SHIVAMOGGA LIVE NEWS | 16 JUNE 2024
FATAFAT NEWS : ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ (Taluk) ವಿವಿಧೆಡೆಯ ಫಟಾಫಟ್ ಸುದ್ದಿಗಳು ಇಲ್ಲಿದೆ.
![]() |
ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ
THIRTHAHALLI : ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಸಾರ್ವಜನಿಕರ ಸಹಕಾರದ ಅಗತ್ಯ. ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೋಮು ಪ್ರಚೋದನೆ ಮಾಡುವ ಹಾಗೂ ನೈತಿಕ ಪೋಲಿಸ್ ಗಿರಿ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ತಾಲೂಕಿನಲ್ಲಿ ಗಾಂಜಾ ಸೇವನೆ, ಮಾರಾಟ ಸಂಬಂಧ ಈವರೆಗೆ ಸುಮಾರು 21 ಪ್ರಕರಣ ಪತ್ತೆ ಹಚ್ಚಲಾಗಿದೆ. ಯಾವುದೇ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.
ಕೋಣಂದೂರು ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ
KONANDURU : ಓದಿನಲ್ಲಿ ಸ್ಪರ್ಧೆ ಜೊತೆಗೆ ಶ್ರದ್ಧೆ ಮುಖ್ಯ. ಕಷ್ಟಪಟ್ಟು ಸಂಪಾದಿಸಿದ್ದು ಮಾತ್ರ ಸಂತೃಪ್ತಿಯನ್ನು ಕೊಡುತ್ತದೆ. ಭವಿಷ್ಯದ ಜನಾಂಗ ಉತ್ತಮ, ಸಂಸ್ಕಾರಯುತರನ್ನಾಗಿ ರೂಪಿಸುವ ಕೆಲಸ ಶಿಕ್ಷಣದಿಂದ ಆಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು. ರಾಷ್ಟ್ರೀಯ ವಸತಿ ಶಾಲೆಯಲ್ಲಿ ನೂತನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಂಶುಪಾಲ ಕೆ.ಎಸ್.ವಾಸುದೇವ್, ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಕೆ.ಸಿ.ಮೃತ್ಯುಂಜಯಪ್ಪ ಸೇರಿದಂತೆ ಹಲವರು ಇದ್ದರು.
ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳಿಂದ ಮನೆ ಭೇಟಿ
RIPPONPETE : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಡೆಂಗ್ಯು ಮತ್ತು ಚಿಕುನ್ ಗುನ್ಯ ಪ್ರಕರಣಗಳ ವರದಿಯಾದ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಭೇಟಿ ಹಮ್ಮಿಕೊಳ್ಳಲಾಗಿದೆ. 7 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಡೆಂಗ್ಯು ಪ್ರಕರಣ, ಎರಡು ಚಿಕನ್ ಗುನ್ಯ. ಮನೆ ಭೇಟಿ ವೇಳೆ ಜನಜಾಗೃತಿ ಮೂಡಿಸಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್, ವೈದ್ಯಾಧಿಕಾರಿ ಡಾ. ಆಂಜನೇಯ, ಪಿಡಿಒ ಎನ್.ಮಧುಸೂದನ್, ಆರೋಗ್ಯ ನಿರೀಕ್ಷಣಾಧಿಕಾರಿ ಅಮ್ರತೇಶ್, ರಾಘವೇಂದ್ರ, ಅರುಣ್, ಪ್ರವೀಣ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಪದ್ಮಾವತಿ, ಪೂಜಾ, ಆಶಾ, ರಾಜೇಶ್ವರಿ, ರೋಹಿಣಿ, ವಿನಂತಿ, ಭಾಗೀರಥಿ ಇದ್ದರು.
