SHIMOGA NEWS, 9 SEPTEMBER 2024 : ಸೇತುವೆ (Bridge) ಹತ್ತುವಾಗಲು ಗುಂಡಿ. ಸೇತುವೆ ಮೇಲೂ ಗುಂಡಿ. ಸೇತುವೆ ಇಳಿದಾಗಲು ಗುಂಡಿ. ಇದು ಶಿವಮೊಗ್ಗದ ಸವಳಂಗ ರಸ್ತೆಯ ರೈಲ್ವೆ ಮೇಲೆ ಸೇತುವೆಯ ಅವಸ್ಥೆ.
ಹೆದ್ದಾರಿಯಲ್ಲಿ ಪದೇ ಪದೆ ರೈಲ್ವೆ ಗೇಟ್ ಬಂದ್ ಆಗುವುದು, ವಾಹನಗಳು ಬಹು ಹೊತ್ತು ಕಾದು ನಿಲ್ಲುವುದನ್ನು ತಪ್ಪಿಸಲು ಈ ಮೇಲ್ಸೇತುವೆ ನಿರ್ಮಿಸಲಾಯಿತು. ಆರಂಭದಲ್ಲಿ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ಖುಷಿ ಕೆಲವೇ ತಿಂಗಳಗಳಲ್ಲಿ ಮರೆಯಾಗಿದೆ. ಸವಳಂಗ ರಸ್ತೆಯ ಮೇಲ್ಸೇತುವೆ ಅಂದರೆ ವಾಹನ ಸವಾರರು ದಿಗಿಲುಗೊಳ್ಳುತ್ತಿದ್ದಾರೆ.
ಸೇತುವೆ ಅಂದರೆ ಸವಾರರಿಗೇಕೆ ಭಯ?
ಈ ವರ್ಷದ ಜನವರಿ ತಿಂಗಳಿಂದ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಮೇಲೆ ವಾಹನ ಸಂಚಾರ ಶುರುವಾಯ್ತು. ಆದರೆ ಈಗ ಸೇತುವೆಯ ಯಾವ ಭಾಗದಲ್ಲಿ ಗುಂಡಿಗಳಿಲ್ಲ ಎಂದು ಹುಡುಕುವಂತಾಗಿದೆ.
» ಮೇಲೇರುವಾಗ ಗುಂಡಿ : ಉಷ ನರ್ಸಿಂಗ್ ಹೋಮ್ ಎದುರು ಬೃಹತ್ ಗುಂಡಿಗಳಾಗಿವೆ. ವಾಹನಗಳು ಗುಂಡಿಗಿಳಿದು ಅತ್ತಿತ್ತ ವಾಲಾಡುತ್ತಲೇ ಸೇತುವೆ ಮೇಲೇರೆಬೇಕು. ಈ ಭಾಗದಲ್ಲಿ ಸೇತುವೆ ಕೆಳಗಿಳಿಯುವ ವಾಹನಗಳು ಇದೇ ಪರಿಸ್ಥಿತಿ ಅನುಭವಿಸಬೇಕು. ಇನ್ನು, ಗುಂಡಿಗಳಿಂದ ಧೂಳು ಹೆಚ್ಚಾಗಿದೆ. ಅಕ್ಕಪಕ್ಕ ಅಂಗಡಿಗಳು, ಆಟೋ ಚಾಲಕರು ನಿತ್ಯ ಧೂಳು ಕುಡಿದು ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ.
» ಸೇತುವೆ ಮೇಲೂ ಗುಂಡಿ : ಸೇತುವೆ ಮೇಲು ಗುಂಡಿಗಳಾಗಿವೆ. ಅಲ್ಲಲ್ಲಿ ಸಣ್ಣ ಗಾತ್ರದ ಗುಂಡಿಗಳು ಪ್ರತ್ಯಕ್ಷವಾಗಿವೆ. ನಿರ್ವಹಣೆ ಮಾಡದಿದ್ದರೆ ಇವು ಮತ್ತಷ್ಟು ಹಿಗ್ಗಲಿವೆ. ಇನ್ನು, ಸೇತುವೆಯ ಜಾಯಿಂಟ್‌ಗಳು ವಾಹನಗಳು, ಅದರಲ್ಲಿರುವ ಪ್ರಯಾಣಿಕರ ಎದೆ ನಡುಗಿಸುತ್ತವೆ. ಶಿವಮೊಗ್ಗದ ಯಾವ ಸೇತುವೆ ಮೇಲೂ ಇಂತಹ ಜಾಯಿಂಟ್ ವ್ಯವಸ್ಥೆ ಇಲ್ಲ.
» ಕೆಳಗಿಳಿದಾಗಲು ಗುಂಡಿ : ಸೇತುವೆಯಿಂದ ಕೆಳಗಿಳಿದ ಮೇಲೆ ಪುನಃ ಗುಂಡಿಗಳನ್ನು ದಾಟಿಯೇ ವಾಹನಗಳು ಮುಂದೆ ಹೋಗಬೇಕು. ಸೇತುವೆಯಿಂದ ಅಶ್ವಥನಗರದ ತಿರುವಿನವರೆಗೆ ರಸ್ತೆಯ ಎರಡು ಬದಿಯಲ್ಲಿ ಬೃಹತ್ ಗುಂಡಿಗಳಿವೆ.
ಇದನ್ನೂ ಓದಿ » ರೈಲಲ್ಲಿ ಶಿವಮೊಗ್ಗಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿದೆ ಮೃತ್ಯು ಕೂಪ, ರಕ್ತ ಹೀರಲು ಕಾಯುತ್ತಿದೆ ಚರಂಡಿ ಮುಚ್ಚಳ
ಸರ್ವಿಸ್ ರಸ್ತೆ ಧೂಳುಮಯ
ಸೇತುವೆ ಕೆಳಗೆ ಸರ್ವಿಸ್ ರಸ್ತೆಗಳು ಧೂಳುಮಯವಾಗಿವೆ. ಸೇತುವೆ ಕಾಮಗಾರಿ ಆರಂಭವಾದಾಗಿನಿಂದ ಧೂಳು ಕುಡಿದು ಸಮಸ್ಯೆಗೆ ಸಿಲುಕಿರುವ ನೆರೆಹೊರೆಯ ಅಂಗಡಿ, ಮನೆಗಳ ನಿವಾಸಿಗಳು, ಕಾಮಗಾರಿ ಮುಗಿದು 9 ತಿಂಗಳಾದರು ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಇನ್ನು ‘ಸ್ವಚ್ಛತೆಗೆ ಆದ್ಯತೆ ಕೊಡದಿದ್ದರೆ ಡೆಂಗ್ಯು ರೀತಿಯ ಕಾಯಿಲೆಗೆ ತುತ್ತಾಗುತ್ತೇವೆʼ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಾಪಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ » ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200