ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 DECEMBER 2022
ಶಿಕಾರಿಪುರ : ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದಕ್ಕೆ ಮಕ್ಕಳೆ 5 ಲಕ್ಷ ರೂ. ಸುಪಾರಿ (supari) ನೀಡಿ ತಂದೆಯ ಹತ್ಯೆ ಮಾಡಿಸಿದ್ದಾರೆ. ಈಗ ಇಬ್ಬರು ಮಕ್ಕಳು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲೂಕು ಭೋಗಿ ಗ್ರಾಮದ ನಾಗೇಂದ್ರಪ್ಪ ಎಂಬಾತನ ಹತ್ಯೆ ಮಾಡಲಾಗಿದೆ. ಉಡುಗಣಿ ಕುಸ್ಕೂರು ಗ್ರಾಮದ ನಡುವೆ ನಿರ್ಮಾಣ ಹಂತದ ರಸ್ತೆ ಪಕ್ಕದ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಸ್ತಿ ಪಾಲು ಕೇಳಿದ್ದ ಮಕ್ಕಳು (supari)
ನಾಗೇಂದ್ರಪ್ಪ, ಭೋಗಿ ಗ್ರಾಮದಲ್ಲಿ ಐದೂವರೆ ಎಕೆರೆ ಜಮೀನು ಹೊಂದಿದ್ದಾರೆ. 5 ಎಕರೆಯಲ್ಲಿ ಅಡಕೆ ತೋಟ, ಅರ್ಧ ಎಕರೆ ಭತ್ತದ ಗದ್ದೆ ಮಾಡಿದ್ದಾರೆ. ಮಕ್ಕಳಾದ ಮಂಜುನಾಥ ಮತ್ತು ಉಮೇಶ, ಆಸ್ತಿಯಲ್ಲಿ ಪಾಲು ಕೇಳಿದ್ದಾರೆ. ಆಗ ನಾಗೇಂದ್ರಪ್ಪ ನಿರಾಕರಿಸಿದ್ದರು. ಇದೆ ವಿಚಾರವಾಗಿ ಪಂಚಾಯಿತಿ ಸೇರಿಸಿ ಮೂರು ಭಾಗ ಮಾಡಿಕೊಳ್ಳಲು ತೀರ್ಮಾನವಾಗಿತ್ತು. ಆದರೆ ನಾಗೇಂದ್ರಪ್ಪ ಸರ್ವೆಗೆ ತಕರಾರು ತೆಗೆದಿದ್ದರು. ಹಾಗಾಗಿ ಮಗ ಉಮೇಶ ಭದ್ರಾವತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎರಡನೆ ಮದುವೆ, ಮಗು (supari)
2021ರ ನವೆಂಬರ್ ತಿಂಗಳಲ್ಲಿ ನಾಗೇಂದ್ರಪ್ಪ ಎರಡನೆ ಮದುವೆಯಾಗಿದ್ದ. ಆರು ತಿಂಗಳ ಹಿಂದೆ ಎರಡನೆ ಹೆಂಡತಿಗೆ ಗಂಡು ಮಗುವಾಗಿದೆ. ನಾಗೇಂದ್ರಪ್ಪ ಹೊಸದಾಗಿ ಮನೆ ಕಟ್ಟಿಸುತ್ತಿದ್ದು, ಎರಡನೆ ಹೆಂಡತಿ ಹೆಸರಿಗೆ ದಾನ ಪತ್ರ ಮಾಡಿಸಿದ್ದರು. ಉಳಿದ ಆಸ್ತಿಯನ್ನು ಎರಡನೆ ಪತ್ನಿ ಹೆಸರಿಗೆ ಮಾಡಿಬಿಡುತ್ತಾನೆ ಎಂದು ಮಕ್ಕಳಾದ ಮಂಜುನಾಥ ಮತ್ತು ಉಮೇಶ ಯೋಚಿಸಿದರು. ಇದೆ ಕಾರಣಕ್ಕೆ ತಂದೆ ನಾಗೇಂದ್ರಪ್ಪನ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
5 ಲಕ್ಷ ರೂ.ಗೆ ಸುಪಾರಿ (supari)
ನಾಗೇಂದ್ರಪ್ಪನ ಹತ್ಯೆಗೆ ಭೋಗಿ ಗ್ರಾಮದ ರಿಜ್ವಾನ್, ಶಿಕಾರಿಪುರದ ಹಬೀಬುಲ್ಲಾ, ಸುಹೈಲ್ ಎಂಬುವವರಿಗೆ 5 ಲಕ್ಷ ರೂ.ಗೆ ಸುಪಾರಿ ಕೊಡಲಾಗಿತ್ತು. 2022ರ ನ.9ರಂದು ಕುಸ್ಕೂರು ಗ್ರಾಮದ ಬಳಿ ನಾಗೇಂದ್ರಪ್ಪ ಹತ್ಯೆಗೆ ಯತ್ನಿಸಲಾಗಿತ್ತು. ಬೈಕಿನಲ್ಲಿ ತೆರಳುತ್ತಿದ್ದಾಗ ನಾಗೇಂದ್ರಪ್ಪನಿಗೆ ಗೂಡ್ಸ್ ವಾಹದಿಂದ ಡಿಕ್ಕಿ ಹೊಡೆಸಲಾಗಿತ್ತು. ಘಟನೆಯಲ್ಲಿ ನಾಗೇಂದ್ರಪ್ಪನ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ವಿಷ ಬೆರೆಸಿದ ನೀರು ಕೊಟ್ಟು ಉಸಿರುಗಟ್ಟಿಸಿದರು
