ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 ಡಿಸೆಂಬರ್ 2021
ಗೋವು ಕಳ್ಳರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತೀರ್ಥಹಳ್ಳಿ ತಾಲೂಕು ಕಚೇರಿಯ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು.
![]() |
ರಸ್ತೆ ತಡೆ ನಡೆಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಪೊಲೀಸರು ಕಟ್ಟುನಿಟ್ಟು ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರಿಗೂ ದೂರು ತಿಳಿಸಿದರು.
ಗೃಹ ಸಚಿವರ ತವರಲ್ಲೇ ಪೊಲೀಸರ ವಿರದ್ಧ ಆಕ್ರೋಶ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲೇ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತೀರ್ಥಹಳ್ಳಿಯಲ್ಲಿ ಬಹು ವರ್ಷದಿಂದ ಇರುವ ಪೊಲೀಸರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಯಾರೆಲ್ಲ ಏನು ಹೇಳಿದರು?
ಬಜರಂಗದಳ ತಾಲೂಕು ಕಾರ್ಯದರ್ಶಿ ಗಣೇಶ ಪ್ರಸಾದ್ ಮಾತನಾಡಿ, ಮೇಳಿಗೆಯಿಂದ ದನ ತುಂಬಿಕೊಂಡು ಹೋಗುತ್ತಿರುವ ಮಾಹಿತಿ ಲಭ್ಯವಾಗಿತ್ತು. ನಾವು ನಾಲ್ಕು ದನಗಳಿರಬಹುದು ಎಂದುಕೊಂಡಿದ್ದೆವು. ಆದರೆ ಆ ಸಣ್ಣ ಗಾಡಿಯಲ್ಲಿ ಎಂಟು ಜಾನುವಾರುಗಳಿದ್ದವು. ಬೆಳಗಿನ ಹೊತ್ತಲ್ಲೆ ಧೈರ್ಯವಾಗಿ ದನಗಳನ್ನು ಕೊಂಡೊಯ್ಯುತ್ತಿದ್ದಾರೆ. ಬೆಜ್ಜೆವಳ್ಳಿ ಭಾಗದಲ್ಲಿ ಕಾರ್ಯಕರ್ತರು ವಾಹನ ತಡೆಯಲು ಮುಂದಾದಾಗ ಮೈಮೇಲೆ ಹತ್ತಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಎಲ್ಲೆಲ್ಲಿ ಕಸಾಯಿ ಖಾನೆಗಳಿವೆ ಅನ್ನುವುದು ಪೊಲೀಸರಿಗೆ ಗೊತ್ತಿದೆ. ಅವುಗಳನ್ನು ಮುಚ್ಚಿಸದೆ ಇದ್ದರೆ ಮುಂದಿನ ವಾರ ತೀರ್ಥಹಳ್ಳಿ ಬಂದ್ ಮಾಡುತ್ತೇವೆ.
ಬೇರೆಲ್ಲದ್ದಕ್ಕೂ ತಪಾಸಣೆ ಮಾಡುತ್ತಾರೆ
ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರಾಹುಲ್ ಮಾತನಾಡಿ, ಮೇಳಿಗೆಯಿಂದ ಬೆಜ್ಜವಳ್ಳಿವರೆಗೂ ಗೋವುಗಳ ಕಳವು ಮಾಡಿಕೊಂಡು ಹೋಗುತ್ತಿರುವಾಗ ಪೊಲೀಸರೇಕೆ ತಪಾಸಣೆ ಮಾಡಲಿಲ್ಲ. ಬೇರೆ ವಿಚಾರಗಳಿಗೆ ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುತ್ತಾರೆ. ಯಾವ ರೀತಿ ಬೀಟ್ ಮಾಡುತ್ತಿದ್ದಾರೆ. ಗೋವುಗಳ ರಕ್ಷಣೆ ವಿಚಾರದಲ್ಲಿ ಪೊಲೀಸರು ಉತ್ತರ ಕೊಡಬೇಕು.
