ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 17 ಅಕ್ಟೋಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ಪುರಾತನ ಕೊಳವೊಂದರ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸಾಗರ ತಾಲೂಕು ಆನಂದಪುರದಲ್ಲಿರುವ ಕಲ್ಯಾಣಿ ಚಂಪಕ ಸರಸ್ಸುವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಹೈದರಾಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿದೆ.
ಜಲ ತಜ್ಞ ಶಿವಾನಂದ ಕಳವೆ ಅವರು ಕಲ್ಯಾಣಿ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ, ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ರಾಕೇಶ್, ರಾಜ್ಯ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಶಿವಣ್ಣ, ಯಶ್ ಅಭಿಮಾನಿ ಸಂಘದ ಸಂಸ್ಥಾಪಕರಾದ ಶ್ರೀಗಂಧ, ಆನಂದಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ನವೀನಾ ರವೀಂದ್ರ ಗೌಡ, ಉಪಾದ್ಯಕ್ಷ ಮೋಹನ್ ಸೇರಿದಂತೆ ಹಲವರು ಇದ್ದರು.
ಇದಕ್ಕೂ ಮುನ್ನ ಮಹಿಳೆಯರಿಂದ ಕಲ್ಯಾಣಿ ಮುಂದೆ ಮಹಿಳೆಯರಿಂದ ಗಂಗಾ ಪೂಜೆ ಮತ್ತು ಕಳಸ ಪೂಜೆ ನೆರವೇರಿಸಲಾಯಿತು.
ಏನಿದು ಚಂಪಕ ಸರಸ್ಸು ಕಲ್ಯಾಣಿ?
ಅನಂದಪುರ ಸಮೀಪದ ಮಲಂದೂರಿನಲ್ಲಿ ಚಂಪಕ ಸರಸು ಕಲ್ಯಾಣಿ ಇದೆ. ಕೆಳದಿ ಅರಸ ರಾಜ ವೆಂಕಟಪ್ಪ ಅವರ ಕಾಲದಲ್ಲಿ ಈ ಕೊಳ ನಿರ್ಮಿಸಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸುಮಾರು 400 ವರ್ಷದಷ್ಟು ಇತಿಹಾಸವಿದೆ. ನಿರ್ವಹಣೆಯ ಕೊರತೆಯಿಂದಾಗಿ ಪುರಾತನ ಕೊಳ ಹಾಳಾಗಿದೆ.
ಯಶೋಮಾರ್ಗದ ಪ್ಲಾನ್ ಏನು?
ಚಂಪಕ ಸರಸ್ಸು ಪುನರುಜ್ಜೀವನಗೊಳಿಸುವುದು ಯಶೋಮಾರ್ಗದ ಪ್ರಮುಖ ಉದ್ದೇಶ. ಚಂಪಕ ಸರಸ್ಸು ಸುತ್ತಲೂ ಸ್ವಚ್ಚಗೊಳಿಸಿ, ಇಂಗು ಗುಂಡಿ ನಿರ್ಮಿಸಿ, ಈ ಸ್ಮಾರಕಕ್ಕೆ ಗೇಟ್ ನಿರ್ಮಿಸಿ, ಕಾವಲುಗಾರರ ಮನೆ ಇತ್ಯಾದಿ ಅವಶ್ಯವಾದ ಸಂರಕ್ಷಣೆಯ ಕೆಲಸಗಳನ್ನು ಮಾಡಲಾಗುತ್ತದೆ. ಪಾರಂಪರಿಕ ಕಲ್ಯಾಣಿಯನ್ನು ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಉಳಿಸುವ ಮಹತ್ವಾಕಾಂಕ್ಷೆ ಯಶೋಮಾರ್ಗ ಸಂಸ್ಥೆಯದ್ದಾಗಿದೆ. ನಟ ಯಶ್ ನೇತೃತ್ವದ ಸಂಸ್ಥೆಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.