ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 ಏಪ್ರಿಲ್ 2022
ಹಣಕಾಸು ವಿಚಾರಕ್ಕೆ ಸ್ನೇಹಿತನ ಕೊಲೆಗೈದ ನಾಲ್ವರಿಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ನೀಡಿದೆ.
ಗಾಜನೂರಿನ ದುರ್ಗ ಅಲಿಯಾಸ್ ದುರ್ಗಪ್ಪ (29), ಉಮೇಶ (30), ಸುರೇಂದ್ರ ಅಲಿಯಾಸ್ ಸುರೇಶ (30) ಹಾಗೂ ಶಂಕರ ಅಲಿಯಾಸ್ ಶಿವಶಂಕರ (24) ಶಿಕ್ಷೆಗೆ ಒಳಗಾದವರು. ಗಾಜನೂರು ಇಂದಿರಾನಗರದ ರಾಘು ಅಲಿಯಾಸ್ ರಾಘವೇಂದ್ರ (28) ಕೊಲೆಯಾಗಿದ್ದ.
ರಾಘವೇಂದ್ರ ಮತ್ತು ದುರ್ಗಪ್ಪ ಸ್ನೇಹಿತರಾಗಿದ್ದು ಗಾಜನೂರಿನ ಇಂದಿರಾನಗರದಲ್ಲಿ ವಾಸವಾಗಿದ್ದರು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ದುರ್ಗಪ್ಪ ತನ್ನ ಸ್ನೇಹಿತರಾದ ಉಮೇಶ್, ಸುರೇಂದ್ರ, ಶಂಕರ ಮತ್ತು ಲೋಕೇಶಪ್ಪನ ಜತೆಗೂಡಿ 2013ರ ಮೇ 29ರಂದು ರಾಘವೇಂದ್ರನ ಕೊಲೆಗೆ ಸಂಚು ರೂಪಿಸಿದ್ದ.
ಅಂದು ರಾತ್ರಿ ರಾಘವೇಂದ್ರ ಇಂದಿರಾನಗರ ಚಾನೆಲ್ ಏರಿ ಮೇಲೆ ನಡೆದುಕೊಂಡು ಹೋಗುವಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಎಡ ಕುತ್ತಿಗೆ, ಕಿವಿ ಮತ್ತು ಕಾಲುಗಳ ಮೇಲೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಡಿವೈಎಸ್ಪಿ ರಾಮಾನಾಯ್ಕ್ ಅವರು ದುರ್ಗಪ್ಪ ಸೇರಿದಂತೆ ಐವರನ್ನು ಬಂಧಿಸಿ 2013ರ ಜೂ.28ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಪ್ರಸಾದ್ ಅವರು ದುರ್ಗಪ್ಪ, ಉಮೇಶ್, ಸುರೇಂದ್ರ ಮತ್ತು ಶಂಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಲೋಕೇಶನಪ್ಪ ವಿರುದ್ಧ ಸೂಕ್ತ ಸಾಕ್ಷಾಧಾರಗಳು ಸಿಗದ ಕಾರಣ ಪ್ರಕರಣದಿಂದ ಬಿಡುಗಡೆಗೊಳಿಸಿದರು. ದಂಡದಲ್ಲಿ ಮೃತ ರಾಘವೇಂದ್ರನ ಪತ್ನಿ ಮಂಜುಳಾ ಅವರಿಗೆ 60 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ.ಒ.ಪುಷ್ಪಾ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422