ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟೆಂಬರ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಭಾವೈಕ್ಯತೆಗೆ ಹೆಸರಾಗಿರುವ ಹಣಗೆರೆ ಕಟ್ಟೆ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರ ಪ್ರತಿ ವಾಹನವನ್ನು ಸ್ಥಳೀಯರೆ ತಪಾಸಣೆ ಆರಂಭಿಸಿದ್ದಾರೆ. ಕೋಳಿ, ಕುರಿ ಇದ್ದರೆ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಭಕ್ತರನ್ನು ಮಾತ್ರ ದೇಗುಲದೊಳಗೆ ಬಿಡಲಾಗುತ್ತಿದೆ. ಇದರಿಂದ ಸ್ಥಳೀಯರು ಮತ್ತು ಭಕ್ತರ ನಡುವರ ಮಾತಿನ ಚಕಮಕಿ ಶುರುವಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹಣಗೆರೆ ಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ವಾಹನವನ್ನು ತಡೆದು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಮೊದಲ ದಿನ ತಪಾಸಣೆ ವೇಳೆ ಕೆಲವು ಭಕ್ತರ ಜೊತೆಗೆ ಮಾತಿನ ಚಕಮಕಿಯು ನಡೆದಿದೆ.
ಪ್ರಾಣಿ ಬಲಿಗೆ ಭಾರಿ ವಿರೋಧ
ತೀರ್ಥಹಳ್ಳಿ ತಾಲೂಕು ಹಣಗೆರೆ ಗ್ರಾಮದ ಶ್ರೀ ಚೌಡೇಶ್ವರಿ, ಭೂತರಾಯ ಮತ್ತು ಸೈಯದ್ ಸಾದತ್ ದರ್ಗಾ ಹೆಸರುವಾಸಿ ಧಾರ್ಮಿಕ ಕ್ಷೇತ್ರ. ಹಿಂದೂ – ಮುಸ್ಲಿಂ ಭಾವೈಕ್ಯತೆಯ ಕ್ಷೇತ್ರ. ಇಷ್ಟಾರ್ಥ ಈಡೇರಬೇಕಿದ್ದರೆ ಪ್ರಾಣಿ ಇಲ್ಲಿ ಬಲಿ ಕೊಡಬೇಕು ಎಂಬ ನಂಬಿಕೆ ಇಲ್ಲಿದೆ. ಆದರೆ ಕಳೆದ ವರ್ಷ ತೀರ್ಥಹಳ್ಳಿ ತಹಶೀಲ್ದಾರ್ ಅವರು ಪ್ರಾಣಿ ಬಲಿ ನಿಷೇಧಿಸಿದ್ದರು. ಆದರೂ ಪ್ರಾಣಿ ಬಲಿ ಮುಂದುವರೆದಿತ್ತು. ಹಾಗಾಗಿ ತಹಶೀಲ್ದಾರ್ ಆದೇಶ ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ತೀರ್ಮಾನಿಸಿದ ಗ್ರಾಮಸ್ಥರು, ಭಕ್ತರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಪ್ರಾಣಿ ಬಲಿ ಕೊಡದಂತೆ ನೋಡಿಕೊಳ್ಳುತ್ತಿದ್ದಾರೆ.
ನೂರಾರು ಕೋಳಿ, ಕುರಿ ಬಲಿ
ಹಣಗೆರೆಗೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ಇಲ್ಲಿಗೆ ಭಕ್ತರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಬಹುತೇಕರು ಪ್ರಾಣಿ ಬಲಿ ನೀಡುತ್ತಾರೆ. ಸಾಮಾನ್ಯ ದಿನಗಳಲ್ಲಿ ಇಲ್ಲಿ 300 ರಿಂದ 500 ಕೋಳಿ ಬಲಿ, ಐದರಿಂದ ಆರು ಕುರಿಗಳನ್ನು ಬಲಿ ಕೊಡಲಾಗುತ್ತದೆ. ಭಾನುವಾರ ಸುಮಾರು ಒಂದೂವರೆ ಸಾವಿರದಷ್ಟು ಕೋಳಿ, 15 ರಿಂದ 20 ಕುರಿಗಳನ್ನು ಬಲಿ ಕೊಡಲಾಗುತ್ತಿದೆ.
ನಿಷೇಧವೇಕೆ? ಗ್ರಾಮಸ್ಥರೇಕೆ ತಪಾಸಣೆ ಮಾಡ್ತಿದ್ದಾರೆ?
