ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜೂನ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇನ್ಮುಂದೆ ಮುತ್ತಿನ ನಗರಿಯಲ್ಲಿ ಸಿಗಲಿದೆ ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಹಾಲು. ಹೈದರಾಬಾದ್‍ಗೆ ಹರಿಯಲಿದ ಶಿವಮೊಗ್ಗದ ಸಾವಿರಾರು ಲೀಟರ್ ಕ್ಷೀರ.
ಎಲ್ಲವು ಅಂದುಕೊಂಡಂತೆ ಆದರೆ ಶಿವಮೊಗ್ಗ ಹಾಲು ಒಕ್ಕೂಟದ ಸಾವಿರಾರು ಲೀಟರ್ ಹಾಲು, ಹೈದರಾಬಾದ್‍ಗೆ ಹೋಗಲಿದೆ. ಮುತ್ತಿನ ನಗರಿಯ ಪ್ರತಿ ಅಂಗಡಿಯಲ್ಲೂ ಶಿವಮೊಗ್ಗದ ಹಳ್ಳಿ ಹಳ್ಳಿಯ ರೈತರ ಮನೆಯ ಹಾಲು ಮಾರಾಟವಾಗಲಿದೆ. ಇದಕ್ಕಾಗಿ ಶಿವಮೊಗ್ಗ ಹಾಲು ಒಕ್ಕೂಟ ಪ್ಲಾನ್ ಸಿದ್ಧಪಡಿಸಿಕೊಂಡಿದೆ.
ಎಷ್ಟು ಲೀಟರ್ ಹಾಲು ಹೋಗಲಿದೆ?
ಶಿವಮೊಗ್ಗ ಹಾಲು ಒಕ್ಕೂಟದಿಂದ 60 ಸಾವಿರ ಲೀಟರ್ ಹಾಲನ್ನು ಹೈದರಾಬಾದ್‍ನಲ್ಲಿ ಮಾರಾಟ ಮಾಡಲು ರಾಜ್ಯ ಹಾಲು ಒಕ್ಕೂಟ ಅವಕಾಶ ಕಲ್ಪಿಸಿದೆ ಅಂತಾ ಶಿಮುಲ್ ಅಧ್ಯಕ್ಷ ಆನಂದ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ. ಹಾಲು ಮಾರಾಟಕ್ಕೆ ಹೈದರಾಬಾದ್‍ನಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ.
ಶಿಮುಲ್ ಹೆಸರಲ್ಲೇ ಹಾಲು ಸೇಲ್
ಹೈದರಾಬಾದ್‍ನಲ್ಲಿ ಖಾಸಗಿ ಹಾಲಿನ ಡೈರಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಯೇ ಪ್ಯಾಕಿಂಗ್ ಮಾಡಿನ ನಂದಿನಿ ಬ್ರಾಂಡ್‍ನೊಂದಿಗೆ, ಶಿವಮೊಗ್ಗ ಹಾಲು ಒಕ್ಕೂಟದ ಲೇಬಲ್‍ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಮಾರ್ಕೆಟಿಂಗ್ ಸಿದ್ಧತೆ ಕೂಡ ನಡೆಯುತ್ತಿದೆ. ಕೆಲವೇ ದಿನದಲ್ಲಿ ಶಿವಮೊಗ್ಗದ ಹಾಲು ಹೈದರಾಬಾದ್ ಮಾರುಕಟ್ಟೆಯಲ್ಲಿ ಕಾಣಸಿಗಲಿದೆ.
ಪ್ರತಿದಿನ ಡೈರಿಗೆ ಆರು ಲಕ್ಷ ಲೀಟರ್ ಹಾಲು
ಶಿಮುಲ್ ಡೈರಿಗೆ ಪ್ರತಿದಿನ ಆರು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಬರುತ್ತಿದೆ. ಲಾಕ್ ಡೌನ್‍ಗೂ ಮೊದಲು ನಾಲ್ಕು ಮುಕ್ಕಾಲು ಲಕ್ಷದಿಂದ ಐದು ಲಕ್ಷ ಲೀಟರ್ ಹಾಲು ಮಾತ್ರ ಪೂರೈಕೆಯಾಗುತ್ತಿತ್ತು. ಲಾಕ್ ಡೌನ್ ಬೆನ್ನಿಗೆ ಹಾಲಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈಗ 6.30 ಲಕ್ಷ ಲಿಟರ್ ಹಾಲು ಬರುತ್ತಿದೆ. ಈ ಪೈಕಿ 2.30 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ನಾಲ್ಕು ಲಕ್ಷ ಲೀಟರ್ ಹಾಲು ಅಧಿಕವಾಗಿ ಉತ್ಪಾದನೆ ಆಗುತ್ತಿದೆ.
