ಶಿವಮೊಗ್ಗದ ಲೈವ್.ಕಾಂ | TUMARI NEWS | 30 ಡಿಸೆಂಬರ್ 2021
ಸಿಗಂದೂರು ಸಮೀಪದ ತುಮರಿ ಸರ್ಕಾರಿ ಶಾಲೆಯ ಭವಿಷ್ಯಕ್ಕೆ ಅಗತ್ಯವಾಗಿರುವ ಭೂಮಿ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾಗರ ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಹೇಳಿದರು.
ಹಿರಿಯ ಪಾಥಮಿಕ ಶಾಲೆಯ ಜಾಗದ ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಜಾಗ ಮಂಜೂರಾತಿ ಭಾಗವಾಗಿ ಬುಧವಾರ ತುಮರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಹೋರಾಟ ಸಮಿತಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಜತೆ ಚರ್ಚೆ ನಡೆಸಿ ಮಾತನಾಡಿ, ಶಾಲಾ ಕಟ್ಟಡ ಮತ್ತು ಕ್ರೀಡಾಂಗಣ ಹೊಂದಿರುವ ತುಮರಿ ಗ್ರಾಮದ ಸರ್ವೆ ನಂಬರ್ ಪಕ್ಕಾ ಪೋಡಿ ಅಂತಿಮವಾಗದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈ ಕಾರಣದಿಂದ ಸ್ಥಳ ಪರಿಶೀಲನೆಗೆ ಬಂದಿದ್ದು ಶಾಲೆಗೆ ಅಗತ್ಯ ಭೂಮಿ ಸಿಗಲಿದೆ ಎಂದು ಭರವಸೆ ನೀಡಿದರು.
‘ಭವಿಷ್ಯದ ಯೋಜನೆಗೆ ತೊಡಕು’
ಬಿಇಒ ಕೆ.ಆರ್.ಬಿಂಬಾ ಮಾತನಾಡಿ, ಶಾಲೆ ಸ್ಥಳದಲ್ಲಿಯೇ ಭೂ ಮಂಜೂರಾತಿಗೆ ಹಲವು ಬಾರಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಶಾಲೆಯಿಂದ ದೂರ, ಅನನುಕೂಲ ಇರುವ ಪ್ರದೇಶದಲ್ಲಿ ಜಾಗ ಮಂಜೂರಾತಿ ಮಾಡಿದರೆ ಭವಿಷ್ಯದ ಯೋಜನೆಗಳಿಗೆ ತೊಡಕಾಗಲಿದೆ. ಗ್ರಾಮಸ್ಥರ ಬೇಡಿಕೆಯಂತೆ ಕ್ರೀಡಾಂಗಣ ಮತ್ತು ಶಾಲಾ ಕಟ್ಟಡ ಇರುವ ಜಾಗವನ್ನೇ ಮಂಜೂರು ಮಾಡಬೇಕು ಎಂದು ಹೇಳಿದರು.
‘ಶಾಲೆ, ಕ್ರೀಡಾಂಗಣ ಬಿಟ್ಟುಕೊಡಲು ಸಾಧ್ಯವೇ?’
ಹೋರಾಟ ಸಮಿತಿ ಪ್ರಮುಖ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ನೂರು ವರ್ಷದ ಶಾಲೆಗೆ ಈವರೆಗೂ ಭೂ ಮಂಜೂರಾತಿ ಆಗಿಲ್ಲ ಎನ್ನುವ ಬೇಸರದ ನಡುವೆ ಶಾಲೆಯ ಆಟದ ಮೈದಾನ ಮತ್ತು ಕಟ್ಟಡ ಇರುವ ಜಾಗವೂ ತಹಸೀಲ್ದಾರ್ ಖಾತೆ ಬದಲಾವಣೆ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ವ್ಯಕ್ತಿಗೆ ಭೂಮಿ ಪಡೆಯುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಶಾಲೆ, ಕ್ರೀಡಾಂಗಣ ಬಿಟ್ಟುಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ
ತುಮರಿ ಸೊಸೈಟಿ ಅಧ್ಯಕ್ಷ ಎಚ್. ಎಲ್.ಮಹಾಬಲೇಶ್ವರ ಮಾತನಾಡಿ, ಶಾಲೆಯ ಕ್ರೀಡಾಂಗಣವನ್ನು ಸರ್ಕಾರ ವಿವಿಧ ಅನುದಾನ ಬಳಸಿ ನಿರ್ಮಾಣ ಮಾಡಿದೆ. ಹೀಗಾಗಿ ಖಾಸಗಿಯವರಿಗೆ ಪರಭಾರೆ ಮಾಡಬಾರದು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯ ಶ್ರೀಧರಮೂರ್ತಿ ಕಳಸವಳ್ಳಿ ಮಾತನಾಡಿ, ಪದೇಪದೆ ನಕಾಶೆ ಬದಲಾವಣೆಯಾಗಿದ್ದು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಇಒ ಪುಷ್ಪಾ ಎಂ. ಕಮ್ಮಾರ್, ಕಂದಾಯ ನಿರೀಕ್ಷಕ ಮಂಜುನಾಥ, ಶಿಕ್ಷಣ ಇಲಾಖೆಯ ಶೇಖರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಲೋಕಪಾಲ್ ಜೈನ್, ಕ್ರೀಡಾಂಗಣ ಉಳಿಸಿ ಹೋರಾಟ ಸಮಿತಿ ಸಂಚಾಲಕ ಕೃಷ್ಣ ಭಂಡಾರಿ, ಸಂತೋಷ್, ಗ್ರಾಪಂ ಉಪಾಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಸದಸ್ಯರಾದ ನಾಗರಾಜ್, ಜಿ.ಪಿ.ಶ್ರೀನಿವಾಸ್ ಇದ್ದರು.