ಶಿವಮೊಗ್ಗ ಲೈವ್.ಕಾಂ | SHIMOGA | 8 ಏಪ್ರಿಲ್ 2020
ಇದು ರಾಷ್ಟ್ರೀಯ ವಿಪತ್ತು. ಪ್ರಧಾನಿ ಮೋದಿ ಮತ್ತು ಸರ್ಕಾರ ಕೈಗೊಂಡಿರುವ ಲಾಕ್’ಡೌನ್ ಅನ್ನು ಎಲ್ಲರು ಪಾಲಿಸಬೇಕು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಕೂಡ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಕರೋನ ವಿರುದ್ಧ ಹೋರಾಟ ಮುಂದುವರೆಸಲು ಲಾಕ್’ಡೌನ್ ಅವಧಿ ವಿಸ್ತರಣೆ ಅವಶ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕರೋನ ವಿರುದ್ಧ ಹೋರಾಟಕ್ಕೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ತುರ್ತು ಸಂದರ್ಭ ಜನರಿಗೆ ನೆರವು ಒದಗಿಸಲು ಸರ್ಕಾರ ಮುಂದಾಗಬೇಕು ಎಂದರು.
ಸರ್ವ ಪಕ್ಷಗಳ ಸಭೆ ಕರೆಯಬೇಕು
ಕರೋನ ಮತ್ತು ಹಸಿವು ಇವತ್ತಿನ ಸವಾಲು. ಇವುಗಳ ವಿರುದ್ಧ ಹೋರಾಟಕ್ಕೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ಹಸಿದವರಿಗೆ ನೆರವು ನೀಡಬೇಕು ಎಂದು ಕಿಮ್ಮನೆ ರತ್ನಾಕರ್ ಸಲಹೆ ನೀಡಿದರು.
ವೈದ್ಯಕೀಯ ಸೇರಿದಂತೆ ತುರ್ತು ಸಂದರ್ಭದಲ್ಲಿ ಜನರು ಹೊರಗೆ ಓಡಾಡಲು ಪಾಸ್ ಅವಶ್ಯಕತೆ ಇದೆ. ಪಾಸ್ ಪಡೆಯಲು ಜಿಲ್ಲೆಯ ಜನರು ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಿದೆ. ಲಾಕ್’ಡೌನ್ ವೇಳೆ ಜಿಲ್ಲಾಧಿಕಾರಿ ಕಚೇರಿವರೆಗೆ ಬರುವುದೇ ಕಷ್ಟ. ಕೂಡಲೇ ಈ ವ್ಯವಸ್ಥೆಯನ್ನು ಬದಲಾಯಿಸಬೇಕು. ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಸರ್ವ ಪಕ್ಷಗಳ ಸಭೆ ಕರೆದು, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಯೋಚಿಸಬೇಕಿದೆ ಎಂದು ಒತ್ತಾಯಿಸಿದರು.
ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಎಲ್ಲ ಪಕ್ಷಗಳು ನೆರವು ನೀಡಲು ಹೊರಡುತ್ತವೆ. ಕರೋನ ಸಂದರ್ಭ ಲಾಕ್’ಡೌನ ಇದೆ. ಈ ವೇಳೆ ಪಕ್ಷ ಸಂಘಟನೆಗಾಗಿ ಗುಂಪು ಕಟ್ಟಿಕೊಂಡು ಹೋಗಿ ನೆರವು ನೀಡಬಾರದು. ಹೀಗೆ ಮಾಡಿದರೆ ಲಾಕ್’ಡೌನ್’ಗೆ ಅರ್ಥವೆ ಇರುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಮಾಜಿ ಶಾಸಕ ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಯೋಗೇಶ್, ಕಾರ್ಪೊರೇಟರ್ ರಮೇಶ್ ಹೆಗ್ಡೆ, ಪ್ರಮುಖರಾದ ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]