SHIVAMOGGA LIVE | 24 JULY 2023
SHIMOGA : ಜಿಲ್ಲೆಯಾದ್ಯಂತ ಭಾನುವಾರ ಭಾರಿ ಮಳೆಯಾಗಿದೆ. ಹಳ್ಳ, ಕೊಳ್ಳಗಳು ಭರ್ತಿಯಾಗಿದ್ದು, ಜಲಾಶಯಗಳಿಗೆ ಹೇರಳವಾಗಿ ನೀರು ಹರಿದು ಬಂದಿದೆ. ಇದರ ಜೊತೆಗೆ ಅಲ್ಲಲ್ಲಿ ಮಳೆಯಿಂದಾಗಿ ಹಾನಿಯು ಸಂಭವಿಸಿದೆ. ಜಿಲ್ಲೆಯಾದ್ಯಂತ ಹೇಗಿತ್ತು ಮಳೆ? ಇಲ್ಲಿದೆ ಕಂಪ್ಲೀಟ್ ವಿವರ
ಹೇಗಿತ್ತು ಮಳೆ? ಏನೆಲ್ಲ ಹಾನಿಯಾಯ್ತು?
ಜೈಲಿನ ಕಾಂಪೌಂಡ್ ಗೋಡೆ ಕುಸಿತ
ಸಾಗರ : ನಿರಂತರ ಮಳೆಯಿಂದಾಗಿ ಎಸ್‌ಆರ್‌ಎಸ್ ಮಿಲ್ ರಸ್ತೆಯಲ್ಲಿರುವ ಜೈಲಿನ ಗೋಡೆ ಕುಸಿದಿದೆ. ಭಾನುವಾರ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಗೋಡೆ ಕುಸಿತ ಕಂಡಿದ್ದು, ಜೈಲು ಅಧೀಕ್ಷಕಿ ಡಾ. ಅನಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜೈಲು ಗೋಡೆ ಕುಸಿತದಿಂದ ಕೈದಿಗಳ ನಿರ್ವಹಣೆಗೆ ಯಾವುದೆ ತೊಂದರೆಯಾಗಿಲ್ಲ. ಸದ್ಯ ಜೈಲಿನಲ್ಲಿ 25 ಕೈದಿಗಳಿದ್ದಾರೆ. ಅವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. 15 ಅಡಿ ಎತ್ತರದ ಗೋಡೆ ಇದಾಗಿದೆ.
ತುಂಬಿ ಹರಿಯುತ್ತಿರುವ ವರದಾ, ದಂಡಾವತಿ
ಸೊರಬ : ನಿರಂತರ ಮತ್ತು ಜೋರು ಮಳೆಯಿಂದಾಗಿ ಸೊರಬ ತಾಲೂಕಿನ ವರದಾ ಮತ್ತು ದಂಡಾವತಿ ನದಿಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರ ಜಮೀನುಗಳಿಗೆ ಜಲಾವೃತವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಬಸವನಹೊಳೆ ಡ್ಯಾಂ ಭರ್ತಿ
ಸಾಗರ : ನಗರದಲ್ಲಿರುವ ಬಸವನಹೊಳೆ ಡ್ಯಾಂ ಭರ್ತಿಯಾಗಿದೆ. ಈ ಹಿನ್ನೆಲೆ ಗೇಟ್‌ಗಳನ್ನು ತೆಗೆದು ನೀರು ಹೊರಗೆ ಬಿಡಲಾಗಿದೆ. ಈ ಹಿಂದೆ ಬಸವನಹೊಳೆ ಡ್ಯಾಂ ಮೂಲಕ ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.
ಮದರಸಾ ಗೋಡೆ, ಛಾವಣಿ ಕುಸಿತ
ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮದಲ್ಲಿರುವ ಮದರಸಾದ ಗೋಡೆ ಮತ್ತು ಛಾವಣಿ ಕುಸಿದಿದೆ. ಅದೃಷ್ಟವಶಾತ್ ಯಾರಿಗೂ ಸಮಸ್ಯೆಯಾಗಿಲ್ಲ. ಭಾನುವಾರವಾದ್ದರಿಂದ ಮದರಸಾಗೆ ರಜೆ ಇತ್ತು. ಹಾಗಾಗಿ ಮಕ್ಕಳು ಬಂದಿರಲಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನೆರೆ ಪರಿಸ್ಥಿತಿ, ಜಮೀನುಗಳಲ್ಲಿ ನಿಂತ ನೀರು
ಸಾಗರ : ನಿರಂತರ ಜೋರು ಮಳೆಯಿಂದಾಗಿ ಬೀಸನಗದ್ದೆ, ಸೈದೂರು ಭಾಗದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಸನಗದ್ದೆ, ಸೈದೂರು, ಮಂಡಗಳಲೆ, ಕಣಸೆ, ತಟ್ಟೆಗುಂಡಿ ಸುತ್ತಮುತ್ತ ಭಾರಿ ಮಳೆಯಾಗಿದೆ. ಜಮೀನಿನಲ್ಲಿ ನೀರು ನಿಂತಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸೈದೂರು ಸೇತುವೆ ಮೇಲೆ ನೀರು ಹರಿಯುವ ಸಾದ್ಯತೆ ಇದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕವಿದೆ.
