ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |6 JANUARY 2023
THIRTHAHALLI : ಹಣಗೆರೆಯ (hanagere) ಶ್ರೀ ಭೂತರಾಯ ಚೌಡೇಶ್ವರಿ ಹಾಗೂ ಸೈಯದ್ ಸಾದತ್ ದರ್ಗಾದಲ್ಲಿ ಹುಂಡಿ ಎಣಿಕೆ ಕಾರ್ಯಕ್ಕೆ ಆಗಮಿಸಿದ್ದ ತಹಶೀಲ್ದಾರ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. 2 ಗಂಟೆಗು ಹೆಚ್ಚು ಹೊತ್ತು ವಾಗ್ವಾದ ನಡೆಸಿದರು.
ತಹಶೀಲ್ದಾರ್ ಅಮೃತ್ ಅತ್ರೇಶ್ ಅವರು ಗುರುವಾರ ಹುಂಡಿ ಎಣಿಕೆ ಕಾರ್ಯಕ್ಕಾಗಿ ಹಣಗೆರೆಯ (hanagere) ಭಾವೈಕ್ಯತೆಯ ಶ್ರದ್ಧಾ ಕೇಂದ್ರಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ಅವರಿಗೆ ಘೇರಾವ್ ಹಾಕಿದರು. ತಮ್ಮ ಬೇಡಿಕೆ ಈಡೇರಿಸದಿರುವ ಕುರಿತು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರ ಬೇಡಿಕೆಗಳೇನು?
ಹಣಗೆರೆಯ (hanagere) ಶ್ರದ್ಧಾಕೇಂದ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಮೂಲ ಸೌಕರ್ಯಗಳಿಲ್ಲ. ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲ. 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ. ಅದು ಉಪಯೋಗಕ್ಕೆ ಲಭ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು, ಗಲಾಟೆಗಳು ಹೆಚ್ಚಾಗಿವೆ. ಇಲ್ಲಿ ಪೊಲೀಸ್ ಚೌಕಿ ನಿರ್ಮಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಮಹಿಳೆಯರು, ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಸರಿಯಿಲ್ಲ. ಚಪ್ಪಲಿ ಸ್ಟಾಂಡ್ ಇಲ್ಲ. ದೇಗುಲದೊಳಗೆ ಸರತಿಯಲ್ಲಿ ಹೋಗಿ ಬರುವ ವ್ಯವಸ್ಥೆ ಇಲ್ಲ. ಪುಷ್ಕರಣಿಯನ್ನು ಸ್ವಚ್ಛಗೊಳಿಸುತ್ತಿಲ್ಲ ಎಂದು ಸಾಲು ಸಾಲು ಸಮಸ್ಯೆಗಳನ್ನು ತಹಶೀಲ್ದಾರ್ ಗಮನಕ್ಕೆ ತೆರಲಾಯಿತು.
2 ಗಂಟೆಗೂ ಹೆಚ್ಚು ಹೊತ್ತು ವಾಗ್ವಾದ
ತಹಶೀಲ್ದಾರ್ ಅಮೃತ್ ಅತ್ರೇಶ್ ಅವರೊಂದಿಗೆ ಸ್ಥಳೀಯರು ಸುಮಾರು 2 ಗಂಟೆ ಹೊತ್ತು ವಾಗ್ವಾದ ನಡೆಸಿದರು. ‘ದೇವಸ್ಥಾನದ ಹಣ ಬೇಕು, ಆದರೆ ಇಲ್ಲಿ ಅಭಿವೃದ್ಧಿ, ಭದ್ರತೆ ಬೇಡವೆ’ ಎಂದು ಪ್ರಶ್ನಿಸಿದರು. ‘10 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ’ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಹುಂಡಿಯಲ್ಲಿ ಕಾಣಿಕೆ ಎಣಿಕೆಗೆ ಅವಕಾಶ ಕಲ್ಪಿಸಲಾಯಿತು.
ಇದನ್ನೂ ಓದಿ – ಸಿಗಂದೂರಿಗೆ ತೆರಳಬೇಕಿದ್ದ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಗೆ ಲಾಡ್ಜ್ ನಲ್ಲಿ ಹೃದಯಾಘಾತ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಸುರೇಶ್, ಸದಸ್ಯರಾದ ರಾಘವೇಂದ್ರ, ಲೋಕೇಶ್, ಮಾಜಿ ಅಧ್ಯಕ್ ಕೆರೆಹಳ್ಳಿ ರಾಮಪ್ಪ, ಪ್ರಮುಖರಾದ ಸುನೀಲ್ ಕುಮಾರ್ ಶಿರನಲ್ಲಿ, ಕುಣಜೆ ಕಿರಣ್ ಪ್ರಭಾಕರ್, ಟಿ.ಪಿ.ನಾರಾಯಣಪ್ಪ ಸೇರಿ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422