ಏನಾಗುತ್ತಿದೆ ಅಧಿಕ ಹಾಲು?
ನಾಲ್ಕು ಲಕ್ಷ ಲೀಟರ್ ಅಧಿಕ ಹಾಲಿನ ಪೈಕಿ, ಒಂದು ಲಕ್ಷ ಲೀಟರ್ ಹಾಲು ಮದರ್ ಡೈರಿಗೆ ಹೋಗುತ್ತಿದೆ. ಉಳಿದ ಮೂರು ಲಕ್ಷ ಲೀಟರ್ ಹಾಲು ಚನ್ನರಾಯಪಟ್ಟಣ, ರಾಮನಗರ, ಧಾರವಾಡ ಮತ್ತು ಮದರ್ ಡೈರಿಗೆ ಪೂರೈಕೆಯಾಗುತ್ತಿದ್ದು, ಅಲ್ಲಿ ಹಾಲನ್ನು ಹಾಲಿನ ಪುಡಿ ಮತ್ತು ಇತರೆ ಉತ್ಪನ್ನಗಳ ತಯಾರಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ರೈತರ ಆದಾಯಕ್ಕೆ ಬರೆ ಎಳೆದ ಲಾಕ್‍ಡೌನ್
ಲಾಕ್ ಡೌನ್ ಪರಿಣಾಮ ಮನೆಗಳಲ್ಲಿ ಹಾಲು ಖರೀದಿ ಎಂದಿನಂತಿದೆ. ಆದರೆ ಹೊಟೇಲ್‍ಗಳಲ್ಲಿ ಖರೀದಿ, ಮದುವೆ, ಸಮಾರಂಭಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾಲು ಖರೀದಿ ಇಲ್ಲವಾಗಿದೆ. ಇದರಿಂದ ಹಾಲು ಮಾರಾಟ ಪ್ರಮಾಣ ಕಡಿತವಾಗಿದೆ. ಇದೇ ಕಾರಣಕ್ಕೆ ಉತ್ಪಾದಕರಿಗೆ ನೀಡುತ್ತಿದ್ದ ಹಣದ ಪ್ರಮಾಣದಲ್ಲಿಯು ಕುಸಿತ ಕಂಡಿದೆ.
‘ನಾವು ಅಧಿಕಾರಕ್ಕೆ ಬಂದು 13 ತಿಂಗಳಲ್ಲಿ ಮೊದಲಿಗೆ 2.50 ರೂ., ಎರಡನೇ ಬಾರಿ 2.50., ಬಳಿಕ 1.70 ರೂ., ಮತ್ತೊಮ್ಮೆ 1 ರೂ. ಹೆಚ್ಚಳ ಮಾಡಿ ಉತ್ಪಾದಕರಿಗೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಶಿಮುಲ್‍ನಲ್ಲಿ ಮಾತ್ರವೇ ಅತಿ ಹೆಚ್ಚು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರತಿ ಲೀಟರ್‍ಗೆ 29.70 ರೂ. ನೀಡಲಾಗುತ್ತಿದೆ’ ಅಂತಾ ಶಿಮುಲ್ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ. ಆದರೆ ಲಾಕ್ ಡೌನ್ ಪರಿಣಾಮದಿಂದ ಎರಡು ರುಪಾಯಿ ಪ್ರೋತ್ಸಾಹ ಧನ ಕಡಿತವಾಗಿದೆ.
ಹೈದರಾಬಾದ್‍ಗೆ ಮಾರುಕಟ್ಟೆ ವಿಸ್ತರಣೆ ಆಗುವುದರಿಂದ ಶಿಮುಲ್‍ಗೆ ಹಾಲು ಪೂರೈಸುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದ ರೈತರಿಗೆ ಮತ್ತಷ್ಟು ಅನುಕೂಲ ಆಗಲಿದೆ ಎಂಬ ನಿರೀಕ್ಷೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]