SHIMOGA NEWS, 10 OCTOBER 2024 : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯದ್ವಾ ತದ್ವ ವಾಹನಗಳ ಪಾರ್ಕಿಂಗ್‌ಗೆ (Parking) ಬ್ರೇಕ್ ಬಿದ್ದಿದೆ. ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಸುಖಾಸುಮ್ಮನೆ ವಾಹನಗಳನ್ನು ತಂದು ನಿಲ್ಲಿಸುವವರಿಗೆ ಕಡಿವಾಣ ಬಿದ್ದಿದೆ.
ಪಾರ್ಕಿಂಗ್‌ಗೆ ಕಟ್ಟಬೇಕು ಶುಲ್ಕ
ಈ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇಕಾಬೇಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದರು. ನೂರಾರು ದ್ವಿಚಕ್ರ ವಾಹನಗಳು ಸಾಲುಗಟ್ಟುತ್ತಿದ್ದವು. ಸಭೆಗಳಿಗೆ ಆಗಮಿಸುತ್ತಿದ್ದ ಅಧಿಕಾರಿಗಳ ಕಾರುಗಳ ನಿಲುಗಡೆಗೆ ಸ್ಥಳಾವಕಾಶ ಇರುತ್ತಿರಲಿಲ್ಲ. ಇದಕ್ಕೆ ಕಡಿವಾಣ ಹಾಕಲು ಡಿಸಿ ಆಫೀಸ್ ಕಾಂಪೌಂಡ್‌ನಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಸಾರ್ವಜನಿಕರು ಪಾರ್ಕಿಂಗ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
![]() |
ಈಗ ಹೇಗಿದೆ ಪಾರ್ಕಿಂಗ್ ವ್ಯವಸ್ಥೆ?
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಇಲ್ಲಿ ಕಾರುಗಳ ಪಾರ್ಕಿಂಗ್‌ಗೆ ಮಾತ್ರ ಸ್ಥಳ ಮೀಸಲಾಗಿದೆ. ಕೋರ್ಟ್‌ಗೆ ತೆರಳುವ ಮಾರ್ಗದಲ್ಲಿ ಇರುವ ಕಿರು ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಡಿಸಿ ಕಚೇರಿ ಹಿಂಭಾಗ ಅರಸ್ ವೆಜ್ ಹೊಟೇಲ್ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲೂ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್ ಶುಲ್ಕದ ಬ್ಯಾನರ್
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಾರ್ಕಿಂಗ್ ಶುಲ್ಕದ ಬ್ಯಾನರ್ ಅಳವಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 10 ರೂ., ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ 20 ರೂ. ಶುಲ್ಕ ನಿಗದಿಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಪಾರ್ಕಿಂಗ್‌ಗೆ ಅವಕಾಶ ಇರಲಿದೆ ಎಂದು ಬ್ಯಾನರ್‌ನಲ್ಲಿ ಪ್ರಕಟಿಸಲಾಗಿದೆ.
ತಗ್ಗಿದ ವಾಹನಗಳ ಸಂಖ್ಯೆ
ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿಯೇ ತಾಲೂಕು ಕಚೇರಿ, ಜಿಲ್ಲಾ ನ್ಯಾಯಲಯವಿದೆ. ವಿವಿಧ ಸರ್ಕಾರಿ ಕಚೇರಿಗಳು ಸನಿಹದಲ್ಲಿಯೇ ಇವೆ. ತಾಲೂಕು ಕಚೇರಿ ಅವರಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಈ ಮೊದಲೇ ಶುಲ್ಕ ನಿಗದಿಪಡಿಸಲಾಗಿದೆ. ಹಾಗಾಗಿ ಈ ಕಚೇರಿಗೆ ಬರುವವರು, ಕೋರ್ಟ್ ಆವರಣದಲ್ಲಿ ಪಾರ್ಕಿಂಗ್‌ಗೆ ಜಾಗ ಸಿಗದವರು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು. ಇದರಿಂದಾಗಿ ಅಧಿಕಾರಿಗಳ ವಾಹನಗಳಿಗೆ ಸ್ಥಳಾವಕಾಶ ಸಿಗದೆ ಮುಖ್ಯರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದರು. ಈಗ ಪಾರ್ಕಿಂಗ್ ಶುಲ್ಕ ವಿಧಿಸುತ್ತಿದ್ದಂತೆ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೊಠಡಿಯೊಳಗೆ ಗಂಡ, ಹೆಂಡತಿ Digital Arrest, ಏನಿದು?
ರಸ್ತೆಗೆ ಬಂದವು ಜನರ ವಾಹನಗಳು
ಪಾರ್ಕಿಂಗ್ ಶುಲ್ಕದಿಂದಾಗಿ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ವಾಹನಗಳ ಸಂಖ್ಯೆ ತಗ್ಗಿದೆ. ಆದರೆ ಕಚೇರಿಗೆ ಆಗಮಿಸುವ ಜನರು ಶುಲ್ಕದಿಂದ ತಪ್ಪಿಸಿಕೊಳ್ಳಲು ಮುಖ್ಯ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲೇ ದ್ವಿಚಕ್ರ ವಾಹನಗಳು, ಕಾರುಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಒಂದು ಸಮಸ್ಯೆಗೆ ಮುಕ್ತಿ ನೀಡಲು ಹೋಗಿ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ.
ಇನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ದುಬಾರಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣಪುಟ್ಟ ಕೆಲಸಕ್ಕೆಂದು ಹಳ್ಳಿಗಳಿಂದ ಬರುವವರು, ಐದತ್ತು ನಿಮಿಷದಲ್ಲಿ ಕೆಲಸ ಮುಗಿಸಿ ಹೊರಡುವವರಿಗೆ ಪಾರ್ಕಿಂಗ್ ಶುಲ್ಕ ಹೆಚ್ಚಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ರಥಯಾತ್ರೆ, ಯಾವ್ಯಾವ ದಿನ ಯಾವ್ಯಾವ ತಾಲೂಕಿನಲ್ಲಿ ಸಂಚರಿಸಲಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200