ಶಾಲೆಗಳಿಗೆ ರಜೆ ಘೋಷಣೆ
ಶಿವಮೊಗ್ಗ : ಭಾರಿ ಮಳೆ ಹಿನ್ನಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ರಜೆ ಘೋಷಿಸಿದ್ದಾರೆ. ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಜು.24ರಂದು ಶಿವಮೊಗ್ಗ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಸರಿದೂಗಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಅನುಗುಣವಾಗಿ ರಜೆ ನೀಡಲು ಆಯಾ ಕಾಲೇಜು ಪ್ರಾಂಶುಪಾಲರಿಗೆ ಅವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. ಈಗಾಗಲೆ ಭದ್ರಾವತಿ, ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರದ ಕೆಲ ಕಾಲೇಜುಗಳಲ್ಲಿ ಪ್ರಾಂಶುಪಾಲರು ರಜೆ ಘೋಷಿಸಿದ್ದಾರೆ.
ವೀಕೆಂಡ್‌ನಲ್ಲಿ ಪ್ರವಾಸಿಗರ ದಂಡು
ಸಾಗರ : ವೀಕೆಂಡ್ ಹೊತ್ತಲ್ಲೆ ಜೋರು ಮಳೆಯಾಗಿದೆ. ರಾಜ್ಯ, ಹೊರ ರಾಜ್ಯದ ವಿವಿಧೆಡೆಯ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಜೋಗ ಜಲಪಾತ ಕಣ್ತುಂಬಿಕೊಳ್ಳಲು ಭಾನುವಾರ ಬೆಳಗ್ಗೆಯಿಂದಲೆ ಪ್ರವಾಸಿಗರು ಆಗಮಿಸಿದ್ದರು. ಮಳೆ ಮತ್ತು ನೂಕುನುಗ್ಗಲಿನಲ್ಲಿ ಜಲಪಾತ ವೀಕ್ಷಿಸಿದರು. ಸಿಗಂದೂರು, ವರದಪುರ ಸೇರಿದಂತೆ ಸಾಗರ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ರಶ್ ಕಂಡು ಬಂತು.
ತತ್ತೂರು, ಕುಪ್ಪಗಡ್ಡೆಯಲ್ಲಿ ಮನೆಗಳಿಗೆ ಹಾನಿ
ಸೊರಬ : ಭಾರಿ ಮಳೆಯಿಂದಾಗಿ ಸೊರಬ ತಾಲೂಕು ತತ್ತೂರು ಮತ್ತು ಕುಪ್ಪಗಡ್ಡೆ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಕುಪ್ಪಗಡ್ಡೆ ಗ್ರಾಮದ ಈಶ್ವರಪ್ಪ ಮತ್ತು ತತ್ತೂರು ವಡ್ಡಗೇರಿಯ ವಿರೂಪಾಕ್ಷಪ್ಪ ಅವರ ಮನೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲಿಸಿದರು.
ರಸ್ತೆ ಗುಂಡಿಗಳಲ್ಲಿ ಮಳೆ ನೀರು
ಹೊಳೆಹೊನ್ನೂರು : ಭಾರಿ ಮಳೆಯಿಂದಾಗಿ ಹೊಳೆಹೊನ್ನೂರು ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ನೃಪತುಂಗ ವೃತ್ತ, ಮಹಾತ್ಮ ಗಾಂಧಿ ವೃತ್ತ, ಭಗೀರಥ ವೃತ್ತದಲ್ಲಿ ದೊಡ್ಡ ಗುಂಡಿಗಳಾಗಿವೆ. ಪಟ್ಟಣದ ಪ್ರಮುಖ ಕಡೆಗಳಲ್ಲಿಯು ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಾಯ್ತೆರೆದಿವೆ. ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತಿದ್ದು, ಚಾಲಕರು ವಾಹನ ಚಲಾಯಿಸಲು ಕಷ್ಟಪಡುವಂತಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಪಿಯು ಕಾಲೇಜುಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ರಜೆ, ಪ್ರಾಂಶುಪಾಲರ ನಿರ್ಧಾರವೆ ಫೈನಲ್
ಬಂದಗದ್ದೆ ಕೆರೆ ದಂಡೆ ಕುಸಿತ
ಸಾಗರ : ಕೆಳದಿ ಸಮೀಪದ ಬಂದಗದ್ದೆ ಕೆರೆ ದಂಡೆ ಕುಸಿದಿದೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಾತ್ಕಾಲಿಕ ದುರಸ್ಥಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷವಷ್ಟೆ ದಂಡೆ ದುರಸ್ತಿ ನಡೆದಿತ್ತು. ಆದರೆ ಈ ಬಾರಿ ಮಳೆಗೆ ದಂಡೆಯಲ್ಲಿ ಕುಸಿತ ಕಂಡಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200