ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಪ್ರಮುಖ ಆಕರ್ಷಣೆಗಳಲ್ಲಿ ಮಾಲ್ಗುಡಿ ಮ್ಯೂಸಿಯಂ ಸೇರಿಕೊಂಡಿದೆ. ಪ್ರವಾಸಿಗರ ಪಾಲಿಗೆ ಮತ್ತೊಂದು ಚಿತ್ತಾಕರ್ಷಣೆಯ ಸ್ಥಳ. ಈ ಅದ್ಭುತ ಲೋಕ ಸೃಷ್ಟಿಸಿದ, ಶಂಕರ್ ನಾಗ್ ಆಪ್ತ, ಕಲಾವಿದ ಜಾನ್ ದೇವರಾಜ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲ್ವೆ ಇಲಾಖೆಯ ಕಚೇರಿಗಳನ್ನು ಅಲೆದರೂ, ಮನವಿ ಮಾಡಿದರೂ ಬಾಕಿ ಹಣ ಕೈಸೇರಿಲ್ಲ.
ಏನಿದು ಬಾಕಿ ಹಣ?
ಶಿವಮೊಗ್ಗದ ಅರಸಾಳು ಗ್ರಾಮದಲ್ಲಿರುವ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮಾಲ್ಗುಡಿ ಡೇಸ್ ಧಾರಾವಾಹಿ ಪ್ರತಿರೂಪದಂತಿರುವ ಮ್ಯೂಸಿಯಂನ ಕರ್ತೃ ಅಂತಾರಾಷ್ಟ್ರೀಯ ಕಲಾವಿದ ಜಾನ್ ದೇವರಾಜ್. ಇಂತಹ ಕಲಾವಿದನಿಗೆ, ರೈಲ್ವೆ ಇಲಾಖೆ ಮಾಡಿದ ಕೆಲಸಕ್ಕೆ ಹಣ ಕೊಡದೆ ಸತಾಯಿಸುತ್ತಿದೆ.
ಇದನ್ನೂ ಓದಿ | ಅರಸಾಳು ರೈಲ್ವೆ ನಿಲ್ದಾಣದ ಮಾಲ್ಗುಡಿ ಮ್ಯೂಸಿಯಂ ಪುನಾರಂಭಕ್ಕೆ ಡೇಟ್ ಫಿಕ್ಸ್
ನಟ, ನಿರ್ದೇಶಕ ಶಂಕರ್ನಾಗ್ ಅಭಿನಯ, ನಿರ್ದೇಶನದ ಮಾಲ್ಗುಡಿ ಡೇಸ್ 1986ರಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿ. ಆರ್.ಕೆ.ನಾರಾಯಣರ ಕಥೆಗೆ ಪೂರಕ ಸ್ಥಳ ಸಿಕ್ಕಿದ್ದೇ ಶಿವಮೊಗ್ಗ ದ ಆಗುಂಬೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ. ಅದರ ಎಪಿಸೋಡ್ನಲ್ಲಿ ಅರಸಾಳು ರೈಲ್ವೆ ನಿಲ್ದಾಣವನ್ನು ಬಳಸಿಕೊಳ್ಳಲಾಗಿತ್ತು. ಅದರ ಸವಿನೆನಪಿಗಾಗಿ ಹಾಗೂ ಪ್ರವಾಸೋದ್ಯಮ ಉತ್ತೇಜನ ದೃಷ್ಟಿಯಿಂದ ಸಂಸದ ಬಿ.ವೈ.ರಾಘವೇಂದ್ರ ಆಸಕ್ತಿ ಫಲವಾಗಿ ಮ್ಯೂಸಿಯಂ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
VIDEO REPORT
ಶಂಕರ್ನಾಗ್ ಆಪ್ತನೊಂದಿಗೆ ಒಪ್ಪಂದ
ಶಂಕರ್ನಾಗ್ ಒಡನಾಡಿ ಹಾಗೂ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದ ಜಾನ್ ದೇವರಾಜ್ ಅವರ ಜತೆ ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡು ಜವಾಬ್ದಾರಿ ವಹಿಸಿತು.
