ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022
ಕೆಲಸ ಮುಗಿಸಿ ಬೈಕ್’ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ಸ್ಮಾರ್ಟ್ ಸಿಟಿ ಗುಂಡಿಯೊಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆತನ ಪ್ರಾಣ ಉಳಿದೆ.
ಕಳೆದ ರಾತ್ರಿ ಶಿವಮೊಗ್ಗದ ಜೈಲ್ ರಸ್ತೆಯ ಅನ್ನಪೂರ್ಣೇಶ್ವರಿ ಗ್ಯಾರೇಜ್ ಸಮೀಪ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಉಳಿಯಿತು ಪ್ರಾಣ
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ, ಲಕ್ಷ್ಮೀ ಟಾಕೀಸ್ ಕಡೆಯಿಂದ ಜೈಲ್ ರಸ್ತೆಗೆ ಪ್ರವೇಶಿಸಿದ್ದಾನೆ. ಬೀದಿ ದೀಪಗಳು ಇರದ ಕಾರಣ ಗುಂಡಿ ಇರುವುದು ಗೊತ್ತಾಗಿಲ್ಲ. ಸವಾರ ಗುಂಡಿಯ ಬಳಿಗೆ ಬರುತ್ತಿದ್ದಂತೆ ಅಪಾಯದ ಅರಿವಾಗಿದೆ. ಕೂಡಲೆ ಬೈಕಿನಿಂದ ಜಿಗಿದ್ದಾನೆ.
ಬೈಕ್ ನೇರವಾಗಿ ಗುಂಡಿಯೊಳಗೆ ಬಿದ್ದಿದೆ. ಸವಾರ ಗುಂಡಿಯಿಂದ ಮೇಲೆ ಜಿಗಿದುಕೊಂಡಿದ್ದಾನೆ. ಹಾಗಾಗಿ ಆತನ ಪ್ರಾಣ ಉಳಿದಿದೆ.
ಏನಿದು ಗುಂಡಿ? ಸವಾರನಿಗೇಕೆ ಗೊತ್ತಾಗಲಿಲ್ಲ?
ಒಎಫ್’ಸಿ ಕೇಬಲ್ ಅಳವಡಿಸಲು ರಸ್ತೆಯ ಒಂದು ಭಾಗದಲ್ಲಿ ಗುಂಡಿಗಳನ್ನು ತೆಗೆದು, ಕಾಂಕ್ರಿಟ್ ಹಾಕಲಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಗುಂಡಿಗಳನ್ನು ಹಾಗೆ ಬಿಡಲಾಗಿದೆ. ಈ ಗುಂಡಿ ಇರುವ ಕಡೆಯಲ್ಲಿ ಬೀದಿ ದೀಪ ಇಲ್ಲ. ಗುಂಡಿಯ ಮುಂದೆ ಬ್ಯಾರಿಕೇಡ್ ಅಥವಾ ಟೇಪ್ ಹಾಕಬೇಕು. ಗುತ್ತಿಗೆದಾರರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದನ್ನು ಮಾಡಿಲ್ಲ. ಹಾಗಾಗಿ ಬೈಕ್ ಸವಾರನಿಗೆ ರಾತ್ರಿ ಅಲ್ಲಿ ಗುಂಡಿ ಇರುವುದು ಗೊತ್ತಾಗಿಲ್ಲ.
ಬೈಕ್ ಮೇಲೆತ್ತಲು ಹರಸಾಹಸ
ಗುಂಡಿಗೆ ಬಿದ್ದ ಬೈಕ್ ಮೇಲೆತ್ತಲು ಹರಸಾಹಸ ಮಾಡಬೇಕಾಯ್ತು. ಬೀದಿ ದೀಪ ಇರದ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಮೊಬೈಲ್ ಫೋನ್ ಲೈಟುಗಳನ್ನು ಬೆಳಗಿಸಿ, ಬೈಕ್ ಮೇಲೆತ್ತುವ ಕಾರ್ಯ ನಡಸಿದರು. ಗುಂಡಿಯೊಳಗೆ ಸ್ಥಳೀಯರು, ಬೈಕ್ ಮೇಲೆತ್ತಿದರು. ತರಚಿದ ಗಾಯದ ನೋವಿನಲ್ಲಿದ್ದ ಬೈಕ್ ಸವಾರನಿಗೆ ಆರೈಕೆ ಮಾಡಿ ಕಳುಹಿಸಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಿಡಿಶಾಪ
ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಸ್ಮರ್ಟ್ ಸಿಟಿ ಅಧಿಕಾರಿಗಳ ವಿರುದ್ಧ, ಸ್ಥಳೀಯರು ಹಿಡಿಶಾಪ ಹಾಕಿದರು. ಕಾಮಗಾರಿ ವಿಳಂಬ, ಅವೈಜ್ಞಾನಿಕದ ಆರೋಪದ ನಡುವೆ, ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಕಾನೂನಿನ ಪಾಠ ಮಾಡುವ ಅಧಿಕಾರಿಗಳು, ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಬೇಕು, ಬ್ಯಾರಿಕೇಡ್ ಹಾಕಬೇಕು ಎಂಬ ನ್ಯಾಯಾಲಯದ ಸೂಚನೆಗಳನ್ನು ಪಾಲಿಸದಿರುವುದು ವಿಪರ್ಯಾಸ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200