ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 JANUARY 2024
SHIMOGA : ಜಿಲ್ಲೆಯ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲಿದಿದೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ (ಲ್ಯಾಂಡ್ ಆರ್ಮಿ) ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಹಿಂದೆ ತಿರಸ್ಕರಿಸಿದ್ದ ಅಧ್ಯಕ್ಷ ಸ್ಥಾನ
ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಈ ಬಾರಿಯು ಸಚಿವ ಸ್ಥಾನ ಕೈ ತಪ್ಪಿದೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸದ್ಯ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ಹಿಂದೆಯೂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇದೇ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆಗ ಸಂಗಮೇಶ್ವರ ಅವರು ಅದನ್ನು ತಿರಸ್ಕರಿಸಿದ್ದರು.
ಈ ನಿಗಮದ ಕೆಲಸವೇನು?
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮವು (ಕೆಆರ್‌ಐಡಿಎಲ್) ಲ್ಯಾಂಡ್ ಆರ್ಮಿ ಎಂದೇ ಜನಜನಿತ. ಗ್ರಾಮೀಣ ಭಾಗದಲ್ಲಿ ಮಧ್ಯವರ್ತಿಗಳು, ಗುತ್ತಿಗೆದಾರರನ್ನು ದೂರವಿಟ್ಟು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಈ ನಿಗಮದ ಪ್ರಮುಖ ಉದ್ದೇಶ. 800ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ. ಎಲ್ಲ ಜಿಲ್ಲೆಗಳಲ್ಲೂ ಕಚೇರಿ ಮತ್ತು ಸಬ್ ಡಿವಿಷನ್ ಕಚೇರಿಗಳನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಕಚೇರಿಗಳಿವೆ. ಗ್ರಾಮೀಣ ಸಂಪರ್ಕ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆಗಳು, ಹಾಸ್ಟೆಲ್, ಜಲ ಸಂವರ್ಧನಾ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಿದೆ.
ಬೇಳೂರಿಗೆ ಮೊದಲ ಬಾರಿ ಸರ್ಕಾರಿ ಹುದ್ದೆ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮೂರನೇ ಬಾರಿ ಶಾಸಕರಾಗಿರುವ ಹಿನ್ನೆಲೆ ಸಹಜವಾಗಿಯೇ ಸಚಿವ ಸ್ಥಾನದ ನಿರೀಕ್ಷೆ ಇತ್ತು. ಈಚೆಗೆ ಸಂಸತ್ ಚುನಾವಣೆಗೆ ಸ್ಪರ್ಧಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಪಕ್ಷ ನಿಗಮ ಅಧ್ಯಕ್ಷ ಸ್ಥಾನ ನೀಡಿದೆ. ಇದೇ ಮೊದಲ ಬಾರಿ ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರಿ ಹುದ್ದೆ ಒಲಿದಿದೆ.
ನಿಗಮದ ಕೆಲಸವೇನು?
ಅರಣ್ಯ ಉತ್ಪನ್ನಗಳನ್ನು ತಯಾರಿಸುವುದು ಈ ನಿಗಮದ ಪ್ರಮುಖ ಉದ್ದೇಶ. ಫ್ಲಷ್ ಬಾಗಿಲು, ಹಲಗೆ ಫಲಕಗಳು, ಕಿಟಕಿಗಳು, ಬಾಗಿಲುಗಳು, ದೇಶೀಯ ಮತ್ತು ಅಧಿಕಾರಿ ಪೀಠೋಪಕರಣಗಳನ್ನು ತಯಾರಿಸುತ್ತಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ, ಟಿಂಬರ್‌ಯಾರ್ಡ್, ದಾಂಡೇಲಿ, ಧಾರವಾಡ, ಶಿರಸಿ, ಶಿವಮೊಗ್ಗ, ಮಂಗಳೂರಿನಲ್ಲಿ ಕಚೇರಿಯನ್ನು ಹೊಂದಿದೆ.
ಇದನ್ನೂ ಓದಿ – ನಿಗಮ ಮಂಡಳಿಗೆ ನೇಮಕ ವಿಚಾರ, ಮೊದಲ ಬಾರಿ ಬಹಿರಂಗ ಹೇಳಿಕೆ ನೀಡಿದ ಮಂಜುನಾಥಗೌಡ, ಏನಂದರು?
ಮೂವರು ಕಾಂಗ್ರೆಸ್ ಶಾಸಕರಿಗು ಅಧಿಕಾರ
2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಪೈಕಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈಗ ಸಂಗಮೇಶ್ವರ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ನಿಗಮಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರಿಗು ಸರ್ಕಾರಿ ಸ್ಥಾನಮಾನ ನೀಡಿದಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422