ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 NOVEMBER 2023
SHIMOGA : ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (KDP Meeting) ನಡೆಯಿತು. ಸಭೆಯಲ್ಲಿ ಜಿಲ್ಲೆಯ ಅಭಿವೃದ್ದಿ ಕುರಿತು ನಡೆದ ಪ್ರಮುಖ 8 ವಿಚಾರಗಳು ಇಲ್ಲಿವೆ.
ಏನೇನೆಲ್ಲ ಚರ್ಚೆಯಾಯ್ತು?
ವಿಷಯ 1 – ಮುಂದಿನ ವಾರ ಬರ ಪ್ರವಾಸ
ಬರದಿಂದ ಉಂಟಾಗಿರುವ ಬೆಳೆ ನಷ್ಟ ಮತ್ತು ಪರಿಹಾರ ವಿತರಣೆ ಮಾಡಬೇಕು ಎಂದು ಶಾಸಕ ಚನ್ನಬಸಪ್ಪ ಪ್ರಸ್ತಾಪಿಸಿದರು. ನಿಖರ ಮಾಹಿತಿ ಒಳಗೊಂಡ ವರದಿ ನೀಡಲು ನ.15ರಂದು ಕೊನೆ ದಿನ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಮುಂದಿನ ವಾರ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ವಿಷಯ 2 – ಬೀದಿ ನಾಯಿಗಳ ಹಾವಳಿ
ನಗರ, ಪಟ್ಟಣಗಳಲ್ಲಿ ವ್ಯಾಪಕವಾಗಿದ್ದ ಬೀದಿ ನಾಯಿ ಹಾವಳಿ ಈಗ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚಿಸಿದರು. ಸದ್ಯದಲ್ಲೆ ಪಾಲಿಕೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣ ತಿಳಿಸಿದರು.
ವಿಷಯ 3 – ಪಂಪ್‌ಸೆಟ್ ಸಂಪರ್ಕಕ್ಕೆ ದುಬಾರಿ ಶುಲ್ಕ
ಪಂಪ್‌ಸೆಟ್ ವಿದ್ಯುತ್ ಸಂಪರ್ಕಕ್ಕೆ ದುಬಾರಿ ಶುಲ್ಕ ವಿಧಿಸಿರುವ ಸರ್ಕಾರದ ಕ್ರಮ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ, ನಾಲ್ಕೈದು ರೈತರು ಸೇರಿ 20 ಸಾವಿರ ರೂ. ಶುಲ್ಕ ಪಾವತಿಸಿ ವಿದ್ಯುತ್ ಮಾರ್ಗ, ಟಿಸಿ ಹಾಕಿಸಿಕೊಳ್ಳುತ್ತಿದ್ದರು. ಈಗ ಲಕ್ಷಾಂತರ ರೂ. ಪಾವತಿಸಬೇಕಾಗಿದೆ. ಪಂಪ್ ಸೆಟ್‌ಗೆ ಸೋಲಾರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸಹ ಲಕ್ಷ ರೂ. ಕಟ್ಟಬೇಕು. ಇದು ರೈತರಿಗೆ ಹೊರೆಯಾಗಿದೆ. ಸರಕಾರ ವಿದ್ಯುತ್ ಶುಲ್ಕ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ವಿಷಯ 4 – ಮಳೆಗೆ ಮನೆ ಹಾನಿ, ಪರಿಹಾರವಿಲ್ಲ
ಮಳೆಯಿಂದ ಹಾನಿಗೊಳಗಾದ ಹಾಗೂ ಬಿದ್ದು ಹೋಗಿರುವ ಅಧಿಕೃತ ಮನೆಗಳಿಗೆ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಅನಧಿಕೃತ ಮನೆಗಳಿಗೆ ಸಹಾಯಧನ ದೊರೆಯುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು. ತೀರ್ಥಹಳ್ಳಿ ಭಾಗದಲ್ಲಿ ಇಂತಹ ಪ್ರಕರಣ ಹೆಚ್ಚು ವರದಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರಸ್ತಾಪಿಸಿದರು. ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ವಿಷಯ 5 – ಹಾವು, ನಾಯಿ ಕಡಿತಕ್ಕೆ ವಾರದಲ್ಲಿ ಔಷಧ
ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಔಷಧ ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಂತಹ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಔಷಧ ಇಲ್ಲದಿರುವ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಬೇಕು. ಒಂದು ವಾರದೊಳಗಾಗಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಡಾ.ರಾಜೇಶ್ ಸುರಗೀಹಳ್ಳಿ ಅವರಿಗೆ ಸೂಚಿಸಿದರು.
ವಿಷಯ 6 – ರಸ್ತೆಗಳ ಅಭಿವೃದ್ಧಿಗೆ ಕ್ರಮ
ಜಿಲ್ಲೆಯ ರಾಜ್ಯ ಸಂಪರ್ಕ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧ ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಕೈಗೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ಸಭೆಗೆ ತಿಳಿಸಿದರು.
ವಿಷಯ 7 – ರೇಷ್ಮೆ ಬೆಳೆಗೆ ಪ್ರೋತ್ಸಾಹ, ಮಾರುಕಟ್ಟೆ ಬೇಕು
ಜಿಲ್ಲೆಯಲ್ಲಿ ರೇಷ್ಮೆ ಕ್ಷೇತ್ರ ವಿಸ್ತರಣೆಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ವಿಶೇಷವಾಗಿ ಗಮನಹರಿಸಬೇಕು. ಚಾಕಿ ಸಾಕಾಣಿಕಾ ಕೇಂದ್ರ, ಹಿಪ್ಪುನೇರಳೆ ಪ್ರದೇಶಾಭಿವೃದ್ಧಿ, ರೈತರಿಗೆ ಸಹಾಯಧನ ಮುಂತಾದ ವಿಷಯ ಕುರಿತು ಆಸಕ್ತ ರೈತರಿಗೆ ಮಾಹಿತಿ ಒದಗಿಸಬೇಕು. ಬೆಳೆಗಾರರಿಗೆ ಪ್ರೋತ್ಸಾಹಿಸಬೇಕು. ಅಲ್ಲದೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಕುರಿತು ಮಾಹಿತಿ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಷಯ 8 – ಮತ್ತಷ್ಟು ವಿಷಯ ಚರ್ಚೆ
ಮಳೆ ಕೊರತೆಯಿಂದ ಮೀನು ಕೃಷಿಗೆ ಹಿನ್ನಡೆ. ಮೀನು ಕೃಷಿಕರಿಗೆ ಪರಿಹಾರ ವಿತರಿಸಬೇಕು. ಆಯುಷ್ ವಿಶ್ವವಿದ್ಯಾಲಯ ಮಂಜೂರಾಗಿದ್ದರು ಆಡಳಿತಾಧಿಕಾರಿ ನಿಯೋಜನೆ ಆಗಿಲ್ಲ. ಸಂಧ್ಯಾಸುರಕ್ಷ, ಅಂಗವಿಕಲ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಗೆ ಪೂರ್ಣ ಮಾಹಿತಿ ಒದಗಿಸದ ಅರ್ಜಿದಾರರು ಮಾಹಿತಿ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಶಾಸಕರಾದ ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.
ಇದನ್ನೂ ಓದಿ – ಬಾಕಿ ಸಾಲ 5 ಲಕ್ಷಕ್ಕೆ 1 ಕೋಟಿ ರೂ. ಬಡ್ಡಿ, ಕಂಗಾಲಾದ ರೈತ ಕುಟುಂಬ, ರೈತ ಸಂಘದಿಂದ ಬ್ಯಾಂಕ್ ಮುಂದೆ ಹೋರಾಟ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422