ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 NOVEMBER 2023
BYKODU : ಒಂದೆಡೆ ಚಿರತೆ ಜಾನುವಾರುಗಳನ್ನು ಭಕ್ಷಿಸುತ್ತಿದ್ದು ಮತ್ತೊಂದೆಡೆ ವನ್ಯಜೀವಿಗಳ ದಾಳಿಗೆ ಬೆಳೆ ಹಾನಿ ಸಂಭವಿಸುತ್ತಿದೆ. ಇದರಿಂದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಜಾನುವಾರುಗಳನ್ನು ಭಕ್ಷಿಸಿದ ಚಿರತೆ
ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಗ್ಗಲಿನ ಸುತ್ತಮುತ್ತ ಒಂದು ವಾರದಿಂದ ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡುತ್ತಿದೆ. ಸುಮಾರು ನಾಲ್ಕೈದು ಹಸು, ಕರುಗಳನ್ನು ಹಿಡಿದು ತಿಂದಿದೆ ಎಂದು ಹೇಳಲಾಗುತ್ತಿದೆ. ಖಡಕಂಟ, ನವಳಮಕ್ಕಿ, ಕಲ್ಲೋಡಿ, ಔಡಳ್ಳಿ, ಯಲದಮಕ್ಕಿ ಮತ್ತು ಮದನಗೋಡು ಭಾಗದಲ್ಲಿ ಚಿರತೆ ದಾಳಿ ಮುಂದುವರೆಸಿದೆ. ಅರಣ್ಯದ ಅಂಚಿನಲ್ಲಿರುವ ಮತ್ತು ಗುಡ್ಡದಲ್ಲಿ ವಾಸಿಸುವ ಒಂಟಿ ಮನೆಯ ಜನರು ರಾತ್ರಿಯ ಹೊತ್ತು ಆತಂಕದಲ್ಲಿ ಓಡಾಡುವಂತಾಗಿದೆ.
ವನ್ಯಜೀವಿಗಳಿಂದ ಬೆಳೆ ಹಾನಿ
ಮತ್ತೊಂದೆಡೆ ಕಾಡು ಪ್ರಾಣಿಗಳ ದಾಳಿಗೆ ಬೆಳೆ ಮತ್ತು ಬೆಸಾಯದ ಫಸಲು ನಷ್ಟವಾಗುತ್ತಿದೆ. ಕಾಡಿನ ಅಂಚಿನಲ್ಲಿರುವ ತೋಟಗಳಿಗೆ ಪ್ರಾಣಿಗಳು ದಾಳಿ ನಡೆಸುತ್ತಿದ್ದು ಅಡಿಕೆ ಸಸಿಗಳು ಹಾನಿಗೀಡಾಗಿವೆ. ಜಾನುವಾರುಗಳು ಮತ್ತು ಬೆಳೆ ರಕ್ಷಿಸಿಕೊಳ್ಳುವುದು ಸ್ಥಳೀಯರಿಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ – ಶಿಕಾರಿಪುರದ ಬೇಗೂರು, ಬೈರನಹಳ್ಳಿ ಸುತ್ತಮುತ್ತ ಚಿರತೆ ಭೀತಿ
ಅರಣ್ಯಾಧಿಕಾರಿಗಳು ಏನಂತಾರೆ?
ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಈ ಭಾಗದಲ್ಲಿ ಚಿರತೆ ಇದೆ ಎಂದು ಶಂಕಿಸಲಾಗಿದೆ. ಅದನ್ನು ಸೆರೆಹಿಡಿಯಲು ಬೋನ್ ಇರಿಸಲಾಗಿದೆ. ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಗಸ್ತು ಹೆಚ್ಚಿಸಲಾಗಿದೆ. ಸಾರ್ವಜನಿಕರಿಗೆ ಜಾಗ್ರತೆ ವಹಿಸಲು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ – ಭದ್ರಾವತಿ ಕಾರೇಹಳ್ಳಿ ಬಳಿ ಬೋನಿಗೆ ಬಿತ್ತು ಚಿರತೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422