಿ ಆರಂಭಕ್ಕೆ ನಿರ್ಧರಿಸಿದ್ದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಬಹಿಷ್ಕರಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಅಧಿಕಾರಿಗಳು ಮದ್ಯದಂಗಡಿಗೆ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಕೆಲವೇ ತಿಂಗಳಲ್ಲಿ ಮದ್ಯದಂಗಡಿ ಆರಂಭಿಸಲಾಗಿದೆ.
ಎಂಎಸ್ಐಎಲ್ ಮದ್ಯದಂಗಡಿ ಆರಂಭಿಸಿದ್ದಕ್ಕೆ ಸರ್ಕಾರ ಮತ್ತು ಶಾಸಕ ಹರತಾಳು ಹಾಲಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದಂಗಡಿ ಎತ್ತಂಗಡಿ ಮಾಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200