ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 AUGUST 2023
SHIMOGA : ನಗರದ ಎಂಆರ್‌ಎಸ್ ವೃತ್ತದಲ್ಲಿ ಯುದ್ದ ಟ್ಯಾಂಕರ್ (Battle Tanker) ಸ್ಥಾಪನೆಗೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಸೇನೆಯ ಟಿ-55 ಮಾದರಿಯ ಯುದ್ದ ಟ್ಯಾಂಕರ್ ಶಿವಮೊಗ್ಗ ತಲುಪಿದೆ.
ಶಿವಮೊಗ್ಗಕ್ಕೆ ಬಂದಿರುವ ಯುದ್ದ ಟ್ಯಾಂಕರ್ (Battle Tanker) ಸಾಮಾನ್ಯದ್ದಲ್ಲ. ಯುದ್ದ ಭೂಮಿಯಲ್ಲಿ ಮುಂಚೂಣಿಯಲ್ಲಿ ನಿಂತು ಪಾಕಿಸ್ತಾನ ಸೇನೆ ವಿರುದ್ಧ ಹೋರಾಟ ನಡೆಸಿತ್ತು. ಈಗ ಯುವಕರಲ್ಲಿ ದೇಶಭಕ್ತಿ ಹೆಚ್ಚಿಸಿ, ಸೇನೆಯತ್ತ ಸೆಳೆಯುವ ಉದ್ದೇಶದಿಂದ ಇದನ್ನು ಶಿವಮೊಗ್ಗಕ್ಕೆ ತರಲಾಗುತ್ತಿದೆ. ಎಂಆರ್‌ಎಸ್ ವೃತ್ತದಲ್ಲಿ ಇದನ್ನು ಸ್ಥಾಪಿಸುವ ಯೋಜನೆ ಇದೆ.
ಟ್ಯಾಂಕರ್‌ನ ವಿಶೇಷತೆ ಏನು?
ಮಹಾರಾಷ್ಟ್ರದ ಪುಣೆಯ ಕಿರ್ಕಿ ಸೇನಾ ಕಂಟೋನ್ಮೆಂಟ್ ಬೋರ್ಡ್‌ನಿಂದ ಟಿ-55 ಮಾದರಿ ಯುದ್ದ ಟ್ಯಾಂಕರ್ ಅನ್ನು ಶಿವಮೊಗ್ಗಕ್ಕೆ ತರಲಾಗಿದೆ. ಟ್ಯಾಂಕರ್‌ನ ಇಂಜಿನ್ ಸೇರಿದಂತೆ ಎಲ್ಲ ಬಗೆಯ ಉಪಕರಣ ತೆಗೆದಿರಸಲಾಗಿದೆ. ಸದ್ಯ ಖಾಲಿ ಇರುವ ಈ ಟ್ಯಾಂಕರ್‌ನ ತೂಕ 36 ಸಾವಿರ ಕೆ.ಜಿ ಇದೆ. ರಷ್ಯಾ ದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ.
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆ ಬಯಸಿತು. ಈ ಸಂದರ್ಭ ಎರಡು ದೇಶಗಳ ಮಧ್ಯೆ ಯುದ್ದ ನಡೆಯಿತು. ಆಗ ಪಾಕಿಸ್ತಾನ ಸೇನೆಯ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಿದ್ದವು. ಹಾಗಾಗಿ ಭಾರತವು ಪಾಕಿಸ್ತಾನದ ಮೇಲೆ ಯುದ್ದ ಸಾರಿತು. ಈ ಯುದ್ದದಲ್ಲಿ ಭಾರತ ಜಯ ಗಳಿಸಿತು. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಈಗ ಶಿವಮೊಗ್ಗಕ್ಕೆ ಬರುತ್ತಿರುವ ಯುದ್ದ ಟ್ಯಾಂಕರ್ 1971ರ ಯುದ್ದದಲ್ಲಿ ಭಾಗವಹಿಸಿತ್ತು. ಪಾಕಿಸ್ತಾನದ ಟ್ಯಾಂಕರ್, ಸೇನಾ ನೆಲಗಳ ಮೇಲೆ ದಾಳಿ ನಡೆಸಿತ್ತು.
ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌ನ ಮಧ್ಯದಲ್ಲಿ ಯುದ್ದ ಟ್ಯಾಂಕರ್ ತಂದು ನಿಲ್ಲಿಸುವ ಕುರಿತು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆ ಒಂದು ಟ್ಯಾಂಕರ್ ಒದಗಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು. ಶಿವಮೊಗ್ಗದ ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಸಿ.ಎ.ಹಿರೇಮಠ, ಅಧಿಕಾರಿ ಮೇಜರ್ ಉದಯ್, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳ ಶ್ರಮದಿಂದ ಯುದ್ದ ಟ್ಯಾಂಕರ್ ಶಿವಮೊಗ್ಗಕ್ಕೆ ಬಂದಿದೆ.