ನಮ್ಮ ಕಾರ್ಯಕರ್ತರು ಕಣ್ಮುಚ್ಚಿ ಕೂರಲ್ಲ
ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಮಾತನಾಡಿ, ತೀರ್ಥಹಳ್ಳಿಯ ಈ ಘಟನೆಯನ್ನು ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ಪೊಲೀಸರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಆದರೆ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಕಣ್ಮುಚ್ಚಿ ಕೂರುವವರಲ್ಲ. ಯಾರೆಲ್ಲ ಅಧಿಕಾರಿಗಳು ಇಲ್ಲಿ ಗೋವುಗಳು, ಮತಾಂತರ, ಹಿಂದೂ ಕಾರ್ಯಕರ್ತರ ವಿಚಾರದಲ್ಲಿ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೋ ಅವರನ್ನೆಲ್ಲ ಇಲ್ಲಿಂದ ಕಳುಹಿಸಿಬಿಡಿ ಎಂದು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಗೋವುಗಳನ್ನು ಕಡಿಯುವ ವಿಚಾರ ತಿಳಿಸಿದರೆ ಡಿವೈಎಸ್’ಪಿಯೊಬ್ಬರು ವಿಡಿಯೋ ಮಾಡಿಕೊಂಡು ಬನ್ನಿ. ಆಮೇಲೆ ನಾವು ಹೋಗುತ್ತೇವೆ ಎಂದು ತಿಳಿಸುತ್ತಾರೆ. ಗೋವು ಕಳ್ಳತನ ಮುಂದುವರೆದರೆ ಮುಂದಾಗುವುದಕ್ಕೆಲ್ಲ ಪೊಲೀಸ್ ಇಲಾಖೆಯೆ ಹೊಣೆ ಹೊರಬೇಕು ಎಂದು ಎಚ್ಚರಿಸಿದರು.
ತುಂಗಾ ನೀರು ಕುಡಿಯಲು ಪುಣ್ಯ ಮಾಡಿರಬೇಕು
ಆರ್.ಎಸ್.ಎಸ್.ನ ಜಿಲ್ಲಾ ಕಾರ್ಯವಾಹ ಲೋಹಿತಾಶ್ವ ಅವರು ಮಾತನಾಡಿ, ಅಧಿಕಾರಿಗಳ ಕಣ್ಮುಂದೆಯೇ ಇಷ್ಟೊಂದು ಪ್ರಮಾಣದಲ್ಲಿ ಗೋವುಗಳ ಕಳವು ಮಾಡಲಾಗುತ್ತಿದೆ. ಹಾಗಿದ್ದಾಗ ಇಂತಹ ಅಧಿಕಾರಿಗಳು ಇಲ್ಲಿ ಯಾಕೆ ಇರಬೇಕು. ನಾವು ಇದನ್ನೆಲ್ಲ ಸಹಿಸಿ ಕೂರುವವರಲ್ಲ. ತುಂಗಾ ನದಿಯಲ್ಲಿ ನೀರು ಕುಡಿಯಲು ಪುಣ್ಯ ಮಾಡಿರಬೇಕು. ಆದರೆ ಇಲ್ಲಿರುವ ಕೆಲವು ಪೊಲೀಸರಿಗೆ ಪಾವಗಡ, ಬೀದರ್, ರಾಯಚೂರು ನೀರು ಇಷ್ಟವಾದಂತೆ ತೋರುತ್ತಿದೆ ಎಂದು ಟೀಕಿಸಿದರು.
ನಾವೇನು ಆಫ್ಘಾನಿಸ್ಥಾನದಲ್ಲಿ ಇದ್ದೀವಾ?