ಚರಂಡಿ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯಿತಿ ಸದಸ್ಯ
HOSANAGARA : ಮಳೆಗಾಲದ ಮುನ್ನ ಚರಂಡಿ ಸ್ವಚ್ಛಗೊಳಿಸಲು ಸೂಚಿಸಿದರೂ ವಿಳಂಬ ಮಾಡಿದ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡು ಗ್ರಾಮ ಪಂಚಾಯಿತಿ ಸದಸ್ಯನೇ ಚರಂಡಿಗೆ ಇಳಿದು ಕ್ಲೀನ್ ಮಾಡಲು ಮುಂದಾಗಿದ್ದಾರೆ. ತಾಲೂಕಿನ ಮೂಡುಗೊಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕರುಣಾಕರ ಶೆಟ್ಟಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿ ಅಂಗಡಿ ಮುಂಗಟ್ಟುಗಳಿರುವ ಪ್ರದೇಶದಲ್ಲಿ ಜೂನ್‌ನಲ್ಲಿ ಆರಂಭವಾಗುವ ಮಳೆಗಾಲದ ಮುಂಚಿತವಾಗಿ ಚರಂಡಿ ಕ್ಲೀನ್ ಮಾಡಲಾಗುತ್ತಿತ್ತು. ಈ ಬಾರಿ ಚರಂಡಿ ಸ್ವಚ್ಛತೆಗೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರಿಂದ ಕರುಣಾಕರ ಶೆಟ್ಟಿ ಚರಂಡಿಗೆ ಇಳಿದು ಸ್ವಚ್ಛತಾ ಕೆಲಸ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಗ್ರಾಪಂ ಅಧ್ಯಕ್ಷೆ ಯು.ಸಂಗೀತಾ ಮತ್ತು ಪಿಡಿಒ ರಾಮಚಂದ್ರ ಅವರು ಸಿಬ್ಬಂದಿ ಮುಖಾಂತರ ಸ್ವಚ್ಛತಾ ಕಾರ್ಯ ಆರಂಭಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.
ರಿಪ್ಪನ್‌ಪೇಟೆಗೆ ಪ್ರಮೋದ್ ಮುತಾಲಿಕ್ ಭೇಟಿ
RIPPONPETE : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಿಪ್ಪನ್‌ಪೇಟೆಗೆ ಭೇಟಿ ನೀಡಿದ್ದರು. ಅಶೋಕ್ ಗೌಡ ಹಾಲುಗುಡ್ಡೆ ಅವರ ಮನೆಗೆ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್, ಕಾರ್ಯಕರ್ತರು, ಬೆಂಬಲಿಗರ ಜೊತೆಗೆ ಚರ್ಚೆ ನಡೆಸಿದರು. ಕೊಪ್ಪಗೆ ತೆರಳುವ ಮಾರ್ಗ ಮಧ್ಯೆ ಅಶೋಕ್ ಗೌಡ ಅವರ ಮನೆಗೆ ಭೇಟಿ ನೀಡಿದ್ದರು. ತಿಮ್ಮಪ್ಪ ಬೆಳ್ಳೂರು, ಕಗ್ಗಲಿ ಲಿಂಗಪ್ಪ, ದೇವದಾಸ್ ಆಚಾರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ರಾಜಕೀಯ ದ್ವೇಷವೆ ಕಾರಣ’, ಶಿವಮೊಗ್ಗದಲ್ಲಿ ನಾಳೆ ತಮಟೆ ಹೋರಾಟ
ತೀರ್ಥಹಳ್ಳಿ ಲಾಡ್ಜ್‌ನಲ್ಲಿ ವ್ಯಕ್ತಿ ನೇಣಿಗೆ ಶರಣು
THIRTHAHALLI : ಲಾಡ್ಜ್‌ನ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ತೀರ್ಥಹಳ್ಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ಘಟನೆ ಸಂಭವಿಸಿದೆ. ಮೃತನನ್ನು ಕಡೂರು ಮೂಲದ ರಾಘವೇಂದ್ರ (49) ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ – ಎನ್‌ಸಿಸಿ ಕ್ಯಾಂಪ್‌ನಲ್ಲಿ 9 ಕೆಡೆಟ್‌ಗಳು ದಿಢೀರ್ ಅಸ್ವಸ್ಥ, ಮೆಗ್ಗಾನ್ ಆಸ್ಪತ್ರೆಗೆ ದಾಖಲು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200