ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA / THIRTHAHALLI / HOSNAGARA NEWS | 17 JUNE 2021
ಆನ್‍ಲೈನ್ ಕ್ಲಾಸ್‍ನಲ್ಲಿ ಪಾಲ್ಗೊಳ್ಳಲು ಇಲ್ಲಿಯ ಮಕ್ಕಳು ಪ್ರತಿದಿನ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕ್ಲಾಸ್‍ಗಾಗಿ ಈ ವಿದ್ಯಾರ್ಥಿಗಳು ನಿತ್ಯ ಟ್ರೆಕಿಂಗ್ ಮಾಡಬೇಕಿದೆ. ಕಾಡು ಪ್ರಾಣಿಗಳ ಭಯ, ಮಳೆ, ಗಾಳಿ ಜೊತೆಯು ಸೆಣೆಸಬೇಕಿದೆ.
ಇದು ಶರಾವತಿ ಹಿನ್ನೀರಿನ ತುಮರಿ, ಬ್ಯಾಕೋಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ನಿತ್ಯದ ಕಷ್ಟ. ಆನ್‍ಲೈನ್ ಕ್ಲಾಸ್‍ಗಾಗಿ ದಿನ ಹರಸಾಹಸ ಮಾಡಬೇಕಿದೆ. ಇಷ್ಟೆಲ್ಲ ಕಷ್ಟಪಟ್ಟರು ಸಿಗುವುದು 2ಜಿ ನೆಟ್‍ವರ್ಕ್. ಇದರಲ್ಲಿ ಆನ್‍ಲೈನ್ ಕ್ಲಾಸ್‍ನಲ್ಲಿ ಪಾಲ್ಗೊಳ್ಳುವುದಿರಲಿ, ಕನೆಕ್ಟ್ ಆಗುವುದಕ್ಕೂ ಕಷ್ಟವಾಗಲಿದೆ.
ಗುಡ್ಡ ಹತ್ತಿ ಕೂರಬೇಕು
ತುಮರಿಯಿಂದ ಸುಮಾರು 15 ಕಿ.ಮೀ ದೂರದ ಕಳೂರು ಗುಡ್ಡದಲ್ಲಿ ಅಲ್ಪಸ್ವಲ್ಪ ನೆಟ್‍ವರ್ಕ್ ಸಿಗಲಿದೆ. ಇದಕ್ಕಾಗಿ ಸುತ್ತಮುತ್ತಲ ಗ್ರಾಮದ ಹತ್ತಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕಾಡು ದಾರಿ, ವನ್ಯಮೃಗಗಳ ಭೀತಿ ಹಿನ್ನೆಲೆ ಒಬ್ಬಂಟಿಯಾಗಿ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಆತಂಕ. ಆದ್ದರಿಂದ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಇದ್ದಾಗ ಕೆಲಸಗಳನ್ನು ಬಿಟ್ಟು ಪೋಷಕರು ಕೂಡ ಗುಡ್ಡ ಹತ್ತಬೇಕಿದೆ.
ಭಾರಿ ಮಳೆಯಲ್ಲಿ ತೋಯ್ದ ವಿದ್ಯಾರ್ಥಿಗಳು
ಮುಂಗಾರು ಬಿರುಸಾಗಿದೆ. ಸಾಗರ ತಾಲೂಕಿನಲ್ಲಿ ಭಾರಿ ಮಳೆಯು ಆಗುತ್ತಿದೆ. ಗುಡ್ಡದ ಮೇಲೆ ಆನ್‍ಲೈನ್ ಕ್ಲಾಸ್ ಕೇಳಲು ಹೋಗುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಸಿಲುಕುತ್ತಿದ್ದಾರೆ. ಛತ್ರಿ ಅಡ್ಡ ಹಿಡಿದು, ಮಳೆ, ಗಾಳಿಯಿಂದ ರಕ್ಷಣೆ ಪಡೆದುಕೊಂಡು ಕ್ಲಾಸ್ ಕೇಳುವಂತಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳು ಪ್ರತಿದಿನ ಇಲ್ಲಿ ಗುಡ್ಡ ಹತ್ತಿದ್ದಾರೆ.
