ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 NOVEMBER 2024
ಶಿವಮೊಗ್ಗ : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ (Sudden Visit) ನೀಡಿದ್ದರು. ಈ ಸಂದರ್ಭ ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಆರೋಗ್ಯ ನಿರೀಕ್ಷಕರೊಬ್ಬರನ್ನು ಸಸ್ಪೆಂಡ್ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಸ್ಪಂದಿಸದೆ ಇದ್ದರೆ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.
ಸಹಾಯವಾಣಿ ಕೇಂದ್ರಕ್ಕೆ ಭೇಟಿ
ಮಹಾನಗರ ಪಾಲಿಕೆ ಆವರಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಭೈರತಿ ಸುರೇಶ್, ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ತೆರಳಿದರು. ರಿಜಿಸ್ಟರ್‌ನಿಂದ ಈ ಹಿಂದೆ ದೂರು ನೀಡಿದ್ದ ಸಾರ್ವಜನಿಕರೊಬ್ಬರ ನಂಬರ್ ಹುಡುಕಿ ಕರೆ ಮಾಡಿದರು. ‘ಸಮಸ್ಯೆ ಪರಿಹಾರವಾಗಿದೆಯೇʼ ಎಂದು ಪ್ರಶ್ನಿಸಿದರು. ‘ಚರಂಡಿ ಕಟ್ಟಿಕೊಂಡು 20 ದಿನವಾಗಿದೆ. ದೂರು ನೀಡಿದರು ಕ್ರಮ ಕೈಗೊಂಡಿಲ್ಲʼ ಎಂದು ಅವರು ಅಲವತ್ತುಕೊಂಡರು.
ಸಿಟ್ಟಾದ ಸಚಿವ ಬೈರತಿ ಸುರೇಶ್, ಆ ಭಾಗದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಎಂಬುವವರನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಕಮಿಷನರ್ ಕವಿತಾ ಯೋಗಪ್ಪನವರ್ ಅವರಿಗೆ ಸೂಚಿಸಿದರು. ಅಲ್ಲದೆ ಸಸ್ಪೆಂಡ್ ಮಾಡಿರುವ ಆದೇಶ ಪ್ರತಿಯನ್ನು ತಮಗೆ ವಾಟ್ಸಪ್ ಮಾಡುವಂತೆ ಆದೇಶಿಸಿದರು.
ಚರಂಡಿ ಬ್ಲಾಕ್ ಆಗಿರುವ ಕುರಿತು 20 ದಿನದ ಹಿಂದೆ ದೂರು ನೀಡಿದ್ದರು ಪರಿಹರಿಸಿಲ್ಲ. ಹಾಗಾಗಿ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಎಂಬುವವರನ್ನು ಸಸ್ಪೆಂಡ್ ಮಾಡಿದ್ದೇವೆ. ಕಮಿಷನರ್ ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಇದ್ದರೆ ಸಸ್ಪೆಂಡ್ ಮಾಡುವುದೋ, ವರ್ಗಾವಣೆ ಮಾಡುವುದೋ ಅಥವಾ ಬೇರೆ ಕ್ರಮ ಕೈಗೊಳ್ಳಬೇಕೊ ಎಂಬುದನ್ನು ನಿರ್ಧರಿಸಲಾಗುತ್ತದೆ.
ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಖಾತೆ ಮಾಡಿಕೊಡಲು ವಿಳಂಬ, ಖಡಕ್ ವಾರ್ನಿಂಗ್
ಇದೇ ವೇಳೆ ಹಿರಿಯ ನಾಗರಿಕರೊಬ್ಬರು ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಅಳಲು ತೋಡಿಕೊಂಡರು. ಈ ಬಗ್ಗೆ ಸಚಿವ ಬೈರತಿ ಸುರೇಶ್ ಕಂದಾಯ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ‘ಸರ್ವರ್ ಡೌನ್ʼ ಎಂಬ ಉತ್ತರ ಬಂತು. ‘ಆಗಸ್ಟ್‌ನಲ್ಲಿ ಕೊಟ್ಟ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ. ಆಗಿನಿಂದಲು ಸರ್ವರ್ ಸಮಸ್ಯೆಯನಾ?’ ಎಂದು ಸಿಟ್ಟಾದರು. ಇನ್ನೊಂದು ವಾರದಲ್ಲಿ ಖಾತೆಯಾಗಬೇಕು ಎಂದು ಸೂಚಿಸಿದರು. ಅಲ್ಲದೆ ಹಿರಿಯ ನಾಗರಿಕರಿಗೆ ತಮ್ಮ ಮೊಬೈಲ್ ನಂಬರ್ ಇರುವ ವಿಸಿಟಿಂಗ್ ಕಾರ್ಡ್ ಕೊಟ್ಟು, ಅಧಿಕಾರಿಗಳು ಮತ್ತೆ ವಿಳಂಬ ಮಾಡಿದರೆ ಕರೆ ಮಾಡಿ ಎಂದು ತಿಳಿಸಿದರು.
ಖಾತೆ ಮಾಡಿಕೊಡಲು ವಿಳಂಬ ಮಾಡಲಾಗುತ್ತಿದೆ. ಸರ್ವರ್ ಸಮಸ್ಯೆಯಾಗಿದೆಯಂತೆ. ಇದನ್ನು ಕೂಡಲೆ ಸರಿಪಡಿಸಿ ಖಾತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಆ ಅಧಿಕಾರಿಯನ್ನೂ ಸಸ್ಪೆಂಡ್ ಮಾಡುತ್ತೇನೆ. ಈ – ಸ್ವತ್ತು ಹೊಸದಾಗಿ ಅಪ್‌ಡೇಟ್ ಮಾಡಬೇಕಿದೆ. ಇನ್ನು ಎರಡ್ಮೂರು ವಾರದಲ್ಲಿ ಗೊಂದಲ ಬಗೆಹರಿಯಲಿದೆ.
ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ವಿರುದ್ಧ ಸಾರ್ವಜನಿಕರು ಸಚಿವ ಬೈರತಿ ಸುರೇಶ್ ಅವರಿಗೆ ದೂರು ಹೇಳಿ, ಮನವಿ ಸಲ್ಲಿಸಿದರು. ಎಲ್ಲವನ್ನು ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಮತ್ತೊಮ್ಮೆ ಪಾಲಿಕೆಗೆ ಭೇಟಿ ನೀಡಿ, ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಮಾಜಿ ಕಾರ್ಪೊರೇಟರ್‌ಗಳಾದ ಬಿ.ಎ.ರಮೇಶ್ ಹೆಗ್ಡೆ, ಧೀರರಾಜ ಹೊನ್ನವಿಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.
ಇದನ್ನೂ ಓದಿ » ಹೊಸನಗರದಲ್ಲಿ ಲೋಕಾಯುಕ್ತ ಪೊಲೀಸ್ ಬಲೆಗೆ ಎಪಿಪಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422