ಭದ್ರಾವತಿ: ಹಣದ ನೆರವಿನ ಆಮಿಷವೊಡ್ಡಿ ಮನೆಗೆ ಕರೆಸಿಕೊಂಡು ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಭದ್ರಾವತಿಯ ಮೂವರು ಮಹಿಳೆಯರಿಗೆ (women) ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.61 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಭದ್ರಾವತಿ ನಗರದ ನಿವಾಸಿಗಳಾದ ಚಂದ್ರಕಲಾ, ಎಸ್.ಶಿಲ್ಪಾ ಹಾಗೂ ಕವಿತಾ ಶಿಕ್ಷೆಗೆ ಒಳಗಾದವರು. 2021ರ ಡಿಸೆಂಬರ್ 24ರಂದು ಭದ್ರಾವತಿಯ ಮನೆಯೊಂದರ ಮೇಲೆ ದಾಳಿ ಮಾಡಿದ್ದ ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದರು. ಈ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಠಾಣೆಯ ಇನ್‌ಸ್ಪೆಕ್ಟರ್ ಇ.ಒ.ಮಂಜುನಾಥ್ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಆರೋಪ ದೃಢಪಟ್ಟ ಕಾರಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?