ಇದನ್ನೂ ಓದಿ | 5ಜಿ ಯುಗದಲ್ಲೂ ಇಲ್ಲ ಸಿಗ್ನಲ್, ನೆಟ್ವರ್ಕ್ಗಾಗಿ ಮರದಡಿ ಟೆಂಟ್, ಆನ್‍ಲೈನ್ ಕ್ಲಾಸ್‍ಗಾಗಿ 12 ಕಿ.ಮೀ ಹೋಗ್ತಾರೆ ಸ್ಟೂಡೆಂಟ್ಸ್
ಆನ್‍ಲೈನ್ ಕ್ಲಾಸ್‍ಗಾಗಿ ಪ್ರತಿದಿನ ಐದಾರು ಕಿ.ಮೀ. ನಡೆಯಬೇಕು. ಗುಡ್ಡ ಹತ್ತಬೇಕು. ಇಷ್ಟು ಕಷ್ಟಪಟ್ಟರು ಇಲ್ಲಿ ಸರಿಯಾದ ನೆಟ್‍ವರ್ಕ್ ಸಿಗುವುದಿಲ್ಲ ಅನ್ನುತ್ತಾರೆ ಪದವಿ ವಿದ್ಯಾರ್ಥಿನಿ ಪಲ್ಲವಿ.
ಹಕ್ಕೆಮನೆ ನಿರ್ಮಿಸಿಕೊಂಡ ವಿದ್ಯಾರ್ಥಿಗಳು
ತೀರ್ಥಹಳ್ಳಿ ಭಾಗದಲ್ಲೂ ನೆಟ್‍ವರ್ಕ್ ಸಮಸ್ಯೆ ಬಾಧಿಸುತ್ತಿದೆ. ಇಲ್ಲಿನ ಹಾರೋಗೊಳಿಗೆಯಲ್ಲಿ ಗುಡ್ಡದ ಮೇಲೆ ವಿದ್ಯಾರ್ಥಿಗಳಿಗೆ ಕೆಲವು ಕಡೆ ಅಲ್ಪಸ್ವಲ್ಪ ನೆಟ್‍ವರ್ಕ್ ಸಿಗಲಿದೆ. ಇದೆ ಕಾರಣಕ್ಕೆ ಮೊಬೈಲ್ ಸಿಗ್ನಲ್ ಸಿಗುವ ಕಡೆ ವಿದ್ಯಾರ್ಥಿಗಳು ಹಕ್ಕೆಮನೆ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಸಿಇಟಿ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಪದವಿ ಕಾಲೇಜು ವಿದ್ಯಾರ್ಥಿಗಳಿದ್ದಾರೆ.
ವರ್ಕ್ ಫ್ರಮ್ ಹೋಂಗೆ ಸಂಷಕ್ಟ
ವಿದ್ಯಾರ್ಥಿಗಳಿಗೆ ಮಾತ್ರವಲ್ಲ ವರ್ಕ್ ಫ್ರಮ್ ಹೋಂ ಮಾಡುತ್ತಿರುವ ಉದ್ಯೋಗಿಗಳಿಗೂ ನೆಟ್‍ವರ್ಕ್ ಸಮಸ್ಯೆ ಬಾಧಿಸುತ್ತಿದೆ. ಹೊಸನಗರ ತಾಲೂಕು ವಾರಂಬಳ್ಳಿ ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದರೂ ಸಮಸ್ಯೆ ಬಗೆಹರಿದಿಲ್ಲ. ಇದೆ ಕಾರಣಕ್ಕೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸಿಂಧೂ, ತಮ್ಮ ಮನೆಯಿಂದ ಬಹು ದೂರದಲ್ಲಿ ಟೆಂಟ್ ನಿರ್ಮಿಸಿಕೊಂಡು ನಿತ್ಯ ಕೆಲಸ ಮಾಡುತ್ತಿದ್ದಾರೆ.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಸರಾಗ. ಆದರೆ ಮಲೆನಾಡಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿತ್ಯ ಪರಿತಪಿಸುತ್ತಿದ್ದಾರೆ. ಅಭಿವೃದ್ದಿಯಲ್ಲಿ ವಂಚಿತವಾಗಿರುವ ಈ ಭಾಗದ ವಿದ್ಯಾರ್ಥಿಗಳು ಈಗ ಕಲಿಕೆಯಲ್ಲು ವಂಚಿತವಾಗುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಬಗೆಹರಿಸುವ ಕುರಿತು ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳು ಸಾಲು ಸಾಲು ಸಭೆ ನಡೆಸಿದ್ದು ಬಿಟ್ಟರೆ, ಮತ್ತಿನ್ಯಾವ ಉಪಯೋಗವಾಗಿಲ್ಲ. ಇನ್ನಾದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ಡಿಜಿಟಿಲ್ ಇಂಡಿಯಾ ಕಲ್ಪನೆಗೆ ಅರ್ಥವೆ ಇಲ್ಲವಾಗಲಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422