ಎಂಆರ್‌ಎಸ್ ಸರ್ಕಲ್‌ನಲ್ಲಿ ಯುದ್ದ ಟ್ಯಾಂಕರ್ ಸ್ಥಾಪನೆಗೆ ಈ ಹಿಂದೆ ಪ್ರಯತ್ನವಾಗಿತ್ತು. 2021ರಲ್ಲಿ ಯುದ್ದ ಟ್ಯಾಂಕರ್ ರವಾನಿಸಲು ರಕ್ಷಣಾ ಇಲಾಖೆ ಸಿದ್ಧವಾಗಿತ್ತು. ಆದರೆ ಮಹಾನಗರ ಪಾಲಿಕೆಯ ಆಗಿನ ಕೆಲ ಅಧಿಕಾರಿಗಳು ನಿರಾಸಕ್ತಿಯಿಂದ ಟ್ಯಾಂಕರ್ ಹಿಂಪಡೆಯಲಾಗಿತ್ತು.
ಇದನ್ನೂ ಓದಿ – ಕೇಂದ್ರ ಸಚಿವರನ್ನು ಭೇಟಿಯಾದ ಶಿವಮೊಗ್ಗ ಸಂಸದ, ಮೆಕ್ಕೆಜೋಳ ಕುರಿತು ಮಹತ್ವದ ಮನವಿ, ಏನಿದೆ ಮನವಿಯಲ್ಲಿ?
ರಾಜ್ಯದ ವಿವಿಧೆಡೆ ಪ್ರಮುಖ ಸ್ಥಳಗಳಲ್ಲಿ ಈಗಾಗಲೆ ಯುದ್ದ ಟ್ಯಾಂಕರ್‌ಗಳನ್ನು ಇರಿಸಲಾಗಿದೆ. ಧರ್ಮಸ್ಥಳದ ಮ್ಯೂಸಿಯಂ, ಬೆಂಗಳೂರು ಮತ್ತು ಬೆಳಗಾವಿಯ ಪ್ರಮುಖ ಸ್ಥಳಗಳಲ್ಲಿ ಟ್ಯಾಂಕರ್ ಇರಿಸಲಾಗಿದೆ. ಈಗ ಶಿವಮೊಗ್ಗಕ್ಕೆ ಒಂದು ಟ್ಯಾಂಕರ್ ಬಂದಿದೆ. ಸದ್ಯದಲ್ಲೇ ಮೈಸೂರಿಗು ಯುದ್ದ ಟ್ಯಾಂಕರ್ ತಲುಪಲಿದೆ.
ಮೂರು ತಿಂಗಳಲ್ಲಿ ಬರುತ್ತೆ ಯುದ್ದ ವಿಮಾನ
ಇನ್ನು, ಯುದ್ದ ಟ್ಯಾಂಕರ್ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಲೈವ್.ಕಾಂಗೆ ಪ್ರತಿಕ್ರಿಯೆ ನೀಡಿದರು. ‘ಎಂಆರ್‌ಎಸ್ ಸರ್ಕಲ್‌ನಲ್ಲಿ ಯುದ್ದ ಟ್ಯಾಂಕರ್ ನಿಲ್ಲಿಸುವ ಕುರಿತು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಟ್ಯಾಂಕರ್ ಒದಗಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೆ. ಅದರಂತೆ ಟ್ಯಾಂಕರ್ ಬಂದಿದೆ. ಈಗ ಒಂದು ಯುದ್ದ ವಿಮಾನಕ್ಕೆ ಬೇಡಿಕೆ ಇಟ್ಟಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಅದು ಕೂಡ ಶಿವಮೊಗ್ಗಕ್ಕೆ ಆಗಮಿಸಲಿದೆ. ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಮೂಲಕ ಅಗ್ನಿವೀರರನ್ನು ನೇಮಿಸಿಕೊಳ್ಳುತ್ತಿದೆ. ಶಿವಮೊಗ್ಗದಲ್ಲಿ ರಕ್ಷಾ ವಿವಿಯನ್ನು ಸ್ಥಾಪಿಸಿದ್ದೇವೆ. ಟ್ಯಾಂಕರ್, ಯುದ್ದ ವಿಮಾನಗಳು ಯುವಕರು ಸೇನೆಗೆ ಸೇರಲು ಪ್ರೇರಣೆ ನೀಡಲಿದೆʼ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422