ನ.29ರಂದು ನಾಗೇಂದ್ರಪ್ಪ ಭದ್ರಾವತಿ ನ್ಯಾಯಾಲಯಕ್ಕೆ ಹೋಗಿ ಊರಿಗೆ ಹಿಂತಿರುಗುತ್ತಿದ್ದರು. ಆಗ ಶಿಕಾರಿಪುರದಲ್ಲಿ ರಿಜ್ವಾನ್, ಹಬೀಬುಲ್ಲಾ, ಸುಹೈಲ್ ನಾಗೇಂದ್ರಪ್ಪನನ್ನು ಭೇಟಿಯಾಗಿದ್ದಾರೆ. ಲಾರಿಯೊಂದಕ್ಕೆ ಅವರನ್ನು ಹತ್ತಿಸಿಕೊಂಡು ಪುನೇದಹಳ್ಳಿ ಬಳಿ ಕರೆದೊಯ್ದು ಬಲವಂತಾಗಿ ವಿಷ ಬೆರೆಸಿದ ನೀರು ಕುಡಿಸಿದ್ದಾರೆ. ವಾಹನದಲ್ಲಿದ್ದ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಅದೇ ವಾಹನದಲ್ಲಿ ಮೃತದೇಹವನ್ನ ಕೊಂಡೊಯ್ದು ರಸ್ತೆ ಪಕ್ಕದಲ್ಲಿ ನಿರ್ಮಾಣ ಹಂತದ ಕಾಲುವೆಗೆ ಬಿಸಾಡಿ ಹೋಗಿದ್ದರು.
ವಿಚಾರಣೆ ವೇಳೆ ಬಾಯಿಬಿಟ್ಟರು
ನಾಗೇಂದ್ರಪ್ಪನ ಅನುಮಾನಾಸ್ಪದ ಸಾವಿನ ಕುರಿತು ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ವಿಚಾರಣೆ ಸಲುವಾಗಿ ನಾಗೇಂದ್ರಪ್ಪನ ಮಗ ಮಂಜುನಾಥನನ್ನು ಶಿಕಾರಿಪುರ ನಗರ ಠಾಣೆಗೆ ಕರೆಯಿಸಲಾಗಿತ್ತು. ಈ ವೇಳೆ ಮಂಜುನಾಥ ಸುಪಾರಿ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ.
ಈಗ ಭೋಗಿ ಗ್ರಾಮದ ಮಂಜುನಾಥ (42), ಆತನ ತಮ್ಮ ಬೆಂಗಳೂರು ಕೆ.ಎಸ್.ಆರ್.ಪಿ 4ನೇ ಬೆಟಾಲಿಯನ್ ಹೆಡ್ ಕಾನ್ಸ್ ಟೇಬಲ್ ಉಮೇಶ (40), ಭೋಗಿ ಗ್ರಾಮದ ಆಟೋ ಚಾಲಕ ರಿಜ್ವಾನ್ ಅಹ್ಮದ್ (24), ಶಿಕಾರಿಪುರದ ಹಬೀಬ್ ಉಲ್ಲಾ (28), ಸುಹೇಲ್ ಬಾಷಾ ಅಲಿಯಾಸ್ ಸುನಿ (30) ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಎರಡು ಲಾರಿಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಎ.ಎಸ್.ಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿ.ವೈ.ಎಸ್.ಪಿ ಶಿವಾನಂದ ಎನ್.ಮದರಖಂಡಿ, ಶಿಕಾರಿಪುರ ವೃತ್ತ ಸಿಪಿಐ ಜೆ.ಲಕ್ಷ್ಮಣ್, ಶಿರಾಳಕೊಪ್ಪ ಠಾಣೆ ಪಿಎಸ್ಐ ಮಂಜುನಾಥ ಎನ್.ಕುರಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ – ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಎಎಸ್ಐ ಮಲ್ಲೇಶಪ್ಪ, ಸಿಬ್ಬಂದಿ ಶಿವಕುಮಾರ್.ಬಿ, ಮಹಾಂತೇಶ ಎಂ.ಎಂ, ಸಂತೋಷ್, ಶಿಕಾರಿಪುರ ನಗರ ಠಾಣೆಯ ಅಶೋಕ್.ಪಿ, ಶಿಕಾರಿಪುರ ಉಪ ವಿಭಾಗದ ಮಾರುತಿ.ಬಿ, ಸಲ್ಮಾನ್ ಖಾನ್ ಹಾಜಿ, ಕಾರ್ತಿಕ್, ಶಿಕಾರಿಪುರ ಗ್ರಾಮಾಂತರ ಠಾಣೆಯ ಹಜರತ್ ಅಲಿ, ಪ್ರಶಾಂತ್, ಶಿವಮೊಗ್ಗ ಎ.ಎನ್.ಸಿ ಘಟಕದ ಗುರುರಾಜ್.ಜಿ, ಇಂದ್ರೇಶ್ ಜಿ, ವಿಜಯಕುಮಾರ್ ತನಿಖೆಯಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422