ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 MAY 2021
ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಅರವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿರ್ವಹಣೆ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಕರೋನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆಯ್ದ 11 ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಫೀಡ್ಬ್ಯಾಕ್ ಪಡೆದುಕೊಂಡರು. ತಜ್ಞ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಸಲಹೆ ಸೂಚನೆ ನೀಡಿದರು.
ಸಿಎಂ ಕೇಳಿದ ಪ್ರಶ್ನೆಗಳೇನು?
ತೀರ್ಥಹಳ್ಳಿ ತಾಲೂಕು ಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಅಲ್ಲಿನ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿದೆ? ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಯಾವ ರೀತಿ ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದೀರಿ? ತಾಲೂಕಿನಲ್ಲಿ ಪ್ರಸ್ತುತ ಎಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ? ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ವ್ಯವಸ್ಥೆ ಹೇಗಿದೆ? ಗ್ರಾಮೀಣ ಪ್ರದೇಶದ ಜನರ ಚಿಕಿತ್ಸೆ ಹಾಗೂ ಮುಂಜಾಗರೂಕತೆ ಕ್ರಮಗಳ ಕುರಿತು ನಿಮ್ಮ ಸಲಹೆಗಳೇನಾದರೂ ಇದ್ದರೆ ತಿಳಿಸಿ. ಇವು ಮುಖ್ಯಮಂತ್ರಿ ಅವರು ಡಾ.ಗಣೇಶ್ ಭಟ್ ಅವರೊಂದಿಗೆ ಕೇಳಿದ ಪ್ರಶ್ನೆಗಳು.
ಡಾಕ್ಟರ್ ಕೊಟ್ಟ ಉತ್ತರ, ಸಲಹೆಗಳೇನು?
100 ಬೆಡ್ ಆಸ್ಪತ್ರೆಯಲ್ಲಿ 50 ಬೆಡ್ ಕೋವಿಡ್ಗೆ ಮೀಸಲಿಡಲಾಗಿದೆ. 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಆಕ್ಸಿಜನ್ನಲ್ಲಿದ್ದಾರೆ. ಪ್ರತಿ ದಿನ ಸಂಜೆ ತಾಲೂಕು ಮೆಡಿಕಲ್ ಆಫೀಸರ್, ತಹಶೀಲ್ದಾರ್, ಶಾಸಕರು ಸಭೆ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತೇವೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವ್ಯವಸ್ಥೆಯನ್ನು ಉತ್ತಮಪಡಿಸಲು ಸಾಧ್ಯವಾಗಿದೆ ಎಂದು ಡಾ.ಗಣೇಶ್ ಭಟ್ ಅವರು ಮುಖ್ಯಮಂತ್ರಿಗೆ ತಿಳಿಸಿದರು.
ಆಂಬುಲೆನ್ಸ್ ಕುರಿತು ಮಾಹಿತಿ
ತಾಲೂಕು ಆಸ್ಪತ್ರೆಯಲ್ಲಿ 2 ಅಂಬುಲೆನ್ಸ್ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ನಾಲ್ಕು ಅಂಬುಲೆನ್ಸ್ ಗ್ರಾಮೀಣ ಪ್ರದೇಶದಿಂದ ಸೋಂಕಿತರನ್ನು ತಾಲೂಕು ಆಸ್ಪತ್ರೆಗೆ ಟ್ರಯಾಜ್ಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದೇವೆ.
ಇದೇ ರೀತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮೂಲಕ ರೋಗಿಗಳನ್ನು ಕರೆ ತರಲು ಹಾಗೂ ಹೋಂ ಐಸೋಲೇಷನ್ನಲ್ಲಿರುವವರ ಚಿಕಿತ್ಸೆಗಾಗಿ ನಾಲ್ಕು ವಾಹನ ಬಳಸಲಾಗುತ್ತಿದೆ.
ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ತೀರ್ತಹಳ್ಳಿಯಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲ. ಆ ವ್ಯವಸ್ಥೆ ಇದ್ದರೆ ಇನ್ನಷ್ಟು ಗುಣಮಟ್ಟದ ಸೇವೆ ಒದಗಿಸಲು ಅನುಕೂಲ ಎಂದು ಡಾ.ಗಣೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾಕ್ಟರ್ಗಳ ಕಾರ್ಯಕ್ಕೆ ಸಿಎಂ ಮೆಚ್ಚುಗೆ
ವೈದ್ಯರ ಕಾರ್ಯನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡನೇ ಅಲೆ ನಿರೀಕ್ಷೆಗೂ ಮೀರಿ ತೀವ್ರಗೊಂಡಿದೆ. ಇದರಿಂದಾಗಿ ಆಸ್ಪತೆಗಳು, ವೈದ್ಯರ ಮೇಲೆ ಒತ್ತಡ ಹೆಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮಾನವೀಯ ನೆಲೆಯಲ್ಲಿ ಸಮರ್ಥವಾಗಿ ಎದುರಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಅಮೂಲ್ಯ ಆಸ್ತಿ ಎಂದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422