ಪ್ರಾಣಿ ಬಲಿ ಕೊಟ್ಟವರು ಪಕ್ಕದ ಅರಣ್ಯದಲ್ಲಿ ಅಡುಗೆ ಮಾಡಿ, ಊಟ ಮಾಡಿ ತೆರಳುತ್ತಾರೆ. ಆದರೆ ಕಸ, ಬಟ್ಟೆಗಳನ್ನು ಕಾಡಿಗೆ ಎಸೆದು ಹೋಗುತ್ತಾರೆ. ಇದರಿಂದ ಹಣಗೆರೆ ಸುತ್ತಮುತ್ತಲ ವಾತಾವರಣ ಮಲಿನಗೊಂಡಿದೆ. ದುರ್ವಾಸನೆ ಬರಲು ಆರಂಭವಾಗಿದೆ. ಹಣಗೆರೆ, ಕೆರೆಹಳ್ಳಿ ಸುತ್ತಮುತ್ತಲ ಗ್ರಾಮಸ್ಥರಲ್ಲಿ ರೋಗದ ಭೀತಿ ಎದುರಾಗಿದೆ. ಅಲ್ಲದೆ ವನ್ಯಜೀವಿಗಳಿಗೂ ಇದು ಕಂಟವಾಗಿದೆ. ಹೀಗಾಗಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಗ್ರಾಮಸ್ಥರೆ ಫೀಲ್ಡಿಗಿಳಿದಿದ್ದಾರೆ.
ಹೇಗೆ ತಪಾಸಣೆ ಮಾಡುತ್ತಿದ್ದಾರೆ ಗ್ರಾಮಸ್ಥರು?
ಹಣಗೆರೆಗೆ ರಸ್ತೆಯಲ್ಲಿ ಗ್ರಾಮಸ್ಥರು ತಪಾಸಣೆ ಆರಂಭಿಸಿದ್ದಾರೆ. ಪ್ರತಿ ವಾಹನವನ್ನು ತಡೆದು ಪರಿಶೀಲಿಸುತ್ತಿದ್ದಾರೆ. ವಾಹನದಲ್ಲಿ ಅಡುಗೆ ವಸ್ತುಗಳು, ಕೋಳಿ, ಕುರಿ ಇದ್ದರೆ ಅವುಗಳನ್ನು ವಶಕ್ಕೆ ಪಡೆದು, ಭಕ್ತರನ್ನು ಮಾತ್ರ ದೇವಸ್ಥಾನಕ್ಕೆ ಬಿಡುತ್ತಿದ್ದಾರೆ. ದೇಗುಲಕ್ಕೆ ತೆರಳಿ ಹಿಂತಿರುಗಿದ ಬಳಿಕ ಕೋಳಿ, ಕುರಿ, ಅಡುಗೆ ವಸ್ತುಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಅಡುಗೆ ಮಾಡುವುಕ್ಕೆ ಬಿಡದೆ ಹಿಂದಕ್ಕೆ ಕಳುಹಿಸಲಾಗುತ್ತಿದೆ.
ಗ್ರಾಮಸ್ಥರ ತಪಾಸಣೆ ವೇಳೆ ಕೆಲವರು ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಸ್ಥಳೀಯರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ಮಾತ್ರ ಅವಕಾಶ ನೀಡಿದರು. ಗ್ರಾಮಸ್ಥರು ತಪಾಸಣೆ ಆರಂಭಿಸುತ್ತಿದ್ದಂತೆ ಮಾಳೂರು ಠಾಣೆ ಪೊಲೀಸರು ಕೂಡ ಸ್ಥಳಕ್ಕೆ ನೀಡಿ ಪರಿಶೀಲಿಸಿದರು. ಜಗಳಕ್ಕಿಳಿಯುತ್ತಿದ್ದ ಪ್ರವಾಸಿಗರು, ಭಕ್ತರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.
ಪ್ರಾಣಿ ಬಲಿ ನಿಷೇಧ, ಅರಣ್ಯ ವ್ಯಾಪ್ತಿಯಲ್ಲಿ ಅಡುಗೆ ಮಾಡುವುದಕ್ಕೆ ಸಂಪೂರ್ಣ ಬ್ರೇಕ್ ಬಿದ್ದರೆ ಹಣಗೆರೆ ಸುತ್ತಮುತ್ತಲ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200