ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021
ಗ್ರಾಮ ಪಂಚಾಯಿತಿ ಕಚೇರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಅಚ್ಚರಿಯ ವಿಚಾರ ಬಯಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚೋರಡಿ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ ಗೌಡ ಅವರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ. ಅದೆ ರಾತ್ರಿ ಚೋರಡಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೂ ವಾಮಾಚಾರ ಮಾಡಲಾಗಿತ್ತು. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.
ಸಿಸಿಟಿವಿಯಲ್ಲಿ ಸೆರೆಯಾಗಿತ್ತು ನಡುರಾತ್ರಿ ವಾಮಾಚಾರ
ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ ಗೌಡ ಅವರು ಬೆಳಗ್ಗೆ ಮನೆ ಬಾಗಿಲು ತೆಗೆದಾಗ ವಾಮಾಚಾರ ನಡೆದಿರುವು ಬೆಳಕಿಗೆ ಬಂದಿದೆ. ಮನೆ ಬಾಗಿಲಲ್ಲಿ ನಿಂಬೆಹಣ್ಣು, ಸಾಸಿವೆ, ಕರಿ ಎಳ್ಳು, ಕುಂಕುಮ ಹಾಕಲಾಗಿತ್ತು. ಎದುರಿಗಿದ್ದ ಪೆಟ್ರೋಲ್ ಬಂಕ್’ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮಾರುತಿ 800 ಕಾರಿನಲ್ಲಿ ಬಂದ ಇಬ್ಬರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.
ಗ್ರಾಮ ಪಂಚಾಯಿತಿ ಎದುರು ವಾಮಾಚಾರ
ಇತ್ತ ಚೋರಡಿ ಗ್ರಾಮ ಪಂಚಾಯಿತಿ ಕಚೇರಿ ಎದುರಲ್ಲೂ ಅದೆ ದಿನ ವಾಮಾಚಾರ ನಡೆದಿತ್ತು. ಎದುರಲ್ಲಿ ಇದ್ದ ಅರಣ್ಯ ಇಲಾಖೆ ಕಚೇರಿಯ ಸಿಸಿಟಿವಿ ಪರಿಶೀಲಿಸಿದಾಗ, ಕಾರಿನಲ್ಲಿ ಬಂದವರೆ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಗ್ರಾಮ ಠಾಣಾ ಒತ್ತುವರಿ ಕೇಸ್
ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಠಾಣಾ ಜಾಗ ಒತ್ತುವರಿಯಾಗಿತ್ತು. ಇದನ್ನು ತೆರವು ಮಾಡುವಂತೆ ಇಬ್ಬರಿಗೆ ನೊಟೀಸ್ ನೀಡಲಾಗಿತ್ತು. ಇದೆ ಕಾರಣಕ್ಕೆ ಅವರು ಜೀವ ಬೆದರಿಕೆ ಹಾಕಿದ್ದಲ್ಲದೆ ವಾಮಾಚಾರ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ ಗೌಡ ಆರೋಪಿಸಿ ದೂರು ನೀಡಿದ್ದಾರೆ. ಸಿಸಿಟಿವಿಯನ್ನು ಪರಿಶೀಲಿಸಿದ ಬಳಿಕ ವಾಮಾಚಾರ ಮಾಡಿದವರು ಮಹೇಶ್ವರಪ್ಪ ಮತ್ತು ಮಲ್ಲೇಶಪ್ಪ ಎಂಬುದು ಖಚಿತವಾಗಿತ್ತು.
ದೂರು ಬಂದ ಹಿನ್ನೆಲೆ ವಾಮಾಚಾರ ಮಾಡಿದ್ದ ಮಹೇಶ್ವರಪ್ಪ ಮತ್ತು ಮಲ್ಲೇಶಪ್ಪ ಅವರನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422