ತಕ್ಷಣ ಕೆಲಸ ಆರಂಭಿಸಿದ ಕಲಾವಿದ ಜಾನ್ ದೇವರಾಜ್ 120 ವರ್ಷ ಹಳೆಯ ಪಾಳುಬಿದ್ದ ಕಟ್ಟಡವನ್ನು ಪುನರ್ ಸ್ಥಾಪಿಸಿ, ಧಾರಾವಾಹಿಯಲ್ಲಿ ಬರುವ ನಾಲ್ಕು ಥೀಮ್ಗಳನ್ನು ಸೃಷ್ಟಿಸಿದ್ದಾರೆ. ಸುಮಾರು 1 ವರ್ಷ ಕಾಲ ಸ್ಥಳೀಯ ಕೂಲಿಗಾರರನ್ನೇ ಬಳಸಿಕೊಂಡು ಮ್ಯೂಸಿಯಂ ಪೂರ್ಣಗೊಳಿಸಿದರು. ಇದಾದ ಮೇಲೆ ಕಲಾವಿದನನ್ನು ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ.
ಬಾಕಿ ಕೊಡದೆ ಸತಾಯಿಸುತ್ತಿದೆ
ಮಾಲ್ಗುಡಿ ಡೇಸ್ ಮ್ಯೂಸಿಯಂ ಪುನರ್ ನಿರ್ಮಾಣಕ್ಕೆ ನೈಋತ್ಯ ರೈಲ್ವೆ ಇಲಾಖೆ (ಎಸ್ಡಬ್ಲೂಆರ್) ಅವರು ಕರೆದರು. ಅಲ್ಲಿ 120 ವರ್ಷದ ಕಟ್ಟಡದಲ್ಲಿ 31 ವರ್ಷಗಳ ಹಿಂದಿನ ದೃಶ್ಯವನ್ನು ಕಲೆಯಲ್ಲಿ ಅರಳಿಸಬೇಕಿತ್ತು. ಹೊಸ ಕಟ್ಟಡ ಬಂದ ಮೇಲೆ ಮೂಲ ನಿಲ್ದಾಣ ಕುಸಿದು ಬಿದ್ದ ಹಾಳಾಗಿತ್ತು. ಪುನರ್ ರಚನೆ ಮಾಡಲು ನನಗೆ ಆಹ್ವಾನ ನೀಡಿದ್ದರು. ಧಾರಾವಾಹಿಯ ಐದಾರು ದೃಶ್ಯ ಬೇಕು ಎಂದು ಹೇಳಿದ್ದರು. ಅದರಂತೆ ಸ್ವಾಮಿ ಮತ್ತು ಫ್ರೆಂಡ್ಸ್, ಭಾರತದಲ್ಲೇ ಮೊದಲ ಅಂಡರ್ ವಾಟರ್ ಶೂಟಿಂಗ್, ಮಿನಿ ರೈಲು, ಈಗಿನ ಕಾಲದ ಮಕ್ಕಳಿಗೆ ಮಲೆನಾಡಿನ ಪ್ರಾಣಿ ಪಕ್ಷಿಗಳ ಪರಿಚಯ ಮಾಡಿಸುವ ಕೆಲಸ ಮಾಡಿದ್ದೇನೆ. ಎಲ್ಲದಕ್ಕೂ ಸ್ಥಳೀಯರನ್ನೇ ಬಳಸಿಕೊಂಡಿದ್ದೇನೆ. 38 ಲಕ್ಷ ರೂ.ಗೆ ಒಪ್ಪಂದ ಆಗಿತ್ತು. ಅದರಲ್ಲಿ 22 ಲಕ್ಷ ನಾಲ್ಕು ಕಂತಿನಲ್ಲಿ ಕೊಡಲಾಗಿದೆ. ಕೊನೆಯ ಕಂತು ಈವರೆಗೆ ಕೊಟ್ಟಿಲ್ಲ. ಕಲಾವಿದನಾಗಿ ಎಲ್ಲ ಕಡೆ ಅಲೆಯೆಬೇಕಾದ ಸಂದರ್ಭ ಬಂತು ಎನ್ನುತ್ತಾರೆ ಕಲಾವಿದ ಜಾನ್ ದೇವರಾಜ್.
