ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗ: ರಣ ಬಿಸಿಲಿನಿಂದ ಹೈರಾಣಾಗಿದ್ದ ಮಲೆನಾಡಿಗೆ ಭಾನುವಾರದ ಮಳೆ ತುಸು ತಂಪೆರೆದಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೋರು ಗಾಳಿ ಸಹಿತ ಅಲಿಕಲ್ಲು ಮಳೆಯಾಗಿದೆ (hailstorms). ಮುಂಗಾರು ಪೂರ್ವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಶಿವಮೊಗ್ಗ ಸಿಟಿ ಕೂಲ್‌ ಕೂಲ್‌

ಶಿವಮೊಗ್ಗ ನಗರದಲ್ಲಿ ಭಾನುವಾರ ಮಳೆಯಾಗಿದೆ. ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಸಂಜೆ ವೇಳೆಗೆ ದಟ್ಟ ಮೋಡ ಆವರಿಸಿತ್ತು. ಜೋರು ಗಾಳಿ ಸಹಿತ ಆಲಿಕಲ್ಲು ಮಳೆಯಾಯಿತು. ಇದರಿಂದ ಶಿವಮೊಗ್ಗ ಸಿಟಿಯಲ್ಲಿ ತಾಪಮಾನ ತುಸು ತಗ್ಗಿದೆ. ನಗರದಲ್ಲಿ ಇವತ್ತು ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

Tree-branch-falls-on-kuvempu-road-due-to-rainhailstorms

ಅಲ್ಲಲ್ಲಿ ಹಾನಿ, ತಪ್ಪಿದ ಅನಾಹುತ

ನಗರದ ಕುವೆಂಪು ರಸ್ತೆಯ ಲೋಕಪ್ರಿಯ ಡ್ರೈ ಫ್ರೂಟ್‌ ಶಾಪ್‌ ಮುಂಭಾಗದ ಮರದ ರೆಂಬೆ ತುಂಡಾಗಿ ಬಿದ್ದಿತ್ತು. ಅದೃಷ್ಟವಶಾತ್‌ ಯಾವುದೇ ಹಾನಿಯಾಗಿಲ್ಲ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಗೋಪಿಶೆಟ್ಟಿಕೊಪ್ಪದಲ್ಲಿ ಸಿಡಿಲಿಗೆ ತೆಂಗಿನ ಮರಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಜಿಲ್ಲೆಯ ಹಲವೆಡೆ ಮಳೆ, ಅಲ್ಲಲ್ಲಿ ಹಾನಿ

ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾನುವಾರ ಮಳೆಯಾಗಿದೆ. ತೀರ್ಥಹಳ್ಳಿ, ಶಿಕಾರಿಪುರ, ರಿಪ್ಪನ್‌ಪೇಟೆ, ಭದ್ರಾವತಿಯ ವಿವಿಧೆಡೆಯು ಜೋರು ಮಳೆಯಾದ ವರದಿಯಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹಲವೆಡೆ ಉಷ್ಣಾಂಶ ತಗ್ಗಿದೆ. ಗಾಳಿ ಮಳೆಗೆ ಹೊಸನಗರದ ಬೆಳ್ಳೂರು ಗ್ರಾಮದ ರತ್ನಮ್ಮ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ರೈತರ ನಿಟ್ಟುಸಿರು, ಮಾವು ಬೆಳೆಗಾರರಿಗೆ ಚಿಂತೆ

ಮುಂಗಾರು ಪೂರ್ವ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬೇಸಿಗೆ ಮತ್ತು ತೋಟದ ಬೆಳೆಗಳ ರಕ್ಷಣೆ ಹಾಗೂ ಮುಂಗಾರು ಹಂಗಾಮಿನ ಬಿತ್ತನೆಗೆ ಭೂಮಿ ಸಿದ್ಧ ಮಾಡಿಕೊಳ್ಳಲು ಮಳೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಭಾರಿ ಗಾಳಿ, ಆಲಿಕಲ್ಲು ಮಳೆ ಮಾವು ಬೆಳೆಗಾರರಲ್ಲಿ ಆತಂಕ ತಂದಿದ್ದು, ಇಳುವರಿ ಕುಸಿತದ ಭಯ ಮೂಡಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲು ಭಾನುವಾರ ಮಳೆಯಾಗಿದೆ. ಮಾರ್ಚ್‌ 16ರಿಂದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ತಾಪಮಾನ ತುಸು ತಗ್ಗುವ ನಿರೀಕ್ಷೆ ಇದೆ.

ಇದನ್ನೂ ಓದಿ – ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 16, 2026 at 10:06 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 16, 2026

Leave a Comment