ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 MARCH 2023
SHIKARIPURA : ಒಳ ಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಬಂಜಾರ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yedyurappa) ಅವರ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕಲ್ಲು, ಚಪ್ಪಲಿ ತೂರಿದ್ದಾರೆ. ಮನೆಯ ಕಿಟಕಿ ಗಾಜು ಒಡೆದು ಪುಡಿ ಮಾಡಿದರು. ಇಡೀ ದಿನ ಶಿಕಾರಿಪುರ ಪಟ್ಟಣದಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾವಿರ ಸಾವಿರ ಸಂಖ್ಯೆಯ ಜನ
ನ್ಯಾ. ಸದಾಶಿವ ಆಯೋಗದ ರಿಪೋರ್ಟ್, ಒಳ ಮೀಸಲಾತಿ ಜಾರಿ ಸಂಬಂಧ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಬಂಜಾರ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಕೊರಚ, ಕೊರಮ, ಭೋವಿ ಸಮುದಾಯದ ಜನರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಲಾಯಿತು. ಈ ವೇಳೆ ಮರಿಯಮ್ಮದೇವಿ ಮಠದ ಪೀಠಾಧ್ಯಕ್ಷ ಶ್ರೀ ಸೈನಾಭಗತ್ ಸ್ವಾಮೀಜಿ ಅವರು ಡಾ. ಅಂಬೇಡರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಕ ಸಾವಿರಾರು ಜನರು ರಸ್ತೆ ತಡೆ ನಡೆಸಿದರು. ಅಲ್ಲಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿವರೆಗೆ ಸಾಗಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಗಳನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದರು. ಕೆಲವರು ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಂದರ್ಭ ಉಡುಗೊರೆಯಾಗಿ ನೀಡಿದ್ದ ಸೀರೆಗಳನ್ನು ನಡು ರಸ್ತೆಯಲ್ಲಿ ಇರಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾಕಾರರು ತಾಲೂಕು ಕಚೇರಿ ಬಳಿ ಮನವಿ ಸಲ್ಲಿಸಲು ಆಗಮಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆ ಕಡೆಗೆ ಪ್ರತಿಭಟನಾಕಾರರು ತೆರಳದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿತ್ತು. ಕೆಲವರು ಏಕಾಏಕಿ ಬ್ಯಾರಿಕೇಡ್ ಗಳನ್ನು ತಳ್ಳಿಕೊಂಡು ಯಡಿಯೂರಪ್ಪ ಅವರ ಮನೆ ಕಡೆಗೆ ನುಗ್ಗಿದರು. ದೊಡ್ಡ ಸಂಖ್ಯೆಯ ಜನರು ಅವರನ್ನು ಹಿಂಬಾಲಿಸಿದರು.
ಬ್ಯಾರಿಕೇಡ್ ತಳ್ಳಿ ಯಡಿಯೂರಪ್ಪ ಅವರ ಮನೆ ಕಡೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದ ಚದುರಿದ ಪ್ರತಿಭಟನಾಕಾರರು ಬಳಿಕ ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಾಟ ಮಾಡಿದರು.
ಘಟನೆಯಲ್ಲಿ ಶಿಕಾರಿಪುರ ಠಾಣೆ ಇನ್ಸ್ ಪೆಕ್ಟರ್ ಲಕ್ಷ್ಮಣ್, ಸಿಬ್ಬಂದಿ, ಕೆ.ಎಸ್.ಆರ್.ಪಿ ಸಿಬ್ಬಂದಿ ಗಾಯಗೊಂಡರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yedyurappa) ಅವರ ಮನೆ ಮುಂದೆ ಪ್ರತಿಭಟನಾಕಾರರು ಜಮಾಯಿಸಿದರು. ಅವರ ಮನೆಯತ್ತ ಕಲ್ಲು, ಚಪ್ಪಲಿ ತೂರಾಟ ಮಾಡಿದರು. ಮನೆಯ ಕಿಟಕಿ ಗಾಜುಗಳು ಪುಡಿಯಾದವು. ಯಡಿಯೂರಪ್ಪ ಅವರ ಮನೆ ಇರುವ ರಸ್ತೆಯಲ್ಲಿ ಕೆಲಕಾಲ ಆತಂಕ ಉಂಟಾಯಿತು. ಬಿಜೆಪಿ ಕಚೇರಿ ಮೇಲೆ ಹಾರಿಸಿದ್ದ ಬಿಜೆಪಿ ಧ್ವಜನ್ನು ಕೆಲವರು ಕಿತ್ತೆಸೆದರು.
ಯಡಿಯೂರಪ್ಪ ಅವರ ಮನೆ ಬಳಿ ನುಕುನುಗ್ಗಲು ಉಂಟಾಗಿ, ಮಹಿಳೆಯೊಬ್ಬರು ನೆಲಕ್ಕುರುಳಿದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನು, ಇದೇ ವೇಳೆ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಯಡಿಯೂರಪ್ಪ ಮನೆ ಮೇಲೆ ದಾಳಿ, ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ, ಏನಂದ್ರು?
ಪ್ರತಿಭಟನಾಕಾರರನ್ನು ಪೊಲೀಸರು ತಹಶೀಲ್ದಾರ್ ಕಚೇರಿಗೆ ಕರೆದೊಯ್ದರು. ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದರು. ಅಲ್ಲದೆ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಲಾಯಿತು.
ಇದನ್ನೂ ಓದಿ – ಮನೆ ಮೇಲೆ ಕಲ್ಲು ತೂರಾಟ, ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ, ಹೇಳಿಕೆಯ 5 ಪಾಯಿಂಟ್ ಇಲ್ಲಿದೆ
ಇನ್ನು, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದರು. ದಾಳಿ ಕುರಿತು ಪರಿಶೀಲನೆ ನಡೆಸಿದರು.
ಇದನ್ನೂ ಓದಿ – ಶಿಕಾರಿಪುರದಲ್ಲಿ ಈಗ ಹೇಗಿದೆ ಪರಿಸ್ಥಿತಿ? ಸೆಕ್ಷನ್ 144 ಜಾರಿ ಬಗ್ಗೆ ಪೊಲೀಸ್ ಇಲಾಖೆ ಹೇಳಿದ್ದೇನು?