ನನಗೆ ತುಂಬಾ ಅವಮಾನವಾಗಿದೆ
ಕಲಾವಿದನನ್ನು ಕಾಂಟ್ರಾಕ್ಟರ್ ರೀತಿ ನಡೆಸಿಕೊಂಡಿದ್ದಾರೆ. ಈವರೆಗೂ ನನಗೆ ಯಾಕೆ ಹಣ ಕೊಡಲು ಆಗುತ್ತಿಲ್ಲ ಎಂದು ಹೇಳುತ್ತಿಲ್ಲ. 31 ವರ್ಷ ನಂತರ ಕರ್ನಾಟಕ, ಕನ್ನಡದ ಜನತೆಗೆ ಹಾಗೂ ಗೆಳೆಯ ಶಂಕರ್ನಾಗ್ ನೆನಪಿಗೆ ಇಷ್ಟೆಲ್ಲ ಮಾಡಿದೆ. ಕೇಳಿದ್ರೆ ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎನ್ನುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ನನಗೆ ಅವಮಾನವಾಗಿದೆ. ನನ್ನ ಒಪ್ಪಂದದ ಪ್ರಕಾರ ಹಣ ಕೊಡಿ ಎಂಬುದಷ್ಟೇ ನನ್ನ ಬೇಡಿಕೆ ಅನ್ನುತ್ತಾರೆ ಜಾನ್ ದೇವರಾಜ್.
ಶಂಕರ್ ಆಸೆ ಈಡೇರಿತು
ಶಂಕರ್ನಾಗ್ ಸಾಯುವ ಹಿಂದಿನ ದಿನ ನನ್ನನ್ನು ಕರೆದು ನನ್ನ ಪ್ರತಿಮೆ ಮಾಡು ಎಂದಿದ್ದರು. ಅದಾದ ಐದಾರು ಗಂಟೆಯಲ್ಲಿ ಆಘಾತಕಾರಿ ಸುದ್ದಿ ಕೇಳಿದೆ. ಅಂದಿನಿಂದ ಪ್ರತಿಮೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಶಂಕರ್ನಾಗ್ ಪ್ರತಿಮೆ ಮಾಡಲು ಪ್ಲಾನ್ನಲ್ಲಿ ಇರಲಿಲ್ಲ. ನನ್ನ ಸ್ವಂತ ಆಸಕ್ತಿಯಿಂದ ಮಾಡಿದ್ದೇನೆ. ಅದಕ್ಕೆ ನಾಲ್ಕು ಲಕ್ಷ ಖರ್ಚಾಗಿದೆ. ಅದಕ್ಕೂ ಹಣ ಕೊಟ್ಟಿಲ್ಲ. ಕನಿಷ್ಠ ಪಕ್ಷ ಮೆಟಿರೀಯಲ್ ಹಣ ಕೊಡಿ ಎಂದರೂ ಕೊಟ್ಟಿಲ್ಲ ಎನ್ನುತ್ತಾರೆ ಜಾನ್ ದೇವರಾಜ್.
ಮಾಲ್ಗುಡಿ ಮ್ಯೂಸಿಯಂನಿಂದ ರೈಲ್ವೆ ಇಲಾಖೆಗೆ ಒಳ್ಳೆಯ ಹೆಸರು ಬಂದಿದೆ. ಅದಕ್ಕೆ ಕಾರಣರಾದ ಕಲಾವಿದನಿಗೆ ಬಾಕಿ ಹಣ ಕೊಡದೆ ಸತಾಯಿಸುವು ಇಲಾಖೆಗೆ ಶೋಭೆಯಲ್ಲ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200