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್ ಮಾತನಾಡಿ, ನಮ್ಮ ಸಂಘಟನೆಗಳು ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳಿಗೆ ಕೊಡುತ್ತಿದ್ದೇವೆ. ಪ್ರತಿ ಕಾರ್ಯಕರ್ತನು ದುಡಿದು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ನಮಗ್ಯಾವ ಲಂಚ ಬರುವುದಿಲ್ಲ. ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಆದರೂ ಗೋವು ಕಳವು ಮಾಡಲಾಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಕೇಸು ಹಾಕುತ್ತಿದ್ದಾರೆ. ವರ್ಷಗಟ್ಟಲೆ ಕೋರ್ಟಿಗೆ ಅಲೆಯುವಂತೆ ಮಾಡುತ್ತಾರೆ. ಆದರೆ ಗೋವು ಕಳ್ಳರ ವಿರುದ್ಧವೇಕೆ ಕೇಸು ಹಾಕುತ್ತಿಲ್ಲ. ಗೂಂಡಾ ಕೇಸು ಹಾಕುತ್ತಿಲ್ಲವೇಕೆ. ನಾವೇನು ಅಫಘಾನಿಸ್ತಾನದಲ್ಲಿದ್ದೇವಾ ಎಂದು ಪ್ರಶ್ನಿಸಿದರು.
ಬಿರಿಯಾನಿ ಸವಿಯಲು ಪೊಲೀಸ್ ವಾಹನ ಬಳಕೆ
ತಾಲೂಕು ಬಿಜೆಪಿ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ ಮಾತನಾಡಿ, ಗೋ ಹತ್ಯೆ ವಿಚಾರದಲ್ಲಿ ಜೀರೋ ಟಾಲರೆನ್ಸ್ ಎಂದು ಗೃಹ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕದುಡುವವರ ಹೆಡೆಮುರಿ ಕಟ್ಟಲು ಸರ್ಕಾರ ನಿಮಗೆ ವಾಹನ, ಶಸ್ತ್ರಾಸ್ತ್ರ ನೀಡಿದೆ. ಆದರೆ ಈ ವಾಹನಗಳು ರಾತ್ರಿ ವೇಳೆ ಬಿರಿಯಾನಿ ಸವಿಯಲು ಬಳಕೆಯಾಗುತ್ತಿದೆ. ಹಲವು ಭಾರಿ ಯಾವ ಹೊಟೇಲ್’ನಲ್ಲಿ ಬಿರಿಯಾನಿ ನೆಪದಲ್ಲಿ ಗೋಮಾಂಸ ಪೂರೈಕೆಯಾಗುತ್ತಿದೆ ಅನ್ನುವ ಮಾಹಿತಿ ನೀಡಿದ್ದೇವೆ. ಗುರುವಾರ ರಾತ್ರಿಯೇ ಗೋವುಗಳ ಕಳವು ಆಗುತ್ತಿರುವುದೇಕೆ ಅನ್ನುವುದನ್ನೂ ತಿಳಿಸಿದ್ದೇವೆ. ಆದರೂ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ಇಲ್ಲ. ಕೆಲವು ಸಮವಸ್ತ್ರಧಾರಿಗಳು ಗೋ ಕಳ್ಳರು, ಗಾಂಜಾ ಸರಬರಾಜುದಾರರೊಂದಿಗೆ ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸ್.ಪಿ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಘಟನೆ ವಿಷಾದನೀಯ. ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಗೋವುಗಳು ಎಲ್ಲಿಗೆ ಸಾಗಣೆ ಮಾಡಲಾಗುತಿತ್ತೋ ಅಲ್ಲಿಯೂ ದಾಳಿ ನಡೆಸಲಾಗಿದೆ. ಇನ್ಮುಂದೆ ಹೀಗಾಗದಂತೆ ಕಟ್ಟುನಿಟ್ಟು ನಿಗಾ ವಹಿಸಲಾಗುತ್ತದೆ. ಇನ್ನು, ಪೊಲೀಸರು ಕರ್ತವ್ಯ ಲೋಪ ಎಸಗಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನಾಕಾರರು ಜಿಲ್ಲಾ ರಕ್ಷಣಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200